ಯಲ್ಲಾಪುರ: ಯಲ್ಲಾಪುರ ತಾಲ್ಲೂಕಿನ ಮೂರನೇ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಶ್ರೀಧರ ಬಳಗಾರ ತಾಲ್ಲೂಕಿನ ಬಳಗಾರಿನವರು. ಪ್ರಸ್ತುತ ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಳಗಾರ್ ಹಲವಾರು ಕಥೆಗಳನ್ನು ರಚಿಸುವ ಮೂಲಕ ರಾಜ್ಯಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ‘ಅಧೋಮುಖ, ‘ಮುಖಾಂತರ’, ‘ಇಳೆ ಎಂಬ ಕನಸು’, ‘ಒಂದು ಫೋಟೋದ ನೆಗೆಟಿವ್’ ಬಳಗಾರರ ಕಥಾ ಸಂಕಲನಗಳು. `ಕೇತಕಿಯ ಬನ’ ಎಂಬ ಕಾದಂಬರಿ, ‘ರಥ ಬೀದಿ’ ಮತ್ತು ‘ಕಾಲ ಪಲ್ಲಟ’ ಮುಂತಾದ ಅಂಕಣ ಬರಹಗಳನ್ನೂ ಬರೆದಿದ್ದಾರೆ. ಬಳಗಾರ ಅವರ ಕೆಲವು ಕಥೆಗಳು ಇಂಗ್ಲಿಷ್, ತಮಿಳು ಮತ್ತು ಉರ್ದು ಭಾಷೆಗಳಿಗೆ ಅನುವಾದಗೊಂಡಿವೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಗಳ ಪದವಿ ಪಠ್ಯಕ್ಕೂ ಸೇರ್ಪಡೆಯಾಗಿವೆ.

ಶ್ರೀಧರ ಬಳಗಾರ ಅವರ ಸಾಹಿತ್ಯಕ್ಕೆ ಹಲವು ಪ್ರಶಸ್ತಿಗಳು ಅವರ ಮುಡಿಗೇರಿವೆ. ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಯು.ಆರ್.ಅನಂತಮೂರ್ತಿ ಕಥಾ ಪ್ರಶಸ್ತಿ, ದ.ರಾ.ಬೇಂದ್ರೆ ಸ್ಮಾರಕ ಸಾಹಿತ್ಯ ಪುರಸ್ಕಾರ, ವಾರಂಬಳ್ಳಿ ಪ್ರತಿಷ್ಠಾನ ಕಥಾ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಡಾ.ಬೆಸಗರಹಳ್ಳಿ ರಾಮಣ್ಣ ಸಾಹಿತ್ಯ ಪ್ರಶಸ್ತಿ, ಅಜೂರು ಪುಸ್ತಕ ಪ್ರಶಸ್ತಿ ಮತ್ತು ಅಮ್ಮ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಗಿದೆ.ಇಂತಹ ಸಾಹಿತ್ಯ ಲೋಕದ ಪ್ರತಿಭೆಯನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ ಸಾಹಿತ್ಯದ ಕುರಿತು ಹಂಚಿಕೊಂಡದ್ದು ಹೀಗೆ.

* ಪ್ರತಿ ವರ್ಷ ಸಾಹಿತ್ಯ ಸಮ್ಮೇಳನವನ್ನು ಜರುಗಿಸುವ ಔಚಿತ್ಯ ಹಾಗೂ ಈ ಬಾರಿ ಯಲ್ಲಾಪುರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಬಗ್ಗೆ ನಿಮ್ಮ ಅನಿಸಿಕೆ ಯೇನು?
ವಿಶಾಲವಾದ ಜಾಗತಿಕ ಹಿನ್ನೆಲೆಯಲ್ಲಿ ಸ್ಥಳೀಯ ಸತ್ವವನ್ನು ಜಾಗ್ರತಗೊಳಿಸಿಕೊಳ್ಳಲು ಸಮ್ಮೇಳನ ಒಂದು ನೆಪ. ಗರ್ಭಗುಡಿಯಲ್ಲಿರುವ ದೇವರು ಜಾತ್ರೆಯ ತೇರಿನಲ್ಲಿ ಜನರ ದರ್ಶನಕ್ಕೆ ಸಾರ್ವಜನಿಕರ ಬೀದಿಗೆ ಬರುವ ಹಾಗೆ. ಆದರೆ ಸಾಹಿತ್ಯ ಎಲ್ಲವನ್ನೂ ಒಳಗೊಳ್ಳುತ್ತ ತನ್ನ ಅಸ್ಮಿತೆಯನ್ನು ಕಳೆದುಕೊಳ್ಳದ ಹಾಗೆ ಎಚ್ಚರ ನೀಡಲು ಸಮ್ಮೇಳನದ ಅಗತ್ಯವಿದೆ.

ಸಮ್ಮೇಳನದ ಸರ್ವಾಧ್ಯಕ್ಷರಾದ ಬಗ್ಗೆ ಸಂತೋಷದ ಜೊತೆಗೆ ಸಂಕೋಚವೂ ಆಗಿದೆ. ಅಧ್ಯಕ್ಷ ಸ್ಥಾನ ಪ್ರಾತಿನಿಧಿಕವಾದದ್ದೇ ವಿನಃ ಪ್ರಭುತ್ವದ್ದಲ್ಲ. ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುತ್ತ ಪರಸ್ಪರ ಸಹನೆಯಿಂದ ಅರಿತುಕೊಳ್ಳಲು ಸಾಧ್ಯವಾಗುವುದರಿಂದ, ಕನ್ನಡದ ಪರಂಪರೆಯ ಸರಪಳಿಗೆ ಒಂದು ಸ್ಥಳೀಯ ಕೊಂಡಿಯಾಗಿ ಭಾಗಿಯಾಗಲು ಅವಕಾಶವಿರುವುದರಿಂದ ಸಂತೋಷವಾಗಿದೆ. ಸಾಹಿತ್ಯದ ಮನೆಯಲ್ಲಿ ಅಧ್ಯಕ್ಷರಾಗಲು ಅರ್ಹರಿರುವ ಹಿರಿಯರಿದ್ದಾರೆ. ‘ಸದ್ಯ ನನಗೆ ಗುರು ಬಲವಿಲ್ಲ’, ನನ್ನ ಬಿಟ್ಟುಬಿಡಿ’’ ಎಂದರೂ ಆತ್ಮೀಯ ಆಕ್ರಮಣದಿಂದ ನನ್ನ ಒಪ್ಪಿಸಿದರು. ಸ್ವಲ್ಪ ಮೊದಲೇ ಮದುವೆ ಬಾಸಿಂಗ ಕಟ್ಟಿಸಿಕೊಂಡ ಮದುಮಗನ ಸಂಕೋಚ ನನಗೆ.

* ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕಥೆಯನ್ನೇ ಮುಖ್ಯ ಅಭಿವ್ಯಕ್ತಿ ಮಾಧ್ಯಮವನ್ನಾಗಿ ನೀವು ಏಕೆ ಆಯ್ದುಕೊಂಡಿರಿ? ನಿಮ್ಮ ಕಥೆಗಳು ನುಡಿ ಚಿತ್ರದಂತೆ ಭಾಸವಾಗುತ್ತವೆ?
ಕಥೆ ನನ್ನ ಆಯ್ಕೆಯಾಗಲು ಕಾರಣ ನನ್ನ ಬಾಲ್ಯದ ಪರಿಸರವಾಗಿರಬಹುದು. ನಾನು ಕೇಳಿಸಿಕೊಳ್ಳುತ್ತಿದ್ದ ಹಲವರ ಮಾತು ನಿಧಾನವಾಗಿ ಕಥೆಯ ದಾರಿ ಹಿಡಿದು ಕುತೂಹಲ ಮೂಡಿಸಿದ ಅನೇಕ ಪ್ರಸಂಗಗಳು ನನಗೆ ನೆನಪಿವೆ. ನನ್ನೂರಿಗೆ ಬರುತ್ತಿದ್ದ ಅಲೆಮಾರಿ ವ್ಯಾಪಾರಿಗಳು ನಿರೂಪಿಸುತ್ತಿದ್ದ ಕಥೆಗಳು ರೋಚಕವಾಗಿರುತ್ತಿದ್ದವು. ನನ್ನ ಪರಿಸರದ ಪ್ರತಿ ಮರ, ಕಲ್ಲು, ಹಬ್ಬ, ಮನುಷ್ಯರ ಹಿಂದೆ ನಿಗೂಢ ವಿಸ್ಮಯ ಕತೆಗಳಿರುತ್ತಿದ್ದವು. ಕತೆಗಳು ನನಗೆ ಎಷ್ಟು ಸಹಜವಾಗಿದ್ದವೆಂದರೆ ಅನೇಕ ಸಲ ನಾನು ಕೇವಲ ಲಿಪಿಕಾರನ ಕಾರ್ಯ ಮಾಡುತ್ತಿದ್ದೆ ಎಂದೆನಿಸಿದೆ. ಸಾಹಿತ್ಯ ಸಂತೆಯಲ್ಲಿ ತೆರೆದುಕೊಳ್ಳುವ ಎಲ್ಲ ಶಾಬ್ದಿಕ ಅಂಗಡಿಗಳು ನುಡಿ ಚಿತ್ರಗಳೇ. ಮಾಸ್ತಿ ಹೇಳಿಲಿಲ್ಲವೆ: ‘ಜೀವನದ ರಸವತ್ತಾದ ಚಿತ್ರಗಳನ್ನು ನೀಡುವುದಷ್ಟೇ ನನ್ನ ಕೆಲಸ’ ಎಂದು.

* ಹೊಸ ಪೀಳಿಗೆಯವರು ಸಾಹಿತ್ಯದಿಂದ ವಿಮುಖರಾಗುತ್ತಿದ್ದಾರೆಂದು ನಿಮಗೆ ಅನಿಸುತ್ತಿಲ್ಲವೆ?
ಸಮಾಜದ ಭಿನ್ನ ಸ್ತರಗಳಿಂದ ಬಂದಿರುವ ಹಲವರು ಕನ್ನಡಕ್ಕೆ ಹೊಸ ಅನುಭವ, ಭಾಷೆಯನ್ನು ತರುತ್ತಿದ್ದಾರೆ. ಅಂತರ್ಜಾಲ ತಾಣಗಳಲ್ಲಿ ನಡೆಯುತ್ತಿರುವ ಸಾಹಿತ್ಯ ಚಟುವಟಿಕೆಗಳನ್ನು ಗಮನಿಸಿ. ಪುಸ್ತಕ ಪ್ರಕಟಣೆಗಳು, ಮಾರಾಟ, ಸಂವಾದ ರೂಪದ ಗೋಷ್ಠಿಗಳು, ಸಾಹಿತ್ಯ ಪ್ರತಿಷ್ಠಾನಗಳು, ವಾಚನಾಲಯಗಳ ಸ್ಥಾಪನೆ ಆಶಾದಾಯಕವಾಗಿವೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಾಹಿತ್ಯ ಸೃಷ್ಟಿ ಮತ್ತು ಸಾಹಿತ್ಯ ಓದುಗರ ಸಂಖ್ಯೆ ಎಲ್ಲ ಕಾಲದಲ್ಲೂ ಕಮ್ಮಿಯೇ.

* ಸಾಹಿತ್ಯದಿಂದ ಸಮಾಜಕ್ಕೆ ಪ್ರಯೋಜನವೇನು ?
ಸಾಹಿತ್ಯ ನೇರವಾಗಿ ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಅದೊಂದು ರಾಜಕೀಯ ಕಾರ್ಯಕ್ರಮವಲ್ಲ. ಹಸಿದವರಿಗೆ ಅನ್ನ, ರೋಗಿಗಳಿಗೆ ಔಷಧ ನೀಡುವ ಯೋಜನೆಯೂ ಅಲ್ಲ. ಆದರೆ ನಮ್ಮನ್ನು ಕಾಡುವ ಸಮಸ್ಯೆಗಳನ್ನು ಗ್ರಹಿಸಲು, ವ್ಯಾಖ್ಯಾನಿಸಲು ಅಗತ್ಯವಿರುವ ತಾತ್ವಿಕ, ನೈತಿಕ ಒಳನೋಟಗಳನ್ನು ನೀಡುತ್ತದೆ. ಲೌಕಿಕ ಸಂಪತ್ತನ್ನು ನೀಡದಿದ್ದರೂ ನೆಮ್ಮದಿಯೆಂಬ ನದಿ ನಮ್ಮೊಳಗೆ ಹರಿಯಲು ಸಾಹಿತ್ಯ ಅಗತ್ಯ. ಸಮಸ್ಯೆ ಅನುಭವಿಸುವವನದು ಮಾತ್ರವಲ್ಲ ಅದಕ್ಕೆ ಕಾರಣನಾದವನದೂ ಎಂದು ಪರಿವರ್ತಿಸುವ ಸಂಜೀವಿನಿಯಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.