ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಷ್ಠರ ಎದುರು ಹೆಚ್ಚು ಪಂದ್ಯಗಳನ್ನು ಆಡಬೇಕು

ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಮನದ ಮಾತು
Last Updated 6 ಮೇ 2018, 19:30 IST
ಅಕ್ಷರ ಗಾತ್ರ

ಗುರುಗ್ರಾಮ: ‘ವಿಶ್ವದ ಬಲಿಷ್ಠ ತಂಡಗಳ ಎದುರು ತವರಿನ ಹೊರಗೆ ಹೆಚ್ಚು ಪಂದ್ಯಗಳನ್ನು ಆಡಬೇಕು. ಆಗ ಮಾತ್ರ ನಾವು ಮುಂಬರುವ ಎಎಫ್‌ಸಿ ಏಷ್ಯಾ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯ’ ಎಂದು ಭಾರತ ತಂಡದ ನಾಯಕ ಸುನಿಲ್‌ ಚೆಟ್ರಿ ಹೇಳಿದ್ದಾರೆ.

‘ತವರಿನಲ್ಲಿ ನಾವು ಉತ್ತಮ ಸಾಮರ್ಥ್ಯ ತೋರಿದ್ದೇವೆ. ಆದರೆ ವಿದೇಶಿ ನೆಲಗಳಲ್ಲಿ ತಂಡದ ಸಾಧನೆ ಉತ್ತಮವಾಗಿಲ್ಲ. ಏಷ್ಯಾ ಕಪ್ ಆರಂಭಕ್ಕೆ ಇನ್ನು ಆರು ತಿಂಗಳು ಬಾಕಿ ಇದೆ. ಈ ಅವಧಿಯಲ್ಲಿ ಬಲಿಷ್ಠ ತಂಡಗಳ ವಿರುದ್ಧ ಹೆಚ್ಚು ಪಂದ್ಯಗಳನ್ನು ಆಡಿದರೆ ಆಟಗಾರರ ಮನೋಬಲ ಹೆಚ್ಚಲಿದೆ’ ಎಂದಿದ್ದಾರೆ.

‘2011ರ ಟೂರ್ನಿಯ ಗುಂಪು ಹಂತದಲ್ಲಿ ನಾವು ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ಮತ್ತು ಬಹ್ರೇನ್‌ ವಿರುದ್ಧ ಆಡಿದ್ದೆವು. ಈ ಬಾರಿ ಯುಎಇ, ಥಾಯ್ಲೆಂಡ್‌ ಮತ್ತು ಬರ್ಲಿನ್‌ ಎದುರು ಸೆಣಸಲಿದ್ದೇವೆ. ಹೀಗಾಗಿ ಸುಲಭವಾಗಿ ಪ್ರಶಸ್ತಿ ಸುತ್ತು ತಲುಪಬಹುದು ಎಂಬ ಭಾವನೆ ಹಲವರಲ್ಲಿದೆ. ಹಿಂದಿನ ಕೆಲ ಟೂರ್ನಿಗಳಲ್ಲಿ ನಾವು ಶ್ರೇಷ್ಠ ಆಟ ಆಡಿರುವುದು ಇದಕ್ಕೆ ಕಾರಣವಿರಬಹುದು. ಹಾಗಂತ ಯಾವ ತಂಡವನ್ನೂ ಹಗುರವಾಗಿ ಪರಿಗಣಿಸುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಯುಎಇ ತಂಡವನ್ನು ಅದರ ನೆಲದಲ್ಲೇ ಮಣಿಸುವುದು ಸುಲಭವಲ್ಲ. ಥಾಯ್ಲೆಂಡ್‌ ಕೂಡ ಪರಿಣಾಮಕಾರಿ ಸಾಮರ್ಥ್ಯ ತೋರಬಲ್ಲದು. ಆರು ವರ್ಷಗಳ ಹಿಂದೆ ನಾವು ಈ ತಂಡದ ವಿರುದ್ಧ ಆಡಿದ್ದೆವು. ಆ ಪಂದ್ಯ 2–2ರಲ್ಲಿ ಡ್ರಾ ಆಗಿತ್ತು’ ಎಂದಿದ್ದಾರೆ.

‘ಏಷ್ಯಾ ಕಪ್‌ ಅರ್ಹತಾ ಟೂರ್ನಿಯಲ್ಲಿ ತಂಡದಲ್ಲಿದ್ದ ಎಲ್ಲರೂ ಗುಣಮಟ್ಟದ ಆಟ ಆಡಿದ್ದರು. ಹೀಗಾಗಿ ಸತತವಾಗಿ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿತ್ತು. ಇದರಿಂದಾಗಿ ಫಿಫಾ ರ‍್ಯಾಂಕಿಂಗ್‌ನಲ್ಲಿ ಅಗ್ರ 100ರೊಳಗೆ ಸ್ಥಾನ ಗಳಿಸಿದ್ದೇವೆ’ ಎಂದು ಹೇಳಿದ್ದಾರೆ.

‘ಐಎಸ್‌ಎಲ್‌ ಟೂರ್ನಿಯಲ್ಲಿ ಈ ಬಾರಿ ಬೆಂಗಳೂರು ಫುಟ್‌ಬಾಲ್‌ ತಂಡಕ್ಕೆ (ಬಿಎಫ್‌ಸಿ) ಪ್ರಶಸ್ತಿ ಗೆಲ್ಲುವ ಉತ್ತಮ ಅವಕಾಶ ಇತ್ತು. ಲೀಗ್‌ ಹಂತದಲ್ಲಿ ನಾವು ಅಮೋಘ ಆಟ ಆಡಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದೆವು. ಆದರೆ ಫೈನಲ್‌ನಲ್ಲಿ ಕೆಲ ತಪ್ಪುಗಳನ್ನು ಮಾಡಿದ್ದರಿಂದ ಪ್ರಶಸ್ತಿಯ ಕನಸು ಕಮರಿತ್ತು. ಸೂಪರ್‌ ಕಪ್‌ನಲ್ಲಿ ಟ್ರೋಫಿ ಗೆದ್ದು ಹಿಂದಿನ ನಿರಾಸೆ ಮರೆತಿದ್ದೇವೆ’ ಎಂದು ಬಿಎಫ್‌ಸಿ ತಂಡದ ನಾಯಕರೂ ಆಗಿರುವ ಸುನಿಲ್‌ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT