ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಕಾಯ್ದೆ ರದ್ದತಿಗೆ ಮೀನಮೇಷ ಎಣಿಸುತ್ತಿರುವುದು ಏಕೆ: ಚಂದ್ರಶೇಖರ್ ಪ್ರಶ್ನೆ

Published 31 ಜುಲೈ 2023, 9:58 IST
Last Updated 31 ಜುಲೈ 2023, 9:58 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರೂ, ಎಪಿಎಂಸಿ ಕಾಯ್ದೆ ರದ್ದು ಮಾಡುವುದಕ್ಕೆ ಮೀನಮೇಷ ಎಣಿಸುತ್ತಿರುವುದು ಏಕೆ ಎಂದು ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.

‘ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ವಿಧಾನ ಪರಿಷತ್‌ನಲ್ಲಿ ಬಹುಮತ ಇಲ್ಲದಿದ್ದರೂ ಸುಗ್ರೀವಾಜ್ಞೆಯ ಮೂಲಕ ಕೃಷಿ ಭೂಮಿ  ಕಾಯ್ದೆಯನ್ನು ರದ್ದುಪಡಿಸಲು ಮುಂದಾದರು. ‘ಮಣ್ಣಿನ ಮಕ್ಕಳಿಗೆ’ ಮದುವೆ ಮಾಡಿಸಿ ಜೆಡಿಎಸ್‌ ಬೆಂಬಲವನ್ನೂ ಗಿಟ್ಟಿಸಿಕೊಂಡು ವಿಧಾನ ಪರಿಷತ್‌ನಲ್ಲೂ ಸುಗ್ರೀವಾಜ್ಞೆಗೆ ಒಪ್ಪಿಗೆ ಸಿಗುವಂತೆ ಮಾಡಿದರು.  ಆದರೆ ಈಗಿನ ಸರ್ಕಾರ ಭಾರಿ ಬಹುಮತ ಇದ್ದರೂ ರೈತರಿಗೆ ನೆರವಾಗುವ ಎಪಿಎಂಸಿ ಕಾಯ್ದೆ ರದ್ದುಪಡಿಸಲು ಏಕೆ ಹಿಂದೆ ಮುಂದೆ ನೋಡುತ್ತಿದೆ, ಇದು ಕಾಂಗ್ರೆಸ್ ಸರ್ಕಾರ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆಯೇ ಎಂಬ ಶಂಕೆ ಮೂಡುವಂತೆ ಮಾಡಿದೆ’ ಎಂದು ಅವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

’ಸಿದ್ದರಾಮಯ್ಯನವರೇ, ನಿಮಗೆ ಬದ್ಧತೆ ಇಲ್ಲವೇ? ನಿಮಗೆ ಇಚ್ಛಾಶಕ್ತಿಯ ಕೊರತೆ ಇದ್ದಂತೆ ಈಗ ಕಾಣಿಸುತ್ತಿದೆ. ಭೂಸುಧಾರಣೆಗೆ ಇನ್ನೂ ಕೈಹಚ್ಚಿಲ್ಲ. ಆದರೆ ಆಗಲೇ ನೀವು ಬಿಜೆಪಿಯ ಹಾದಿಯಲ್ಲಿ ನಡೆಯುತ್ತಿರುವಂತೆ ಕಾಣಿಸುತ್ತಿದೆ. ನಮಗೆ ರೈತರು ಮುಖ್ಯವಲ್ಲ, ಕೃಷಿ ಜಮೀನು ಬಹುರಾಷ್ಟ್ರೀಯ ಕಂಪನಿಗಳ ಪಾಲಾಗಲಿ ಎಂದು ಬಿಜೆಪಿ ಬಯಸಿತ್ತು. ಅದಕ್ಕಾಗಿಯೇ 1961ರ ಕೃಷಿ ಭೂಮಿ ಕಾಯ್ದೆಯನ್ನು ರದ್ದುಪಡಿಸಿತ್ತು. ರೈತರ ವಿಚಾರದಲ್ಲಿ ನೀವು ಸ್ಷಷ್ಟವಾದ, ದೃಢವಾದ ನಿಲುವು ತೆಗೆದುಕೊಳ್ಳದೆ ಹೋದರೆ ನೀವು ಸಹ ಬಿಜೆಪಿಯ ಹಾದಿಯಲ್ಲೇ ಇದ್ದೀರಿ ಎಂಬ ಭಾವನೆ ಮೂಡುವಂತಾಗುತ್ತದೆ‘ ಎಂದು ಅವರು ಹೇಳಿದರು.

‘ರಾಜ್ಯ ಸರ್ಕಾರಕ್ಕೆ ಒಂದಿಷ್ಟು ಸಮಯ ಕೊಟ್ಟು ನೋಡುತ್ತೇನೆ. ಅಷ್ಟರಲ್ಲಿ ತಮ್ಮ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬೇಕು. ತಾವು ಹಿಂದೆ ಭರವಸೆ ಕೊಟ್ಟಂತೆ ನಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರೈತರ ಉಗ್ರ ಸ್ವರೂಪದ ಹೋರಾಟ ನಿಶ್ಚಿತ’ ಎಂದು ಅವರು ಎಚ್ಚರಿಸಿದರು.

₹50 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವೆ: ‘ನಾನು ನಾನಾಗಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಜತೆ ಸೇರಿಕೊಂಡಿದ್ದಲ್ಲ. ಮನವಿ ಸಲ್ಲಿಸಲು ನೇತೃತ್ವ ವಹಿಸಿ ಎಂದು ಕೇಳಿಕೊಂಡಿದ್ದರಿಂದ ನಾನು ಒಪ್ಪಿಕೊಂಡು ನಾಯಕತ್ವ ವಹಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ಪ್ರವೇಶದ ಬಳಿಕ ನನ್ನ ಮೇಲೆ ದೊಡ್ಡ ರಾಜಕೀಯ ಪಿತೂರಿ ಆರಂಭವಾಯಿತು. ನನ್ನನ್ನು ಪೂರ್ತಿಯಾಗಿ ಮುಗಿಸಿಬಿಡಲು ಪ್ರಯತ್ನ ನಡೆಯಿತು. ಆದರೆ ನಾನು ಸ್ವಚ್ಛವಾಗಿಯೇ ಇದ್ದವನು, ಈಗಲೂ ಹಾಗೆಯೇ ಇದ್ದೇನೆ. ನನ್ನದೇನೂ ತಪ್ಪಿಲ್ಲ ಎಂದು ಹೇಳಿದ ಚೀಫ್‌ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಖಾಸಗಿ ಟಿವಿ ವಾಹಿನಿಗೆ ನೋಟಿಸ್‌ ಜಾರಿಗೆ ಮಾಡಿದ ಕಾರಣ ಇದೀಗ ನಾನು ಮಾನನಷ್ಟ ಮೊಕದ್ದಮೆ ಹೂಡುವ ಸಿದ್ಧತೆ ನಡೆಸಿದ್ದೇನೆ. ₹ 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ‘ ಎಂದು ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು.

‘ನಾನು 43 ವರ್ಷಗಳಿಂದ ಹಸಿರು ಶಾಲು ಹೆಗಲಿಗೆ ಹಾಕಿಕೊಂಡು ಹೋರಾಟದಲ್ಲಿದ್ದೇನೆ. ನಾನು ಯಾವ ಬ್ರಷ್ಟ ಚಟುವಟಿಕೆಯಲ್ಲೂ ಪಾಲ್ಗೊಂಡಿಲ್ಲ. ಹೀಗಾಗಿ ನನಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ‘ ಎಂದರು.

ಸರ್ವಾಧಿಕಾರಿ ಯಾರು?: ’ರೈತಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ಜೆ.ಕಾರ್ತಿಕ್‌ ಅವರು ನನ್ನನ್ನು ಸರ್ವಾಧಿಕಾರಿ ಎಂದು ದೂರಿದ್ದಾರೆ. ಯುವ ನಾಯಕ ಮುಂದೆ ಬರಲಿ ಎಂದು ಆಶಿಸಿ ಅವರನ್ನು ಜಿಲ್ಲಾಧ್ಯಕ್ಷ ಮಾಡಿದೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಡಿದೆ. ಆದರೆ ಅವರು ರಾಜ್ಯದಲ್ಲಿ  ಸಂಚರಿಸಿ ಕೆಲಸ ಮಾಡಲಿಲ್ಲ,  ಕನಿಷ್ಠ ವಿಜಯನಗರ ಜಿಲ್ಲೆಯಲ್ಲೂ ಕೆಲಸ ಮಾಡಲಿಲ್ಲ. ಕನಿಷ್ಠ ಪಕ್ಷ ಹೊಸಪೇಟೆ ಘಟಕವನ್ನೂ ರಚಿಸಲಿಲ್ಲ. ಅವರು ಬೆಂಗಳೂರಿನತ್ತ ಕೈತೋರಿಸಿ ನನ್ನನ್ನು ಸರ್ವಾಧಿಕಾರಿ ಎಂದು ಹೇಳಿದರೆ ಅರ್ಥವಿದೆಯೇ? ಕೊಟ್ಟ ಕೆಲಸವನ್ನು ಹೊಣೆಗಾರಿಕೆಯಿಂದ ಮಾಡದ ವ್ಯಕ್ತಿ ಸಂಘಟನೆಯಿಂದ ಹೊರಗೆ ಹೋದರೆ ಹೋಗಲಿ, ನಮಗೇನೂ ನಷ್ಟವಿಲ್ಲ, ಇಷ್ಟಕ್ಕೂ ಅವರು ಸಲ್ಲಿಸಿದ ರಾಜೀನಾಮೆ ನನಗೆ ಇನ್ನೂ ತಲುಪಿಲ್ಲ’ ಎಂದು ಚಂದ್ರಶೇಖರ್ ಹೇಳಿದರು.

ಜಿಲ್ಲಾ, ತಾಲ್ಲೂಕು ಘಟಕ ರಚನೆ: ಕೋಡಿಹಳ್ಳಿ ಅವರು ಇದೇ ವೇಳೆ ವಿಜಯನಗರ ಜಿಲ್ಲಾ ಘಟಕ ಮತ್ತು ಹೊಸಪೇಟೆ ತಾಲ್ಲೂಕು ಮತ್ತು ನಗರ ಘಟಕಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದನ್ನು ಪ್ರಕಟಿಸಿದರು. ಟಿ.ನಾಗರಾಜ (ಜಿಲ್ಲಾ ಅಧ್ಯಕ್ಷ), ಎಚ್‌.ಎಸ್‌.ರೇವಣ್ಣ ಸಿದ್ದಪ್ಪ (ಗೌರವಾಧ್ಯಕ್ಷ), ಜಡೆಪ್ಪ ಮೇಟ್ರಿ (ಕಾರ್ಯಾಧ್ಯಕ್ಷ), ಜೆ.ನಾಗರಾಜ್‌ (ಪ್ರಧಾನ ಕಾರ್ಯದರ್ಶಿ), ಸಣ್ಣಕ್ಕಿ ರುದ್ರಪ್ಪ (ಹೊಸಪೇಟೆ ತಾಲ್ಲೂಕು ಅಧ್ಯಕ್ಷ), ಹನುಮಂತಪ್ಪ (ಗೌರವಾಧ್ಯಕ್ಷ), ಎಲ್‌.ನಾಗೇಶ್‌ (ಪ್ರಧಾನ ಕಾರ್ಯದರ್ಶಿ), ಕೆ.ಸುರೇಶ್‌ (ಹೊಸಪೇಟೆ ನಗರ ಘಟಕ ಅಧ್ಯಕ್ಷ), ವೈ.ಯಮುನೇಶ್‌ (ಗೌರವಾಧ್ಯಕ್ಷ), ಮನಸಾಲಿ ರಾಘವೇಂದ್ರ (ಪ್ರಧಾನ ಕಾರ್ಯದರ್ಶಿ) ಹಾಗೂ ಇತರ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು.

ಕಾರ್ತಿಕ್‌ ಆಕ್ಷೇಪ: ತಮ್ಮ ಗುಂಪಿನಲ್ಲಿದ್ದ ನಾಲ್ವರು ಕೋಡಿಹಳ್ಳಿ ಬಣಕ್ಕೆ ಹೋಗಿದ್ದನ್ನು ಒಪ್ಪಿಕೊಂಡಿರುವ ರೈತಸಂಘದ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್‌, ಜೆ.ನಾಗರಾಜ್‌ ಮತ್ತು ಹನುಮಂತಪ್ಪ ಈಗಲೂ ತಮ್ಮ ಬಳಿಯೇ ಇದ್ದಾರೆ, ಅವರ ಹೆಸರನ್ನು ಪದಾಧಿಕಾರಿಗಳ ಪಟ್ಟಿಯಲ್ಲಿ ಸುಮ್ಮನೆ ಸೇರಿಸಲಾಗಿದೆ ಎಂದು ಆಕ್ಷೇಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT