ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ದಿನದಲ್ಲಿ 30 ಮಕ್ಕಳ ಆರೈಕೆ

ಸಮಾರೋಪಗೊಂಡ ಬಾಲಚೈತನ್ಯ ಕಾರ್ಯಕ್ರಮ
Last Updated 23 ಜೂನ್ 2021, 16:28 IST
ಅಕ್ಷರ ಗಾತ್ರ

ಹೊಸಪೇಟೆ(ವಿಜಯನಗರ): ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳ ಆರೈಕೆಗಾಗಿ ನಗರದಲ್ಲಿ ಆರಂಭಿಸಿದ್ದ ಬಾಲಚೈತನ್ಯ ಕಾರ್ಯಕ್ರಮ ಬುಧವಾರ ನಗರದಲ್ಲಿ ಸಮಾರೋಪಗೊಂಡಿತು.

ಒಟ್ಟು 14 ದಿನಗಳ ಅವಧಿಯಲ್ಲಿ 30 ಮಕ್ಕಳಿಗೆ ಕೇಂದ್ರದಲ್ಲಿ ಆರೈಕೆ ಮಾಡಲಾಯಿತು. ಬಹುತೇಕ ಮಕ್ಕಳಲ್ಲಿ ಬದಲಾವಣೆ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಬಾಲಕಿಯರ ಹಾಸ್ಟೆಲ್‌ನಲ್ಲಿ ಸಮಾರೋಪ ಉದ್ಘಾಟಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ‘ಸ್ಥಳೀಯ ದಾನಿಗಳ ನೆರವಿನೊಂದಿಗೆ ನಗರದಲ್ಲಿ ಆಯೋಜಿಸಿದ್ದ ಬಾಲಚೈತನ್ಯ ಕಾರ್ಯಕ್ರಮ ಯಶಸ್ಸು ಕಂಡಿದೆ. 150 ಮಕ್ಕಳನ್ನು ಆರೈಕೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ, 30 ಮಕ್ಕಳಿಗಷ್ಟೇ ಸಾಧ್ಯವಾಗಿದೆ. ಬರುವ ದಿನಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ, ಕೇಂದ್ರಕ್ಕೆ ಕರೆ ತಂದು ಅವರ ಆರೈಕೆ ಮಾಡಲಾಗುವುದು’ ಎಂದು ತಿಳಿಸಿದರು.

ಮಕ್ಕಳ ತಜ್ಞ ಡಾ.ರಾಜೀವ್ ಮಾತನಾಡಿ, ‘ಕೇಂದ್ರದಲ್ಲಿ ಆರೈಕೆಗೊಂಡ ಮಕ್ಕಳಲ್ಲಿ ಬಹಳಷ್ಟು ಬದಲಾವಣೆ ಕಂಡು ಬಂದಿದೆ. ತಾಯಂದಿರಿಗೂ ಪೌಷ್ಟಿಕ ಆಹಾರದ ಪ್ರಯೋಜನಗಳ ಬಗ್ಗೆ ಗೊತ್ತಾಗಿದೆ. ನಿಜಕ್ಕೂ ಇದು ಉತ್ತಮ ಕಾರ್ಯಕ್ರಮ. ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಯಲಿಗಾರ ಮಾತನಾಡಿ, ‘ಆರೈಕೆ ಕೇಂದ್ರಕ್ಕೆ ದಾಖಲಾಗಿದ್ದ 30 ಮಕ್ಕಳಲ್ಲಿ 10 ಮಕ್ಕಳು ಕೆಂಪು ವಲಯದಿಂದ ಹಳದಿ ವಲಯಕ್ಕೆ ಬಂದಿದ್ದಾರೆ. ಉಳಿದ ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಸಹ ಪೌಷ್ಟಿಕ ಆಹಾರ ಒದಗಿಸುವ ಕುರಿತು ಅರಿವು ಮೂಡಿಸಲಾಗಿದೆ’ ಎಂದರು.

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ.ಶಂಕರ್, ಮಕ್ಕಳ ತಜ್ಞರ ಸಮಿತಿ ಅಧ್ಯಕ್ಷ ಡಾ.ಅಶೋಕ್ ದಾತಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ್, ಕೆ.ನಾಗರತ್ನಮ್ಮ, ಫಾತೀಮಾ, ಡಾ.ದೀಪಾ, ಡಾ.ನಾಗೇಂದ್ರ, ಯುವ ಮುಖಂಡ ಸಂದೀಪ್ ಸಿಂಗ್, ವಲಯ ಅರಣ್ಯಾಧಿಕಾರಿ ರಾಘವೇಂದ್ರ, ತಾಲ್ಲೂಕು ಸಂಯೋಜಕ ನೀಲಕಂಠ, ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT