ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ‘ಸಂಸ್ಕಾರ’ ಪ್ರತಿಭಟನೆ

Last Updated 9 ಏಪ್ರಿಲ್ 2022, 12:44 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಂಧನ ಬೆಲೆ, ಎಲ್‌ಪಿಜಿ ದರ ಏರಿಕೆ ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ‘ಸಂಸ್ಕಾರ’ ಪ್ರತಿಭಟನೆ ನಡೆಸಿದರು.

ಎತ್ತಿನಬಂಡಿ, ತಳ್ಳುಗಾಡಿಯಲ್ಲಿದ್ದ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಹೂವಿನ ಹಾರ ಹಾಕಿ, ಅಂತಿಮ ಸಂಸ್ಕಾರ ಮಾಡಿದರು. ನಂತರ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ನಗರದಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿದರು.

ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮಾತನಾಡಿ, ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಎಲ್ಲ ರೀತಿಯ ವಸ್ತುಗಳ ಬೆಲೆ ಹೆಚ್ಚಿಸಿ ಜನಸಾಮಾನ್ಯರ ಬದುಕು ದುಸ್ತರಗೊಳಿಸಿದೆ. ಬೆಲೆ ಏರಿಕೆ ನಿಯಂತ್ರಿಸುವುದರ ಬಗ್ಗೆ ಸೌಜನ್ಯದ ಮಾತು ಕೂಡ ಆಡುತ್ತಿಲ್ಲ. ಇದು ಅವರ ಧೋರಣೆ ತೋರಿಸುತ್ತದೆ ಎಂದರು.

ಬಿಜೆಪಿ, ಆರ್‌ಎಸ್‌ಎಸ್, ವಿಎಚ್‌ಪಿ, ಹಿಜಾಬ್, ಹಲಾಲ್ ಕುರಿತು ಕೋಮು ಪ್ರಚೋದನೆ ಮಾಡುತ್ತಿವೆ. ಆದರೆ, ಬೆಲೆ ಏರಿಕೆಯಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ. ರಾಜ್ಯದಿಂದ ಚುನಾಯಿತರಾದ ಸಂಸದರು ದಂಡಪಿಂಡರಾಗದೇ ಜನಸಾಮಾನ್ಯರ ಬವಣೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ರಾಜ್ಯದ ಮಣ್ಣಿನ ಋಣ ತೀರಿಸಬೇಕು ಎಂದು ಆಗ್ರಹಿಸಿದರು.

ನಿರುದ್ಯೋಗದಿಂದ 41 ಸಾವಿರ ಯುವಕರು ಖಿನ್ನತೆಗೆ ಒಳಗಾಗಿದ್ದಾರೆ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ. ಆದರೆ, ರಾಜ್ಯ, ಕೇಂದ್ರ ಸರ್ಕಾರ ಅದಕ್ಕೆ ಪರಿಹಾರ ಕಂಡುಕೊಳ್ಳುವುದರ ಬದಲು ದಿನಕ್ಕೊಂದು ಪ್ರಚೋದನಕಾರಿ ಹೇಳಿಕೆ ಕೊಡುತ್ತಿದ್ದಾರೆ. ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ, ಜಿಲ್ಲಾ ಅಧ್ಯಕ್ಷ ಬಿ.ವಿ. ಶಿವಯೋಗಿ, ಬ್ಲಾಕ್‌ ಅಧ್ಯಕ್ಷ ವಿನಾಯಕ ಶೆಟ್ಟರ್‌, ನಗರ ಘಟಕದ ಅಧ್ಯಕ್ಷ ಸಿ.ಆರ್‌. ಭರತ್‌ ಕುಮಾರ್‌, ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ವೆಂಕಟರಾವ್ ಘೋರ್ಪಡೆ, ಗುಜ್ಜಲ ನಾಗರಾಜ, ನಿಂಬಗಲ್ ರಾಮಕೃಷ್ಣ, ಎಂ.ಪಿ.ವೀಣಾ, ಎಚ್.ಮುನ್ನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT