ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | '534 ಹಿರಿಯ ನಾಗರಿಕರಿಂದ ಮತದಾನ'

ಗುಳೆ ಹೋಗಿದ್ದ 4,606 ಮಂದಿ ತವರಿಗೆ ಬಂದು ಮತದಾನಕ್ಕೆ ಸಜ್ಜು–ಜಿ.ಪಂ.ಸಿಇಒ
Published 4 ಮೇ 2024, 16:05 IST
Last Updated 4 ಮೇ 2024, 16:05 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಮತದಾನಕ್ಕೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಬಿಸಿಲಿನ ನೆಪ ಹೇಳಿ ಯಾರೂ ಮತದಾನ ಮಾಡದೆ ಇರಬಾರದು. ಬೆಳಿಗ್ಗೆ 10 ಗಂಟೆಗೆ ಮೊದಲೇ ಗರಿಷ್ಠ ಮತದಾನವಾಗುವಂತೆ ನೋಡಿಕೊಳ್ಳಿ ಎಂದು ಜಿಲ್ಲಾ ಸ್ವೀಪ್‌ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ.ಹೇಳಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲಸಕ್ಕಾಗಿ ಜಿಲ್ಲೆಯಿಂದ ಗುಳೆ ಹೋಗಿದ್ದ 4,562 ಮಂದಿಯ ಪೈಕಿ 4,606 ಮಂದಿ ಈಗಾಗಲೇ ಮರಳಿದ್ದು, ಮತದಾನಕ್ಕೆ ಸಜ್ಜಾಗಿದ್ದಾರೆ. 85 ವರ್ಷ ಮೇಲ್ಪಟ್ಟ 558 ಜನರ ಪೈಕಿ 534 ಮಂದಿ ಮತದಾನ ಮಾಡಿದ್ದಾರೆ. 412 ಅಂಗವಿಕಲರ ಪೈಕಿ 406 ಮಂದಿ ಮತ ಚಲಾಯಿಸಿದ್ದಾರೆ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ 71.63ರಷ್ಟು ಮತದಾನವಾಗಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಶೇ 78.07ರಷ್ಟು ಮತದಾನವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ 1,234 ಮತಗಟ್ಟೆಗಳಲ್ಲೂ ಗರಿಷ್ಠ ಪ್ರಮಾಣದ ಮತದಾನವಾಗಬೇಕು ಎಂಬ ಉದ್ದೇಶದೊಂದಿಗೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮತದಾರರ ಆಕರ್ಷಣೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಒಂದು ಅಂಗವಿಕಲ ಸ್ನೇಹಿ ಮತಗಟ್ಟೆ, ಸಖಿ ಮತಗಟ್ಟೆ, ಯುವ ಮತಗಟ್ಟೆ, ಸಾಂಪ್ರದಾಯಿಕ ಮತಗಟ್ಟೆ ಹಾಗೂ ಧ್ಯೇಯ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ ಎಂದರು.

ಕಳೆದ ಲೋಕಸಭಾ ಚುನಾವಣೆ ವೇಳೆ ರಾಜ್ಯ ಸರಾಸರಿ ಶೇ 67.04ಕ್ಕಿಂತ ಕಡಿಮೆ ಪ್ರಮಾಣದ ಮತದಾನವಾದ ಮತಗಟ್ಟೆಗಳು ಜಿಲ್ಲೆಯಲ್ಲಿ ಇದ್ದವು. ಗ್ರಾಮೀಣ ಪ್ರದೇಶಗಳಲ್ಲಿ 106 ಮತ್ತು ನಗರ ಪ್ರದೇಶಗಳಲ್ಲಿ 203 ಮತಗಟ್ಟೆಗಳಲ್ಲಿ ಹೀಗೆ ಕಡಿಮೆ ಮತದಾನವಾಗಿದೆ. ಈ ಬಾರಿ ಇಂತಹ ಮತಗಟ್ಟೆಗಳಿಗೆ ಹೆಚ್ಚಿನ ಮಹತ್ವ ಕೊಟ್ಟು ಮತದಾನ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸದಾಶಿವ ಪ್ರಭು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 33,610 ಯುವ ಮತದಾರರು ಇದ್ದು, ಮೊದಲ ಬಾರಿಗೆ ಮತ ಚಲಾಯಿಸಲು ಸಜ್ಜಾಗಿದ್ದಾರೆ. ಮೇ 7ರಂದು ಎಲ್ಲರೂ ಹಬ್ಬದ ರೀತಿಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳಬೇಕು. ನರೇಗಾ ಕಾರ್ಮಿಕರು ಕೆಲಸ ಮುಗಿಸಿದ ಬಳಿಕ  ಮತ ಚಲಾಯಿಸಬಹುದು. ಬಿರು ಬಿಸಿಲಿನ ಕಾರಣಕ್ಕೆ ಅವರಿಗೆ ಇದೀಗ ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ಕೆಲಸ ಮಾಡಲು ಅವಕಾಶ ನೀಡಿ ಮೂರು ಗಂಟೆಗಳ ರಿಯಾಯಿತಿ ಕೊಡಲಾಗಿದೆ’ ಎಂದು ಅವರು ಹೇಳಿದರು.

ಶೇ 100ರಷ್ಟು ಮತದಾನವಾಗಬೇಕು ವಿಚಾರಣಾಧೀನ ಕೈದಿಗಳು ಅಸೌಖ್ಯ ಪೀಡಿತರು ಬಿಟ್ಟರೆ ಉಳಿದವರು ಮತ ಚಲಾಯಿಸಬೇಕು ಎಂಬುದು ಜಿಲ್ಲಾಡಳಿತದ ಆಶಯ

- ಸದಾಶಿವ ಪ್ರಭು ಬಿ. ಅಧ್ಯಕ್ಷ ಜಿಲ್ಲಾ ಸ್ವೀಪ್‌ ಸಮಿತಿ

242 ಖಾಸಗಿ ಕೊಳವೆಬಾವಿ ಅವಲಂಬನೆ ಜಿಲ್ಲೆಯಲ್ಲಿ ಬಿರು ಬೇಸಿಗೆ ಇದ್ದು ಹಲವೆಡೆ ಕುಡಿಯುವ ನೀರಿಗೆ ಬರ ಉಂಟಾಗಿದೆ.ಇದನ್ನು ನಿವಾರಿಸಲು 242 ಕಡೆಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಅವಲಂಬಿಸಲಾಗಿದೆ ಎಂದು ಸದಾಶಿವ ಪ್ರಭು ಬಿ. ಹೇಳಿದರು. ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆಯಾದ ಬಳಿಕ ಜಿಲ್ಲೆಯಲ್ಲಿ 160 ಕೊಳವೆಬಾವಿಗಳನ್ನು ಜಿಲ್ಲಾಡಳಿತದ ವತಿಯಿಂದ ಹೊಸದಾಗಿ ಕೊರೆಸಲಾಗಿತ್ತು. ಈ ಪೈಕಿ 81ರಲ್ಲಿ ಮಾತ್ರ ನೀರು ಸಿಕ್ಕಿದೆ. ಕೂಡ್ಲಿಗಿ ಹರಪನಹಳ್ಳಿ ತಾಲ್ಲೂಕುಗಳಲ್ಲಿ ನೀರಿನ ಸಮಸ್ಯೆ ಅಧಿಕವಿದೆ. ನೀರಿನ ಪ್ರಮಾಣ ಕಡಿಮೆಯಾದಂತೆ ಕಲುಷಿತಗೊಳ್ಳುವ ಸಾಧ್ಯತೆಯೂ ಹೆಚ್ಚಿರುತ್ತದೆ. ಹೀಗಾಗಿ ಜನರು ಶುದ್ಧೀಕರಣ ಘಟಕದ ನೀರು ತಂದು ಕುಡಿಯಬೇಕು ಅಥವಾ ಕುದಿಸಿ ಆರಿಸಿದ ನೀರು ಸೇವಿಸಬೇಕು ಎಂದು ಅವರು ಕೇಳಿಕೊಂಡರು. 9480837823 ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ತಕ್ಷಣ ಸಮಸ್ಯೆ ಇರುವ ಕಡೆ ನೀರಿನ ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT