ಭಾನುವಾರ, ನವೆಂಬರ್ 27, 2022
27 °C

ತುಂಗಭದ್ರಾ ಜಲಾಶಯದ ನೀರಿನ ಬಳಕೆ ವಿಚಾರ: ವರ್ಷಾಂತ್ಯಕ್ಕೆ 4 ಜಿಲ್ಲೆ ರೈತರ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ತುಂಗಭದ್ರಾ ಜಲಾಶಯದ ನೀರಿನ ಸದ್ಬಳಕೆಯಲ್ಲಿ ರಾಜ್ಯ ಹಿಂದೆ ಬಿದ್ದಿದೆ. ಅದರ ಬಗ್ಗೆ ಗಮನ ಸೆಳೆಯಲು ಈ ವರ್ಷಾಂತ್ಯದೊಳಗೆ ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರ ಸಮಾವೇಶ ನಗರದಲ್ಲಿ ಏರ್ಪಡಿಸಲು ತೀರ್ಮಾನಿಸಲಾಗಿದೆ’ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ತಿಳಿಸಿದರು.

ತುಂಗಭದ್ರಾ ಜಲಾಶಯದ ನೀರನ್ನು ಅವಿಭಜಿತ ಆಂಧ್ರ ಪ್ರದೇಶದ ಅನಂತರಪುರ, ಕಡಪ, ಕರ್ನೂಲ್‌, ಮೆಹಬೂಬ್‌ನಗರ ಜಿಲ್ಲೆಯಲ್ಲಿ ಅಲ್ಲಿನ ಕೆರೆ, ಕಟ್ಟೆಗಳನ್ನು ತುಂಬಿಸಲಾಗಿದೆ. ಇದರ ಪರಿಣಾಮ ಅಂತರ್ಜಲ ಹೆಚ್ಚಾಗಿದೆ. ಆದರೆ, ನಮ್ಮ ಭಾಗದಲ್ಲಿ ಈ ಕೆಲಸವಾಗಿಲ್ಲ. ಬೇಸಿಗೆಯಲ್ಲಿ ಜಲಾಶಯವಿರುವ ಹೊಸಪೇಟೆ ಸುತ್ತಮುತ್ತ ನೀರಿಗೆ ಸಮಸ್ಯೆ ಉಂಟಾಗುತ್ತದೆ. ರೈತ ಸಮಾವೇಶ ಸಂಘಟಿಸಿ, ಅದಕ್ಕೆ ನಾಲ್ಕೂ ಜಿಲ್ಲೆಗಳ ಜನಪ್ರತಿನಿಧಿಗಳು, ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಆಹ್ವಾನಿಸಿ ವಿಷಯ ಮನದಟ್ಟು ಮಾಡಲಾಗುವುದು ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ತುಂಗಭದ್ರಾ ಜಲಾಶಯದಲ್ಲಿ 7 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದರೆ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಗುತ್ತದೆ. ಅದೇ ರೀತಿ 5 ಟಿಎಂಸಿ ಅಡಿಗಿಂತ ಹೆಚ್ಚಿಗೆ ನೀರಿದ್ದರೆ ಮೇಲ್ಮಟ್ಟದ ಕಾಲುವೆಗೆ (ಎಚ್‌ಎಲ್‌ಸಿ) ಹಾಗೂ 1 ಟಿಎಂಸಿಗಿಂತ ಹೆಚ್ಚಿಗೆಯಿದ್ದರೆ ಕೆಳಮಟ್ಟದ ಕಾಲುವೆಗೆ (ಎಲ್‌ಎಲ್‌ಸಿ) ನೀರು ಹರಿಸಲಾಗುತ್ತದೆ. ಆದರೆ, ಪಾವಗಡ ಕುಡಿಯುವ ನೀರಿನ ಯೋಜನೆ ಇದಕ್ಕೆ ವ್ಯತಿರಿಕ್ತವಾಗಿದೆ. 1 ಟಿಎಂಸಿ ಅಡಿಗಿಂತ ಕಡಿಮೆ ನೀರಿದ್ದರೂ ನೀರು ಹರಿಸಲು ಯೋಜನೆ ರೂಪಿಸಿದ್ದಾರೆ. ಜಲಾಶಯದ ಅಂಚಿನಲ್ಲಿ ಜಾಕ್‌ವೆಲ್‌ ನಿರ್ಮಿಸಬೇಕು. ಆದರೆ, ಮಧ್ಯಭಾಗದಲ್ಲಿ ನಿರ್ಮಿಸಲು ತುಂಗಭದ್ರಾ ಮಂಡಳಿಯವರು ಅನುಮತಿ ಕೊಟ್ಟಿರುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.

ತುಂಗಾ ಮತ್ತು ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ ನೀರು ಬರುತ್ತದೆ. ಆದರೆ, ಭದ್ರಾ ಜಲಾಶಯದಿಂದ ವಾಣಿ ವಿಲಾಸ ಅಣೆಕಟ್ಟೆ ತುಂಬಿಸಲು ಯೋಜನೆ ರೂಪಿಸಲಾಗಿದೆ. ಹೀಗೆ ಜಲಾಶಯದ ಮೇಲ್ಭಾಗದಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಜಲಾಶಯದ ಸುತ್ತಮುತ್ತ ಅನೇಕ ಕೈಗಾರಿಕೆಗಳು ತಲೆ ಎತ್ತುತ್ತಿವೆ. ಜಲಾಶಯದ ನೀರನ್ನು ಯಥೇಚ್ಛವಾಗಿ ಬಳಸಿಕೊಳ್ಳುವುದಲ್ಲದೇ ಜಮೀನು ಕಬಳಿಸುತ್ತಿವೆ. ಇಷ್ಟೆಲ್ಲ ಆಗುತ್ತಿದ್ದರೂ ತುಂಗಭದ್ರಾ ಮಂಡಳಿ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.

ಜಲಾಶಯದಿಂದ ಹೂಳು ತೆಗೆಯುವುದು ಅವೈಜ್ಞಾನಿಕ ಎಂದು ಕೆಲ ನೀರಾವರಿ ತಜ್ಞರು ಹೇಳಿದ್ದಾರೆ. ಆದರೆ, ಅವರ ವಾದ ಒಪ್ಪುವಂಥದ್ದಲ್ಲ. ಪ್ರತಿ ವರ್ಷ ಹೂಳು ತೆಗೆಸಲು ₹5ರಿಂದ ₹10 ಸಾವಿರ ಕೋಟಿ ತೆಗೆದಿರಿಸಬೇಕು. ಫಲವತ್ತಾದ ಮಣ್ಣು ರೈತರಿಗೆ ಕೊಡಬೇಕು. ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಗ್ರಾವೆಲ್‌ ಸಿಗುತ್ತಿಲ್ಲ. ಈ ಮಣ್ಣು ಪೂರೈಸಬೇಕು. ಜಲಾಶಯದ ಅಂಚಿನಲ್ಲಿ ಇಟ್ಟಿಗೆ ಭಟ್ಟಿ ತೆಗೆಯಲು ಅವಕಾಶ ಕಲ್ಪಿಸಬೇಕು. ಹೀಗೆ ಮಾಡಿದರೆ ಹೂಳಿನ ಸಮಸ್ಯೆ ನೀಗಿಸಬಹುದು. ಸಮನಾಂತರ ಜಲಾಶಯ ಬೇಕಿಲ್ಲ ಎಂದರು.

ಸಂಘದ ಗ್ರಾಮೀಣ ವಿಭಾಗದ ಅಧ್ಯಕ್ಷ ಮಲ್ಲಾರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ರಂಜಾನ್‌ ಸಾಬ್‌ ಇದ್ದರು.

   ತುಂಗಭದ್ರಾ ಜಲಾಶಯದ ನೀರಿನ ಸದ್ಬಳಕೆಯ ವಿಚಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ರಾಜಕೀಯ ಇಚ್ಛಾಶಕ್ತಿ ಇಲ್ಲ.
–ದರೂರು ಪುರುಷೋತ್ತಮಗೌಡ, ಅಧ್ಯಕ್ಷ, ತುಂಗಭದ್ರಾ ರೈತ ಸಂಘ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು