ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವಕ್ಕೆ ಇಂದು ಸಿಎಂ ಚಾಲನೆ

Published 1 ಫೆಬ್ರುವರಿ 2024, 16:14 IST
Last Updated 1 ಫೆಬ್ರುವರಿ 2024, 16:14 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ):  ಹಂಪಿ ಉತ್ಸವ -2024ಕ್ಕೆ ವಿಶ್ವ ಪಾರಂಪರಿಕ ತಾಣ ಹಂಪಿ ಮತ್ತು ಹೊಸಪೇಟೆ ಸಿಂಗರಿಸಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರಾತ್ರಿ 8ಕ್ಕೆ ಚಾಲನೆ ನೀಡಲಿದ್ದಾರೆ.

ನಗರ ಸಂಪರ್ಕಿಸುವ ಪ್ರಮುಖ ರಸ್ತೆಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ಬೀದಿಗಳಿಗೆ ಅಳವಡಿಸಿರುವ ಬೆಳಕಿನ ತೋರಣ ಹಂಪಿ ಉತ್ಸವಕ್ಕೆ ಸರ್ವರನ್ನು ಸ್ವಾಗತಿಸುತ್ತಿದೆ. ಹಂಪಿಯ ಗಾಯತ್ರಿ ಪೀಠ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದ್ದರೆ, ಅದಕ್ಕೆ ಮೊದಲಾಗಿ ಅದೇ ವೇದಿಕೆಯಲ್ಲಿ ಹಾಗೂ ಇತರ ಮೂರು ವೇದಿಕೆಗಳಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ನಗರದ ಪ್ರಮುಖ ವೃತ್ತಗಳಲ್ಲಿ ಎಲ್ಇಡಿ ವಾಲ್‌ಗಳ ಮೂಲಕ ಹಂಪಿ ಉತ್ಸವದ ಮಹತ್ವ ಸಾರುವುದರೊಂದಿಗೆ, ಸಾರ್ವಜನಿಕರು ಉತ್ಸವದಲ್ಲಿ ಪಾಲ್ಗೊಂಡು ಸಾಂಸ್ಕೃತಿಕ ರಸದೌತಣ ಸವಿಯುವಂತೆ ಮನವಿ ಮಾಡಲಾಗುತ್ತದೆ. ಹಂಪಿ ಉತ್ಸವಕ್ಕೆ ಸ್ವಾಗತಿಸುವ ಫ್ಲೆಕ್ಸ್ ಹಾಗೂ ಬಂಟಿಗ್‌ಗಳು ಎಲ್ಲಡೆ ರಾರಾಜಿಸುತ್ತಿವೆ.

ಪಾಸ್ ಅಗತ್ಯ ಇಲ್ಲ

ಹಂಪಿ ಉತ್ಸವಕ್ಕೆ ಬರುವ ಸಾರ್ವಜನಿಕರಿಗೆ ಮುಕ್ತವಾಗಿ ಎಲ್ಲಾ ಕಾರ್ಯಕ್ರಮಗಳನ್ನು ನೋಡಲು ಅವಕಾಶ ಇದೆ. ಪಾಸ್‌ ಅಗತ್ಯ ಇಲ್ಲ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.

ಈ ಬಾರಿ ಕೆಲವು ವಿಐಪಿಗಳಿಗೆ ಪಾಸ್‌ ನೀಡಿದ್ದು ಬಿಟ್ಟರೆ ಬೇರೆ ಯಾರಿಗೂ ಪಾಸ್ ವಿತರಿಸಿಲ್ಲ. ಉತ್ಸವದ ನಾಲ್ಕೂ ವೇದಿಕೆಗಳಲ್ಲಿ ಸ್ಥಳಾವಕಾಶ ಇದೆ. ಪಾಸ್‌ ಇದ್ದರಷ್ಟೇ ಪ್ರವೇಶ ಎಂಬ ಭಾವನೆ ಬೇಡ, ಎಲ್ಲರೂ ಮುಕ್ತವಾಗಿ ಕಾರ್ಯಕ್ರಮ ಸವಿಯಬಹುದು ಎಂದು ಅವರು ತಿಳಿಸಿದ್ದಾರೆ.

ವಿಜಯ ವಿಠ್ಠಲದಲ್ಲಿ ‘ಹಂಪಿ ಬೈ ನೈಟ್’

ಎದುರು ಬಸವಣ್ಣ ಮಂಟಪದಿಂದ ಆರಂಭವಾಗಿ ವಿರೂಪಾಕ್ಷ ದೇವಸ್ಥಾನದ ರಥಬೀದಿಯ ಇಕ್ಕೆಲಗಳ ಸಾಲು ಮಂಟಪಗಳ ಮೇಲೆ ನಡೆಯುತ್ತಿದ್ದ ‘ಹಂಪಿ ಬೈ ನೈಟ್‌ ‘ ಕಾರ್ಯಕ್ರಮವನ್ನು ಹಂಪಿ ಉತ್ಸವದ ಅಂಗವಾಗಿ ಸದ್ಯ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದು, ವಿಜಯ ವಿಠ್ಠಲ ದೇವಸ್ಥಾನದ ಆವರಣದಲ್ಲಿ ಅದೇ ಕಾರ್ಯಕ್ರಮ ಇದೇ 3ರವರೆಗೆ ಹಮ್ಮಿಕೊಳ್ಳಲಾಗಿದೆ.

ವಿಜಯ ವಿಠ್ಠಲ ದೇವಸ್ಥಾನ, ಕಲ್ಲಿನ ರಥ, ವಿಠ್ಠಲ ಬಜಾರ್‌, ರಾಜರ ತುಲಾಭಾರ, ಹಳೆ ಶಿವ ದೇವಸ್ಥಾನ, ಕುದುರೆಗಂಬ ಮಂಟಪ, ಆಳ್ವಾರ್ ದೇವಸ್ಥಾನ ಸಹಿತ ಸುತ್ತಮುತ್ತಲಿನ ಸ್ಮಾರಕಗಳಿಗೆ ಆಕರ್ಷಕ ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು, ಸಂಜೆ 7ರಿಂದ ರಾತ್ರಿ.9.15ರವರೆಗೆ ನೋಡಲು ಅವಕಾಶ ಕಲ್ಪಿಸಲಾಗಿದೆ. 10 ವರ್ಷ ಮೇಲ್ಪಟ್ಟವರಿಗೆ ತಲಾ ₹350 ಶುಲ್ಕ ನಿಗದಿಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪುಸ್ತಕ ಮಳಿಗೆ: ಹಂಪಿ ವಿವಿಗೂ ಸಿಗದ ರಿಯಾಯಿತಿ

ಎದುರು ಬಸವಣ್ಣ ಸಮೀಪ ಕೆಲವು ಮಳಿಗೆಗಳನ್ನು ಹಾಕಲಾಗಿದ್ದು, ಅದರಲ್ಲಿ ಪುಸ್ತಕ ಮಳಿಗೆಗಳೂ ಸೇರಿವೆ. ಪ್ರತಿ ವರ್ಷ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಉಚಿತ ಮಳಿಗೆ ವ್ಯವಸ್ಥೆ ಇರುತ್ತಿತ್ತು. ಈ ವರ್ಷ ಅವರಿಗೆ ಸಹ ಮಳಿಗೆಯ ಶುಲ್ಕ ₹3,000 ವಿಧಿಸಲಾಗಿದೆ. ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗ ಇಲ್ಲಿ ಮೂರು ಮಳಿಗೆಗಳನ್ನು ಪಡೆದುಕೊಂಡಿದ್ದು ಈಗಾಗಲೇ ₹9 ಸಾವಿರ ಪಾವತಿಸಿದೆ. 

ಪುಸ್ತಕ ಮಳಿಗೆಗಳನ್ನು ಮೂತ್ರ ವಿಸರ್ಜನೆ ಮಾಡುವ ಸ್ಥಳ ಸಮೀಪ, ದೂರದಲ್ಲಿ ಇಡಲಾಗಿದೆ. ಇದರಿಂದ ಪುಸ್ತಕ ಖರೀದಿಸುವ ಮಂದಿ ಅತ್ತ ಸುಳಿಯದೆ ಇರುವ ಸಾಧ್ಯತೆಯೂ ಇದೆ ಎಂದು ಕೆಲವು ಮಳಿಗೆಯವರು ಬೇಸರ ವ್ಯಕ್ತಪಡಿಸಿದರು. ದರ ಹೆಚ್ಚು ಎಂಬ ಕಾರಣಕ್ಕೆ ಕೆಲವರು ಮಳಿಗೆಯನ್ನು ಕಾಯ್ದಿರಿಸಿದ್ದರೂ ಇತ್ತ ಸುಳಿದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT