ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವ: ರೈತರು ಸಂಕಷ್ಟದಲ್ಲಿರುವಾಗ ಉತ್ಸವ ಅಗತ್ಯ ಇರಲಿಲ್ಲ– ಸಾಹಿತಿ ಕುಂ.ವೀ

Published 2 ಫೆಬ್ರುವರಿ 2024, 10:34 IST
Last Updated 2 ಫೆಬ್ರುವರಿ 2024, 10:34 IST
ಅಕ್ಷರ ಗಾತ್ರ

ಹಂಪಿ (ವಿಜಯನಗರ): ರೈತರು ಸಂಕಷ್ಟದಲ್ಲಿದ್ದಾಗ ಕೋಟ್ಯಂತರ ರೂಪಾಯಿ ವೆಚ್ಚಮಾಡಿ ಉತ್ಸವ ಮಾಡುವ ಅಗತ್ಯ ಇರಲಿ ಎಂದು ಸಾಹಿತಿ ಕುಂ.ವೀರಭದ್ರಪ್ಪ (ಕುಂ.ವೀ) ಹೇಳಿದರು.

ಹಂಪಿ ಉತ್ಸವದ ಅಂಗವಾಗಿ ವಿರುಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ಮಳೆ ಇಲ್ಲದೆ ರೈತರು ಹತಾಶರಾಗಿದ್ದಾರೆ, ಜಲಾಶಯಗಳಲ್ಲಿ ನೀರಿಲ್ಲ, ರೈತರ ಕಣ್ಣಲ್ಲಿ ಮಾತ್ರ ನೀರು ಸುರಿಯುತ್ತಿದೆ. ರೈತರು ಸುಖವಾಗಿರದಿದ್ದಾಗ ರಾಜನೂ ಸುಖವಾಗಿರಬಾರದು ಎನ್ನುವುದು ನೃಪತುಂಗನ ಆಶಯವಾಗಿತ್ತು, ಆತನಲ್ಲಿ ಸಮಾಜವಾದ ಇತ್ತು, ಸಾಮಾನ್ಯ ಜನರು ಬದುಕಬೇಕು ಎನ್ನುವುದು ರಾಘವಾಂಕನ ಧ್ಯೇಯವಾಗಿತ್ತು’ ಎಂದು ಅವರು ಅಭಿಪ್ರಾಯಿಸಿದರು.

‘ರಾಜ್ಯದಲ್ಲಿ ಸೃಜನಶೀಲತೆ ಇದೆ, ಪಂಪ, ರನ್ನ, ಬಸವೇಶ್ವರರು ಜನ್ಮ ತಾಳಿದ ನಾಡಾಗಿದೆ, ಬಸವೇಶ್ವರರ ವಚನ ಸಾಹಿತ್ಯಕ್ಕಿಂತಲೂ ಬೇರೆ ಯಾವುದೇ ಸಾಹಿತ್ಯ ಪ್ರಪಂಚದಲ್ಲಿ ಇಲ್ಲ’ ಎಂದರು.

ಹಂಪಿ ಉತ್ಸವಕ್ಕೆ ಕಾರಣರಾದ ಎಂ.ಪಿ.ಪ್ರಕಾಶರ ಭಾವಚಿತ್ರ ದಾರಿಯುದ್ದಕ್ಕೂ ಅಳವಡಿಸಲಾಗಿರುವ ಯಾವುದೇ ಫ್ಲೆಕ್ಸ್ ಗಳಲ್ಲಿ ಇಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಅವರಿಗೆ ಇದ್ದ ಅಗಾಧವಾದ ಸಾಮಾನ್ಯ ಜ್ಞಾನ ಈಗ ಯಾರಿಗೂ ಇಲ್ಲ‘ ಎಂದರು.

‘ರಾಜಕೀಯ ಶಕ್ತಿಗಳು ಅಭಿವ್ಯಕ್ತಿ ಸಹಿತ ಎಲ್ಲ ಸ್ವಾತಂತ್ರ್ಯವನ್ನು ಕಿತ್ತುಕೊಂಡಿವೆ, ತಪ್ಪು ಕಥೆಗಳು ಆಳುತ್ತಿವೆ. ಸಂವಿಧಾನ ಪ್ರಜಾಪ್ರಭುತ್ವ ಕ್ಕಿಂತಲೂ ಕಪೋಕಲ್ಪಿತ ಕಥೆಗಳಿಗೆ ಮಾನ್ಯತೆ ಸಿಗುತ್ತಿದೆ, ಎಲ್ಲರೂ ವೈಚಾರಿಕತೆ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ’ ಎಂದರು.

ಉಪನ್ಯಾಸಕ ಡಾ.ಸಮದ್ ಕೊಟ್ಟೂರು, ಹಂಪಿ ಪರಿಸರ ಪರಂಪರೆ ಕುರಿತು ಮಾತನಾಡಿ, ಇಲ್ಲಿನ ಬೆಟ್ಟಗುಡ್ಡಗಳೇ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಲು ಕಾರಣವಾಯಿತು, ಇಲ್ಲಿನ ಕಲ್ಲುಗಳಿಗೆ 250 ಕೋಟಿ ವರ್ಷಗಳ ಇತಿಹಾಸ ಇದೆ.

‘ಇಲ್ಲಿನ ಜೀವ ವೈವಿಧ್ಯತೆ ವಿಶಿಷ್ಟವಾಗಿದೆ. ಹಂಪಿ ಕೇವಲ ಶಿಲ್ಪಕಲೆಗೆ ಅಷ್ಟೇ ಶ್ರೀಮಂತವಾಗಿಲ್ಲ, ಅತ್ಯಂತ ಸುಂದರವಾದ ಶ್ರೀಮಂತ ಪರಂಪರೆಯ ಪರಿಸರ ತಾಣ ಇದಾಗಿದೆ. 90 ಬಗೆಯ ಮೀನುಗಳು, ಅಪರೂಪದ ನೀರುನಾಯಿಗಳು, ಬಾನಾಡಿಗಳು ಇಲ್ಲಿ ನೆಲೆಸಿವೆ ಎಂದರು.

ಸಹಾಯಕ ಸಂಶೋನಾಧಿಕಾರಿ ಡಾ.ಮಲ್ಲಿಕಾರ್ಜುನ ಮಾನ್ಪಡೆ,'ವ್ಯಾಸಕೂಟ‌ ಮತ್ತು ದಾಸಕೂಟ ಸಾಂಸ್ಕೃತಿಕ ಮುಖಾಮುಖಿ,' ಕುರಿತು ವಿಷಯ ಮಂಡಿಸಿದರು.

‘ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡ ಸಾಂಸ್ಕೃತಿಕ ಪರಂಪರೆಗೆ ಉನ್ನತ ಕೊಡುಗೆ ನೀಡಿದೆ. ಸಮ ಸಮಾಜ ಕಟ್ಟಬೇಕು ಎಂಬ ಹಿನ್ನೆಲೆ ವಚನ ಸಾಹಿತ್ಯಕ್ಕಿದೆ. ದಾಸ ಪರಂಪರೆ 9ನೇ ಶತಮಾನದಲ್ಲಿ ಚರ್ಚೆಯಾಗಿದೆ.‌ ಮದ್ವಾಚಾರ್ಯರಿಂದ ಸ್ಥಾಪಿತವಾಯಿತು, ಭಕ್ತಿ ಹಿನ್ನೆಲೆಯಲ್ಲಿ ಚಳುವಳಿ ಆರಂಭವಾಯಿತು. ಶಂಕರಾಚಾರ್ಯರು ದಲಿತ ಸಮುದಾಯಗಳಿಗೆ ವೈಷ್ಣವ ಪರಂಪರೆ ದೀಕ್ಷೆ ನೀಡುವ ಮೂಲಕ ದಲಿತ ಸಮುದಾಯಗಳನ್ನು ವೈಷ್ಣವ ಪರಂಪರೆಯತ್ತ ಸೆಳೆಯಲು ಸಾಧ್ಯವಾಯಿತು, ಈ ಹಿನ್ನೆಲೆಯಲ್ಲಿ ಇಂದು ದಾಸ ಸಮುದಾಯಗಳನ್ನು ಕಾಣಬಹುದಾಗಿದೆ’ ಎಂದರು.

ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರಪ್ಪ ಸೊಬಟಿ ಅವರು, 'ಮೌಖಿಕ ಆಕರಗಳಲ್ಲಿ ವಿಜಯನಗರ' ವಿಷಯ ಕುರಿತು ವಿಷಯ ಮಂಡಿಸಿದರು.

‘ಸೈದ್ಧಾಂತಿಕ ಅಧ್ಯಯನ ಅಗತ್ಯವಾಗಿದೆ, ವಿಜಯನಗರ ದೇವರ ಸಾಮ್ರಾಜ್ಯವಾಗಿತ್ತು ಎಂದರು. ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿ.ವಿ.ಯ ಡಾ.ಕೆ.ಎಸ್.ಶಿವಪ್ರಕಾಶ್ ಅವರು ವಿಜಯನಗರ ಕಾಲದ ಬೇಹುಗಾರಿಕೆ ಮತ್ತು ಗೂಢಚಾರಿಕೆ ಸಂಬಂಧಾಂತರಗಳು ಕುರಿತು ವಿಷಯ ಮಂಡಿಸಿದರು. ಬೇಹುಗಾರಿಕೆ ಬಗ್ಗೆ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ, 80 ಗಂಡಸರು 50 ಹೆಂಗಸರು ಕಾರ್ಯನಿರ್ವಹಿಸಬೇಕಿತ್ತು‌. ಇಂದಿನ ಪೊಲೀಸ್ ವ್ಯವಸ್ಥೆ ಅಂದೇ ಇತ್ತು. ಹುಚ್ಚರಾಗಿ, ಸನ್ಯಾಸಿಗಳಾಗಿ ಸಂತೆ, ವೇಶ್ಯೆಗೃಹ ಸೇರಿ ಹಲವಾರು ಕಡೆ ಮಾಹಿತಿ ಪಡೆದಿದ್ದರು. ತಂತ್ರ, ಪ್ರತಿತಂತ್ರ ರೂಪಿಸಿದರು. ವೇಷ ಮರೆಸಿಕೊಂಡು ಶ್ರೀ ಕೃಷ್ಣ ದೇವರಾಯ ಬೇಹುಗಾರಿಕೆ ಪರೀಕ್ಷೆ ನಡೆಸುತ್ತಿದ್ದರು’ ಎಂದರು.

ಕೊಪ್ಪಳದ ಸ್ನಾತಕೋತ್ತರ ಕೇಂದ್ರದ ಡಾ. ವೀರೇಶ್ ಉತ್ತಂಗಿ ಅವರು ವರ್ತಮಾನದ ಸಂದರ್ಭದಲ್ಲಿ ಹಂಪಿ ಕುರಿತು ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ.ಕೆ.ರವೀಂದ್ರನಾಥ, ಶರಣರ ಕುರಿತ ಸಾಹಿತ್ಯದ ಕೃಷಿ ಇಲ್ಲಿ ನಡೆಯಿತು, ಸಣ್ಣ ಕಾಲುವೆಗಳ ಮೂಲಕ ಕೃಷಿ ಚಟುವಟಿಕೆ ಆರಂಭಿಸಿದ್ದರಿಂದ ಹಂಪಿ ಸಂಪದ್ಭರಿತವಾಯಿತು ಎಂದರು.

ಎಸ್.ಎಸ್.ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ, ತಾಲ್ಲೂಕು ಘಟಕದ ನಾಯಕರ ಹುಲುಗಪ್ಪ, ಸುಭಾಷ್ ಚಂದ್ರಬೋಸ್, ಕವಿತಾ ಕಟ್ಟೇಗೌಡ ಇದ್ದರು.

ವಿಷಯ ಮಂಡನೆಗೆ ಅಡ್ಡಿ–ಬೇಸರ

ವಿಚಾರಗೋಷ್ಠಿಯಲ್ಲಿ ಸಮಯದ ಅಭಾವದ ನೆಪವೊಡ್ಡಿ ವಿಷಯ ಮಂಡನೆಗೆ ಕೇವಲ 12 ನಿಮಿಷ ಸಮಯ ನಿಗದಿಮಾಡಿದ್ದರಿಂದ, ವಿಷಯಗಳು ಅಪೂರ್ಣವಾಗಿ ಮಂಡನೆಗೊಂಡವು, ವಿಷಯಗೋಷ್ಠಿಯ ಮೂಲ ಉದ್ಧೇಶ ಈಡೇರಲಿಲ್ಲ ಎಂದು ಸಾಹಿತಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT