ಶುಕ್ರವಾರ, ಜನವರಿ 28, 2022
25 °C
ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಯಿಂದ ಧರಣಿ

ಲಂಚ, ಕಮಿಷನ್‌ ಆರೋಪದನ್ಯಾಯಾಂಗ ತನಿಖೆಗೆ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮುಂಬಡ್ತಿಗೆ ಲಂಚ, ಪಿಂಚಣಿಗೆ ಕಮಿಷನ್‌ ಕೇಳಲಾಗುತ್ತಿದೆ ಎನ್ನುವುದರ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿ ಅಧ್ಯಾಪಕರ ಸಂಘ ಹಾಗೂ ಬೋಧಕೇತರ ನೌಕರರ ಸಂಘದವರು ಗುರುವಾರ ಕುಲಪತಿ ಕಚೇರಿ ಎದುರು ಧರಣಿ ನಡೆಸಿದರು.

ಕುಲಪತಿ ಪ್ರೊ. ಸ.ಚಿ. ರಮೇಶ, ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ, ಹಣಕಾಸು ಅಧಿಕಾರಿ ರಮೇಶ ನಾಯ್ಕ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

‘ಬಡ್ತಿ ಕೊಡಲು ಲಂಚ, ಪಿಂಚಣಿ ಬಿಡುಗಡೆಗೆ ಕಮಿಷನ್‌ ಕೇಳಲಾಗುತ್ತಿದೆ. ಸಂಶೋಧನಾ ವಿದ್ಯಾರ್ಥಿಗಳ ಕೊಲೊಕ್ವಿಯಂಗೆ ₹50 ಸಾವಿರ ಬೇಡಿಕೆ, ಶಿಷ್ಯವೇತನ ಬಿಡುಗಡೆಗೆ ಹಣ ಕೇಳುತ್ತಿದ್ದಾರೆ ಎಂದು ವಿಶ್ವವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳೇ ನೇರ ಆರೋಪ ಮಾಡಿದ್ದಾರೆ. ಇದು ಬಹಳ ಗಂಭೀರವಾದ ವಿಷಯ. ಎಲ್ಲರೂ ತಲೆತಗ್ಗಿಸುವ ವಿಚಾರ. ಈ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಕಳೆದ ಮೂರು ವರ್ಷಗಳಿಂದ ವಿಶ್ವವಿದ್ಯಾಲಯದಲ್ಲಿ ನಡೆದ ಹಣಕಾಸಿನ ಖರ್ಚಿನ ಕುರಿತಾಗಿ ಶ್ವೇತ ಪತ್ರ ಹೊರಡಿಸಬೇಕು. ಯುಜಿಸಿ ನಿಯಮ, ಮೀಸಲಾತಿ ಮಾನದಂಡಗಳಿಗೆ ವಿರುದ್ಧವಾಗಿ ನಡೆಯುತ್ತಿರುವ 17 ಬೋಧಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಎಂ. ಮಲ್ಲಿಕಾರ್ಜುನಗೌಡ ಅವರ ವರ್ಗಾವಣೆ ರದ್ದುಗೊಳಿಸಬೇಕು. ಕಾಲಕಾಲಕ್ಕೆ ಕಾಯಂ, ಗುತ್ತಿಗೆ ಆಧಾರಿತ ನೌಕರರ ವೇತನ, ಪಿಂಚಣಿ ಬಿಡುಗಡೆ ಮಾಡಬೇಕು. ಬೋಧಕರ ಪ್ರೊಬೆಷನರಿ ಅವಧಿ ಪೂರ್ಣಗೊಂಡಿದೆ ಎಂದು ಘೋಷಿಸಬೇಕು. ಮೃತ ಸಿಬ್ಬಂದಿ ಕುಟುಂಬ ಸದಸ್ಯರಿಗೆ ತಕ್ಷಣವೇ ಅನುಕಂಪದ ಆಧಾರದ ಮೇಲೆ ನೌಕರಿ ಕೊಡಬೇಕು. ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಫೆಲೋಶಿಪ್‌ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

‘ನನಗೆ ಮುಂಬಡ್ತಿ ಕೊಡಲು ಕುಲಪತಿಯವರು ₹6 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಬೋಧಕ ಹುದ್ದೆ ನೇಮಕಾತಿಯ ನಿಯಮ ಕೇಳಿದ್ದಕ್ಕೆ ನನ್ನನ್ನು ವರ್ಗಾವಣೆಗೊಳಿಸಿದ್ದಾರೆ’ ಎಂದು ಎಂ. ಮಲ್ಲಿಕಾರ್ಜುನಗೌಡ ಎಲ್ಲರೆದುರೇ ಸ.ಚಿ. ರಮೇಶ ವಿರುದ್ಧ ಆರೋಪ ಮಾಡಿದರು.

ಧರಣಿ ನಿರತರ ಮಾತು ಆಲಿಸಿದ ಕುಲಪತಿ ಪ್ರೊ. ಸ.ಚಿ. ರಮೇಶ, ‘ನ. 20ರಂದು ಸಿಂಡಿಕೇಟ್‌ ಸಭೆ ನಡೆಯಲಿದೆ. ಅದರಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಾಪಕರ ಸಂಘದ ಅಧ್ಯಕ್ಷ ವಾಸುದೇವ ಬಡಿಗೇರ್‌, ‘ನ. 23ರೊಳಗೆ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಈ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು