ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ‘ಸ್ವರ್ಣ’ದತ್ತ ತೆವಳುತ್ತಿದೆ ಬೆಳ್ಳಿ ಭವನ

ಏಳು ವರ್ಷವಾದರೂ ಮುಗಿಯದ ಕಾಮಗಾರಿ-ಪ್ರತಿನಿತ್ಯ ಸಾವಿರಾರು ಮಂದಿ ನೋಡುತ್ತಲೇ ಇದ್ದಾರೆ ಸರ್ಕಾರದ ಅನಾದರ
Published 11 ಡಿಸೆಂಬರ್ 2023, 6:10 IST
Last Updated 11 ಡಿಸೆಂಬರ್ 2023, 6:10 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ 25 ವರ್ಷ ತುಂಬಿದ ನೆನಪಿಗಾಗಿ ₹20 ಕೋಟಿ ವೆಚ್ಚದಲ್ಲಿ ಬೆಳ್ಳಿ ಭವನ ನಿರ್ಮಾಣ ಕಾಮಗಾರಿ ಏಳು ವರ್ಷದ ಹಿಂದೆ ಆರಂಭವಾಗಿದ್ದರೂ, ಅನುದಾನವಿಲ್ಲದೆ ಕಾಮಗಾರಿ ಅರ್ಧಕ್ಕೇ ನಿಂತಿದೆ. ತುಕ್ಕು ಹಿಡಿಯಲು ಆರಂಭಿಸಿರುವ ಅರ್ಧಂಬರ್ಧ ನಿರ್ಮಾಣದ ಕಟ್ಟಡ ಇಡೀ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತ ಕುಹಕವಾಡುತ್ತಿದೆ.

‘ಬೆಳ್ಳಿ ಹಬ್ಬ ಮುಗಿದು ಹೋಗಿ ಏಳು  ವರ್ಷ ಕಳೆಯಿತು. ಬೆಳ್ಳಿ ಭವನದ ಕಾಮಗಾರಿ ಶೇ 40ರಷ್ಟೂ ಪೂರ್ಣಗೊಂಡಿಲ್ಲ. ಎಷ್ಟೇ ಮನವಿ ಮಾಡಿಕೊಂಡರೂ ಸರ್ಕಾರ ಬಾಕಿ ಹಣ ಬಿಡುಗಡೆ ಮಾಡುತ್ತಿಲ್ಲ. ಸಂಸ್ಥೆಗೆ 50 ವರ್ಷವಾಗುವ ವೇಳೆಗಾದರೂ ಅನುದಾನ ಬಿಡುಗಡೆಯಾಗಿ ಬೆಳ್ಳಿಭವನ ಸ್ವರ್ಣಭವನ ಹೆಸರಲ್ಲಿ ಪೂರ್ಣಗೊಳ್ಳುತ್ತದೆಯೇ?’ ಎಂದು ಕಮಲಾಪುರ–ಪಿ.ಕೆ.ಹಳ್ಳಿ ರಸ್ತೆಯಲ್ಲಿ ಸಾಗುವ ಪ್ರತಿಯೊಬ್ಬರೂ ಕೇಳುವ ಪ್ರಶ್ನೆ ಇದು. ಈ ರಸ್ತೆಯ ಪಕ್ಕದಲ್ಲೇ 1,000 ಆಸನ ಸಾಮರ್ಥ್ಯದ ಈ ಬೃಹತ್ ಸಭಾಂಗಣದ ವೃತ್ತಾಕಾರಣ ಚಾವಣಿಯ ಬೀಮ್‌ಗಳು ಕಾಣಿಸುತ್ತವೆ. 

‘ಗಾಳಿ, ಮಳೆ,  ಬಿಸಿಲಿಗೆ ಮೈ ಒಡ್ಡಿ ನಿಂತಿರುವ ಚಾವಣಿಗೆ ಹಾಕಿದ ಕಬ್ಬಿಣದ ಬೀಮ್‌ಗಳು ತುಕ್ಕು ಹಿಡಿಯುತ್ತಿವೆ. ಚಾವಣಿಗೆ ಶೀಟ್‌ ಹೊದೆಸುವ ಕೆಲಸ ವಿಳಂಬವಾದಷ್ಟೂ ಕಟ್ಟಡ ಬೇಗನೆ ಶಿಥಿಲಗೊಳ್ಳುವ ಆತಂಕ ಇದೆ. ಒಂದು ಉತ್ತಮ ಯೋಜನೆ ಹಾಳಾಗದಂತೆ ಸರ್ಕಾರ ತುರ್ತಾಗಿ ಸ್ಪಂದಿಸುವ ಅಗತ್ಯ ಇದೆ’ ಎಂದು ವಿಶ್ವವಿದ್ಯಾಲಯದ ತಂತ್ರಜ್ಞರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳ್ಳಿ ಭವನ ಹಿಂದಿನ ಕುಲಪತಿ ಮಲ್ಲಿಕಾ ಘಂಟಿ ಅವರ ಅವಧಿಯಲ್ಲಿ ರೂಪುಗೊಂಡ ಯೋಜನೆ ಇದು. ರಾಜ್ಯ ಸರ್ಕಾರವೇ ಇದಕ್ಕೆ ಹಣಕಾಸಿನ ವ್ಯವಸ್ಥೆ ಮಾಡುವ ವಾಗ್ದಾನ ಮಾಡಿತ್ತು. ಅರ್ಧದಷ್ಟು ಹಣವನ್ನೂ ಬಿಡುಗಡೆ ಮಾಡಿತ್ತು. ಆದರೆ ಉಳಿದ ಹಣ ಬಾರದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದೆ’  ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ತಿಳಿಸಿದರು.

ವಿಶ್ವವಿದ್ಯಾಲಯದಲ್ಲಿ ಮೂರ್ನಾಲ್ಕು ಚಿಕ್ಕ ಸಭಾಂಗಣಗಳಿವೆ. ಆದರೆ ಬೃಹತ್ ಸಭಾಂಗಣ ಇಲ್ಲ. ಹೀಗಾಗಿ ವಿಶ್ವವಿದ್ಯಾಲಯದ ಬಳಕೆಗೆ ಹಾಗೂ ಸಾರ್ವಜನಿಕರ ಮದುವೆ, ಇತರ ಸಮಾರಂಭಗಳಿಗೆ ಬಳಕೆಯ ಉದ್ದೇಶದೊಂದಿಗೆ ಈ ಸಭಾಂಗಣ ನಿರ್ಮಾಣದ ಯೋಜನೆ ರೂಪಿಸಲಾಗಿತ್ತು. ಇದರಿಂದ ವಿಶ್ವವಿದ್ಯಾಲಯಕ್ಕೆ ನಿರಂತರ ಆದಾಯವೂ ಬರುತ್ತಿತ್ತು. ಸದ್ಯ ಈ ಕಟ್ಟಡದ ಸ್ಥಿತಿಗತಿ ನೋಡಿದರೆ ಯುದ್ಧಪೀಡಿತ ಉಕ್ರೇನ್‌, ಗಾಜಾ ಪಟ್ಟಿಯ ಪ್ರದೇಶವೊಂದರಲ್ಲಿ ಇದ್ದೇವೆಯೇ ಎಂಬ ಭಾವನೆ ಮೂಡುವಂತಿದೆ.

ಬೃಹತ್‌ ಕ್ಯಾಂಪಸ್‌ನಲ್ಲಿ ಕ್ರೀಡಾಂಗಣವೇ ಇಲ್ಲ
‘ವಿದ್ಯಾರಣ್ಯ’  ಕ್ಯಾಂಪಸ್‌ನ ಬೃಹತ್ ಗಾತ್ರ ನೋಡಿದರೆ ಇಲ್ಲಿ ಕ್ರೀಡಾಂಗಣ ಸಹಿತ ಎಲ್ಲಾ ವ್ಯವಸ್ಥೆಯೂ ಇರಬಹುದು ಎಂಬ ಊಹೆ ಮಾಡಿದರೆ ಅದರಲ್ಲಿ ತಪ್ಪಿಲ್ಲ. ಆದರೆ ಇಲ್ಲಿನ ದೊಡ್ಡ ಕೊರತೆಯೇ ಕ್ರೀಡಾಂಗಣ. ಸದ್ಯ ನ್ಯಾಕ್‌ ‘ಬಿ ಪ್ಲಸ್‌’ ಗ್ರೇಡ್‌ನಲ್ಲಿರುವ ವಿಶ್ವವಿದ್ಯಾಲಯ ಹಿನ್ನೆಡೆಗೆ ಇದೂ ಒಂದು ಕಾರಣವಾಗಿದೆ. ಸುಸಜ್ಜಿತ ಕ್ರೀಡಾಂಗಣ ಕ್ರೀಡಾ ತರಬೇತುದಾರರು ಇರುವ ಶಿಕ್ಷಣ ಸಂಸ್ಥೆ ಸುಲಭವಾಗಿ ‘ಬಿ++’ ಅಥವಾ ‘ಎ’ ಗ್ರೇಡ್ ಪಡೆಯುತ್ತದೆ ಎಂಬುದಕ್ಕೆ ಹಲವು ವಿಶ್ವವಿದ್ಯಾಲಯಗಳು ನಿದರ್ಶನವಾಗಿವೆ. ‘ಕಮಲಾಪುರ–ಪಿ.ಕೆ.ಹಳ್ಳಿ ಮುಖ್ಯ ರಸ್ತೆಯ ಹಾಸ್ಟೆಲ್‌ ಎದುರಿನಲ್ಲಿ ಮ್ಯೂಸಿಯಂಗೆ ಹೋಗುವ ಮಾರ್ಗದ ಬದಿಯಲ್ಲಿ 50 ಎಕರೆಯಷ್ಟು ನಿವೇಶನ ಇದ್ದು ಅಲ್ಲಿ ಒಂದು ಒಳಾಂಗಣ ಕ್ರೀಡಾಂಗಣ ಹಾಗೂ 400 ಮೀಟರ್ ಟ್ರ್ಯಾಕ್‌ ಹೊಂದಿರುವ ಒಂದು ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಒಳಾಂಗಣ ಕ್ರೀಡಾಂಗಣಕ್ಕೆ 1 ಎಕರೆ ಜಾಗ ಬೇಕಿದ್ದು ಡಿಎಂಎಫ್‌ ನಿಧಿಯಿಂದ ₹2 ಕೋಟಿ ಹಣ ನೀಡುವ ಭರವಸೆ ಸಿಕ್ಕಿದೆ.  ಸ್ಥಳೀಯ ಶಾಸಕ ಎಚ್‌.ಆರ್‌.ಗವಿಯಪ್ಪ ಅವರು ಸಹ ಇದಕ್ಕೆ ಆಸಕ್ತಿ ತೋರಿಸಿದ್ದಾರೆ. ಪಕ್ಕದಲ್ಲಿ ಕ್ರೀಡಾಂಗಣ ನಿರ್ಮಿಸಲು ಸುಮಾರು ₹3 ಕೋಟಿಯ ಅಗತ್ಯ ಇದ್ದು ಕ್ರೀಡಾ ಸಚಿವ ಬಿ.ನಾಗೇಂದ್ರ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇದು ಕಾರ್ಯಗತಗೊಂಡರೆ ವಿಶ್ವವಿದ್ಯಾಲಯದ ಜತೆಗೆ ಸುತ್ತಮುತ್ತಲಿನ ಎಲ್ಲರಿಗೂ ಪ್ರಯೋಜನ  ಆಗಲಿದೆ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT