ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಹಂಪಿ ಉತ್ಸವಕ್ಕೆ ವರ್ಣರಂಜಿತ ತೆರೆ

ಧ್ವನಿ ಬೆಳಕು ಕಾರ್ಯಕ್ರಮ ಅಂತ್ಯ: ಸೂಜಿಗಲ್ಲಿನಂತೆ ಸೆಳೆದ ‘ವಿಜಯನಗರ ವೈಭವ’ ಕಥಾನಕ
Published 8 ಫೆಬ್ರುವರಿ 2024, 13:22 IST
Last Updated 8 ಫೆಬ್ರುವರಿ 2024, 13:22 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಜಯನಗರ ಆಡಳಿತದ ಹುಟ್ಟು, ಬೆಳವಣಿಗೆ, ಅವನತಿ ಹಾಗೂ ಕನ್ನಡ ನಾಡಿಗೆ ವಿಜಯನಗರ ನೀಡಿದ ಅನನ್ಯ ಕೊಡುಗೆಗಳನ್ನು ಕೇವಲ ಎರಡೂವರೆ ಗಂಟೆಗಳಲ್ಲಿ ದೃಶ್ಯ, ರೂಪಕ, ಗಾನ, ನಿರೂಪಣೆ ಮೂಲಕ ಕಟ್ಟಿಕೊಡುವ ಧ್ವನಿ ಬೆಳಕು ಕಾರ್ಯಕ್ರಮ ಗುರುವಾರ ರಾತ್ರಿಯ ಪ್ರದರ್ಶನದೊಂದಿಗೆ ಕೊನೆಗೊಂಡಿತು. ಈ ಮೂಲಕ ಈ ಬಾರಿಯ ಹಂಪಿ ಉತ್ಸವಕ್ಕೂ ವರ್ಣರಂಜಿತ ತೆರೆ ಬಿತ್ತು.

ನಟ ವಿಷ್ಣುವರ್ಧನ್‌ ಅವರ ಕಂಚಿನ ಕಂಠ, ಗಾಯಕ ಸಿ.ಅಶ್ವಥ್‌ ಅವರ ಮಧುರ ಗಾನ ಹಾಗೂ ಇತರ ಹಲವು ಖ್ಯಾತನಾಮರ ಧ್ವನಿಯ ಹಿನ್ನೆಲೆಯಲ್ಲಿ, ಸೂರ್ಯನಾಥ ಕಾಮತ್‌ ಅವರ ಐತಿಹಾಸಿಕ ಇಣುಕು ನೋಟದೊಂದಿಗೆ ಸಿದ್ಧವಾದ ಈ ‘ಧ್ವನಿ ಬೆಳಕು’ ವಿಜಯನಗರ ಸಾಮ್ರಾಜ್ಯದ ಉಚ್ಛ್ರಾಯ ಸ್ಥಿತಿಯನ್ನು ಮನೋಹರವಾಗಿ ಕಟ್ಟಿಕೊಟ್ಟರೆ, ವಿಶ್ವಾಸದ್ರೋಹ, ಅಧಿಕಾರದಲ್ಲಿದ್ದವರ ಲಂಪಟತನಗಳಂತಹ ಸೂಕ್ಷ್ಮ ಸಂಗತಿಗಳನ್ನೂ ಮನೋಜ್ಞವಾಗಿ ಕಟ್ಟಿಕೊಟ್ಟಿತು.

110 ಕಲಾವಿದರು ಹಾಗೂ 15 ತಂತ್ರಜ್ಞರನ್ನು ಒಳಗೊಂಡಂತೆ ಒಟ್ಟು 125 ಮಂದಿಯ ತಂಡ ಫೆ.2ರಿಂದ ಪ್ರತಿ ಸಂಜೆ 7ರಿಂದ ರಾತ್ರಿ 9.30ರವರೆಗೆ ಕಾರ್ಯಕ್ರಮ ನಡೆಸಿಕೊಟ್ಟರು.

ಐದು ಮುಖ್ಯ ವೇದಿಕೆಗಳು, ನಾಲ್ಕು ಸಣ್ಣ ವೇದಿಕೆಗಳು, ಒಂದು ದೇವಸ್ಥಾನ, ಒಂದು ಮಸೀದಿ ಸಹಿತ ಒಟ್ಟು 12 ಸ್ಥಳಗಳಲ್ಲಿ ಕಲಾವಿದರು ಒಂದು ಕ್ಷಣವನ್ನೂ ವ್ಯರ್ಥ ಮಾಡದಂತೆ ನಡೆಸಿಕೊಟ್ಟ ಕಾರ್ಯಕ್ರಮವನ್ನು ಕಿಕ್ಕಿರಿದ ಪ್ರೇಕ್ಷಕರು ಕಣ್ತುಂಬಿಕೊಂಡರು. ಕೃಷ್ಣದೇವರಾಯನ ರಾಜವೈಭವ, ಬಸವಣ್ಣ, ಕನಕದಾಸ, ಪುರಂದರದಾಸರ ಮಹಾನ್ ಸಂದೇಶಗಳು, ವಿಜಯನಗರದ ಅವನತಿಯ ಬಳಿಕವೂ ಮೈಸೂರು ಸಹಿತ ಹಲವು ರಾಜಮನೆತನಗಳ ಮೂಲಕ ವಿಜಯನಗರದ ಕಲೆ, ಸಂಸ್ಕೃತಿ ಮುಂದುವರಿದ ಕಥನವನ್ನು ಇಲ್ಲಿ ಸುಂದರವಾಗಿ ಕಟ್ಟಿಕೊಡಲಾಯಿತು.

ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅನುಭವಿ ತಜ್ಞರು ಈ ಬಾರಿಯೂ ಅಗತ್ಯದ ತರಬೇತಿ, ಸಲಹೆ ನೀಡಿದ್ದರು. ರಂಗ ನಿರ್ದೇಶಕ ಡಾ.ಜಿತೇಂದ್ರ ಪಾನ್‌ ಪಾಟೀಲ್‌ ಅವರು ಸ್ಥಳೀಯ 110 ಮಂದಿ ಕಲಾವಿದರಿಗೆ ಮಾರ್ಗದರ್ಶನ ನೀಡಿದ್ದರು. ಇದರಲ್ಲಿ ಶೇ 75ಕ್ಕಿಂತ ಅಧಿಕ ಮಂದಿ ಈ ಹಿಂದೆ ಅಭಿನಯಿಸಿದ ಕಲಾವಿದರೇ ಇದ್ದುದರಿಂದ ಹೆಚ್ಚಿನ ತರಬೇತಿಯ ಅಗತ್ಯ ಬಿದ್ದಿಲ್ಲ. ಲೆಕ್ಕಕ್ಕೆ ಒಂದು ವಾರ ತರಬೇತಿ ಆಗಿದ್ದರೂ, ಸರಿಯಾಗಿ ತರಬೇತಿ ಸಿಕ್ಕಿದ್ದು ಮೂರು ದಿನ ಮಾತ್ರ ಎಂದು ಕೆಲವು ಕಲಾವಿದರು ತಿಳಿಸಿದರು.

ಎಲ್‌.ಡಿ.ಜೋಷಿ ಅವರು ಕಾರ್ಯಕ್ರಮ ನಿರ್ವಾಹಕರಾಗಿದ್ದರು. ಕೇಂದ್ರ ಸರ್ಕಾರ ನಿಯೋಜಿಸಿದ ಹಿರಿಯ ಕಲಕಾವಿದರು ಮತ್ತು ತಂತ್ರಜ್ಞರಾದ ರವೀಂದ್ರ, ಅವಿನಾಶ್, ಅಮೇಟಿ ಭಾರ್ಗವ, ಸುಹಾಸ್, ಮಂದಾರ ಗುಪ್ತೆ ಮೊದಲಾದವರು ಧ್ವನಿ ಬೆಳಕಿನ ಕಾರ್ಯಕ್ರಮದ ಯಶಸ್ಸಿಗೆ ಹಗಲಿರುಳು ಶ್ರಮಿಸಿದರು.

ಹಂಪಿ ಉತ್ಸವದ ಪ್ರಯುಕ್ತ ನಡೆದ ‘ವಿಜಯನಗ ವೈಭವ’ ಧ್ವನಿ ಬೆಳಕಿನ ಕಾರ್ಯಕ್ರಮದಲ್ಲಿ ಪುರಂದರ ಕನಕ ದಾಸರ ಸಂದೇಶಗಳನ್ನು ಬಿಂಬಿಸಿದ ಪರಿ
ಹಂಪಿ ಉತ್ಸವದ ಪ್ರಯುಕ್ತ ನಡೆದ ‘ವಿಜಯನಗ ವೈಭವ’ ಧ್ವನಿ ಬೆಳಕಿನ ಕಾರ್ಯಕ್ರಮದಲ್ಲಿ ಪುರಂದರ ಕನಕ ದಾಸರ ಸಂದೇಶಗಳನ್ನು ಬಿಂಬಿಸಿದ ಪರಿ
ಹಂಪಿ ಉತ್ಸವದ ಪ್ರಯುಕ್ತ ನಡೆದ ‘ವಿಜಯನಗ ವೈಭವ’ ಧ್ವನಿ ಬೆಳಕಿನ ಕಾರ್ಯಕ್ರಮದಲ್ಲಿ ವಿದೇಶಿ ವ್ಯಾಪಾರಿ ಅಬ್ದುಲ್‌ ರಜಾಕ್‌ ವಿಜಯನಗರವನ್ನು ವರ್ಣಿಸುವ ಸನ್ನಿವೇಶ
ಹಂಪಿ ಉತ್ಸವದ ಪ್ರಯುಕ್ತ ನಡೆದ ‘ವಿಜಯನಗ ವೈಭವ’ ಧ್ವನಿ ಬೆಳಕಿನ ಕಾರ್ಯಕ್ರಮದಲ್ಲಿ ವಿದೇಶಿ ವ್ಯಾಪಾರಿ ಅಬ್ದುಲ್‌ ರಜಾಕ್‌ ವಿಜಯನಗರವನ್ನು ವರ್ಣಿಸುವ ಸನ್ನಿವೇಶ
ಹಂಪಿ ಉತ್ಸವದ ಪ್ರಯುಕ್ತ ನಡೆದ ‘ವಿಜಯನಗ ವೈಭವ’ ಧ್ವನಿ ಬೆಳಕಿನ ಕಾರ್ಯಕ್ರಮದಲ್ಲಿ ಕೃಷ್ಣದೇವರಾಯ ಕುಸ್ತಿಯಲ್ಲಿ ತರಬೇತಿ ಪಡೆಯುವಂತಹ ಸನ್ನಿವೇಶ
ಹಂಪಿ ಉತ್ಸವದ ಪ್ರಯುಕ್ತ ನಡೆದ ‘ವಿಜಯನಗ ವೈಭವ’ ಧ್ವನಿ ಬೆಳಕಿನ ಕಾರ್ಯಕ್ರಮದಲ್ಲಿ ಕೃಷ್ಣದೇವರಾಯ ಕುಸ್ತಿಯಲ್ಲಿ ತರಬೇತಿ ಪಡೆಯುವಂತಹ ಸನ್ನಿವೇಶ

ಗಮನ ಸೆಳೆದ ಯತಿಗಳ ಗೈರು ಹಂಪಿ ಉತ್ಸವದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣವಾದ ವಿದ್ಯಾರಣ್ಯ ಮಠದ ಗುರುಗಳನ್ನು ಹಂಪಿಯ ಹೇಮಕೂಟದ ಸಿಂಹಾಸನದ ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಆನೆಗುಂದಿಯ ಶಿವಾನಂದ ಭಾರತಿ ಶ್ರೀಗಳನ್ನು ಮಾತಂಗ ಮುನಿ ದಯಾನಂದ ಪುರಿ ಶ್ರೀ ಸೇರಿದಂತೆ ಈ ಪ್ರದೇಶದ ಎಲ್ಲ ಯತಿಗಳನ್ನು ಕರೆಸಿ ಅವರಿಂದ ಆಶೀರ್ವಾದ ಪಡೆಯುವ ಪದ್ಧತಿ ಈವರೆಗೆ ನಡೆದುಬಂದಿತ್ತು. ಈ ಬಾರಿ ಯತಿಗಳ ದರ್ಶನ ಇಲ್ಲದೆ ಹಂಪಿ ಉತ್ಸವ ಧ್ವನಿ ಬೆಳಕಿನ ಕಾರ್ಯಕ್ರಮ ಕೊನೆಗೊಂಡಿದ್ದು ಅವರಿಗೆ ಆಹ್ವಾನ ನೀಡಿಲ್ಲವೇ ಅಥವಾ ಉದ್ದೇಶಪೂರ್ವಕವಾಗಿ ಇಂತಹ ನಿರ್ಲಕ್ಷ್ಯ ವಹಿಸಲಾಗಿದೆಯೇ ಎಂದು ಚರ್ಚೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT