ಶುಕ್ರವಾರ, ಏಪ್ರಿಲ್ 23, 2021
28 °C

ಹೂವಿನಹಡಗಲಿ: ಸ್ತ್ರೀ ವೇಷದಲ್ಲಿ ಇವರಿಗೆ ಸರಿಸಾಟಿ ಇಲ್ಲ

ಕೆ. ಸೋಮಶೇಖರ್‌ Updated:

ಅಕ್ಷರ ಗಾತ್ರ : | |

Prajavani

ಹೂವಿನಹಡಗಲಿ: ಸೀರೆ, ಲೆಹಂಗಾ ತೊಟ್ಟು ರಂಗ ಪ್ರವೇಶಿಸಿದರೆ ಇವರನ್ನು ಪುರುಷ ಎಂದು ಯಾರೂ ನಂಬುವುದಿಲ್ಲ. ಹೆಂಗಸರನ್ನೇ ಮೀರಿಸುವ ಇವರ ಮೈಮಾಟ, ಹಾವಭಾವ, ಒನಪು, ವೈಯ್ಯಾರಕ್ಕೆ ಮನಸೋಲದವರೇ ಇಲ್ಲ. ದಶಕದಿಂದ ಹೀಗೆ ಸ್ತ್ರೀ ವೇಷ ಮಾಡುತ್ತಲೇ ಜನರ ನಡುವೆ ಹೆಸರಾಗಿದ್ದಾರೆ ತಾಲ್ಲೂಕಿನ ಉತ್ತಂಗಿ ಗ್ರಾಮದ ಯುವ ಪ್ರತಿಭೆ ಪಾರುಪತ್ತೆಗಾರ ಕೊಟ್ರೇಶ್.

ಹೆಣ್ಣು ಪಾತ್ರಗಳಿಗೆ ಒಗ್ಗುವಂತಹ ಮುಖಚರ್ಯೆ ಹೊಂದಿರುವ ಕೊಟ್ರೇಶ 16ನೇ ವಯಸ್ಸಿನಲ್ಲಿರುವಾಗಲೇ ಸ್ತ್ರೀಪಾತ್ರಗಳಿಗೆ ಬಣ್ಣ ಹಚ್ಚಿ ಕಲಾಲೋಕ ಪ್ರವೇಶಿಸಿದ್ದಾರೆ. ಬಯಲಾಟ, ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳಲ್ಲಿ ಸ್ತ್ರೀ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಈ ಭಾಗದಲ್ಲಿ ಪ್ರಸಿದ್ಧಿಯಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ನೃತ್ಯ ಪ್ರದರ್ಶನದಲ್ಲೇ ತೊಡಗಿರುವ ಇವರು ಹೆಣ್ಣು ವೇಷ ತೊಟ್ಟು ರಂಗದ ಮೇಲೆ ಹೆಜ್ಜೆ ಹಾಕುವ ಮೂಲಕ ತಮ್ಮದೇ ಆದ ಪ್ರೇಕ್ಷಕ ವಲಯ ಸೃಷ್ಟಿಸಿಕೊಂಡಿದ್ದಾರೆ. ಸ್ವಗ್ರಾಮ ಉತ್ತಂಗಿಯಲ್ಲಿ ರಂಗ ಪ್ರಯೋಗ ನಡೆದರೆ ಅದರಲ್ಲಿ ಕೊಟ್ರೇಶನ ನೃತ್ಯ ಪ್ರದರ್ಶನ ಇದ್ದೇ ಇರುತ್ತದೆ.

ಪಾರುಪತ್ತೆಗಾರ ಮಲ್ಲಪ್ಪ, ಗೀತಾ ದಂಪತಿಯ ಪುತ್ರ ಕೊಟ್ರೇಶ ಅವರದ್ದು ಕೃಷಿ ಕುಟುಂಬ. ಪದವಿ ಪಡೆದಿರುವ ಇವರಿಗೆ ನೃತ್ಯ ಕಲೆ ಸದ್ಯ ಬದುಕಿನ ದಾರಿಯೂ ಆಗಿದೆ. ಭರತ ನಾಟ್ಯ, ನೃತ್ಯ ಕಲೆಯನ್ನು ಶಾಸ್ತ್ರೀಯವಾಗಿ ಕಲಿಯದಿದ್ದರೂ ಸಂಗೀತ ನಾದಕ್ಕೆ ಹೆಜ್ಜೆ ತಪ್ಪುವುದಿಲ್ಲ. 26 ವರ್ಷದ ತರುಣ ಕೊಟ್ರೇಶ ಸ್ತ್ರೀ ವೇಷಭೂಷಣ ಧರಿಸಿ ನಿಂತರೆ ಅವರು ‘ನೃತ್ಯಗಾರ್ತಿ’ಯಾಗಿ ಪರಕಾಯ ಪ್ರವೇಶ ಮಾಡುತ್ತಾರೆ.

ಗಿರಿಜಾ ಕಲ್ಯಾಣ ಬಯಲಾಟದಲ್ಲಿ ‘ರತಿ’ ಸುಗಂಧ ಪುಷ್ಪಹರಣದಲ್ಲಿ ‘ರುಕ್ಮಿಣಿ’ ರತಿ ಕಲ್ಯಾಣದಲ್ಲಿ ‘ಉತ್ತರೆ’, ಕುರುಕ್ಷೇತ್ರ ಪೌರಾಣಿಕ ನಾಟಕದಲ್ಲಿ ‘ದ್ರೌಪದಿ’, ರಕ್ತರಾತ್ರಿಯಲ್ಲಿ ‘ಅನಂಗ ಪುಷ್ಪ’ ಮತ್ತು ‘ಚಿತ್ತಾಂಗಿಣಿ’ ಹೇಮರಡ್ಡಿ ಮಲ್ಲಮ್ಮ ಭಕ್ತಿಪ್ರಧಾನ ನಾಟಕದಲ್ಲಿ ‘ಮೋಹನಲಾಲ್’ ಹೆಣ್ಣು ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.

‘ಸನಾದಿ ಅಪ್ಪಣ್ಣ’ ಸಿನಿಮಾದ ‘ಕರೆದರೂ ಬಾರದೇ …’ ಹಾಗೂ ‘ಅಪೂರ್ವ ಸಂಗಮ’ ಚಿತ್ರದ ‘ನಿನ್ನೆಗಿಂತ ಇಂದು ಚೆನ್ನಾ…’ ಹಾಡಿನ ನೃತ್ಯ ಇವರಿಗೆ ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಗುಂಗು ಹಿಡಿಸುವ ಹಳೆಯ ಕನ್ನಡ ಸಿನಿಮಾ ಹಾಡುಗಳು ಸೇರಿದಂತೆ ಇತ್ತೀಚಿನ ಜನಪ್ರಿಯ ಕನ್ನಡ ಹಾಗೂ ಹಿಂದಿ ಚಿತ್ರಗಳ ಹಾಡಿಗೆ ಹೆಜ್ಜೆ ಹಾಕುತ್ತಾರೆ.

2016ರಲ್ಲಿ ಮೂಡಬಿದರೆಯ ಆಳ್ವಾಸ್ ನುಡಿಸಿರಿ ಸಮ್ಮೇಳನ, 2017 ರ ಹಂಪಿ ಉತ್ಸವದಲ್ಲಿ ಸೋಗಿಯ ಬಯಲಾಟ ತಂಡ ಪ್ರದರ್ಶಿಸಿದ ‘ಭಕ್ತ ಮಾರ್ಕಾಂಡೇಯ’ ಬಯಲಾಟದಲ್ಲಿ ‘ಸಖಿ’ ಪಾತ್ರ ನಿರ್ವಹಿಸಿದ್ದಾರೆ. ಉಡುಪಿಯ ಶ್ರೀಕೃಷ್ಣ ಮಠ, ತುಮಕೂರು, ನಂದಿಪುರ, ಉತ್ತಂಗಿ, ನವಲಿ, ಮಾಲೂರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ.

‘ವಿಶಿಷ್ಟ ಸಾಧನೆಯ ಹಂಬಲದಿಂದ ಹೆಣ್ಣಿನ ನೃತ್ಯಕಲೆಯನ್ನು ಕಲಿತಿರುವೆ. ಪ್ರತಿ ಕಾರ್ಯಕ್ರಮದಲ್ಲೂ ಪ್ರೇಕ್ಷಕರ ಪ್ರೋತ್ಸಾಹ ನನ್ನನ್ನು ಈ ಕ್ಷೇತ್ರದಲ್ಲಿ ಮುಂದುವರಿಯಲು ಪ್ರೇರಣೆಯಾಗಿದೆ’ ಎಂದು ಕೊಟ್ರೇಶ್ ಹೇಳಿದರು.

‘ನನ್ನ ಕಾರ್ಯಕ್ರಮವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಆದರೆ, ವೈಯಕ್ತಿಕ ಬದುಕು ಕಷ್ಟಕರವಾಗಿದ್ದರೂ ಯಾರಿಂದಲೂ ನೆರವು ಸಿಕ್ಕಿಲ್ಲ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೂ ನಮಗೆ ಸರ್ಕಾರದ ಆಶ್ರಯ ಯೋಜನೆ ಸೌಲಭ್ಯ ಸಿಕ್ಕಿಲ್ಲ’ ಎಂದು ನೋವು ತೋಡಿಕೊಂಡರು. ಕೊಟ್ರೇಶ ಸಂಪರ್ಕಕ್ಕೆ 8105743577.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು