ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೆ ಸಿಕ್ಕ ಸಚಿವ ಸ್ಥಾನದಲ್ಲಿ ಹೆಚ್ಚಿನ ಕೆಲಸವಿಲ್ಲ: ಸಚಿವ ಆನಂದ್ ಸಿಂಗ್

ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ
Last Updated 21 ಮಾರ್ಚ್ 2021, 15:38 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ನನಗೆ ಸಿಕ್ಕಿರುವ ಸಚಿವ ಸ್ಥಾನದಲ್ಲಿ ಹೆಚ್ಚಿನ ಕೆಲಸವಿರುವುದಿಲ್ಲ. ಸಾಕಷ್ಟು ಸಮಯಾವಕಾಶ ಸಿಗುತ್ತದೆ. ಹೆಚ್ಚಿನ ಸಮಯವನ್ನು ಜಿಲ್ಲೆಯ ಅಭಿವೃದ್ಧಿಗೆ ಮೀಸಲಿಡುತ್ತೇನೆ’ ಎಂದು ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ‘ಜೀತೊ’ ಸಂಸ್ಥೆಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನೂತನವಾಗಿ ಮುದ್ರಿಸಿದ ‘ವಿದ್ಯಾಮಿತ್ರ’ ಪ್ರಶ್ನೋತ್ತರ ಮಾಲಿಕೆ ಪುಸ್ತಕವನ್ನು ಭಾನುವಾರ ನಗರದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.

‘ಜಿಲ್ಲೆಯಾದ ನಂತರ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಲು ಆಗುತ್ತಿಲ್ಲ. ನಗರದ ಅಭಿವೃದ್ಧಿ ಸೇರಿದಂತೆ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರತನಾಗಿದ್ದೇನೆ. ಆದರೆ, ನೀರಾವರಿ ಯೋಜನೆ ಕಾಮಗಾರಿ ಸುಗಮವಾಗಿ ನಡೆಯುತ್ತಿದೆ’ ಎಂದು ತಿಳಿಸಿದರು.

‘ನಗರದಲ್ಲಿ ನೂತನವಾಗಿ ₹24 ಕೋಟಿ ವೆಚ್ಚದಲ್ಲಿ ಕಾಲೇಜು ರಸ್ತೆಯಲ್ಲಿ ಅತ್ಯಾಧುನಿಕ ಶಾಲೆ, ಇ-ಲೈಬ್ರರಿ ನಿರ್ಮಿಸಲಾಗುವುದು. ಎರಡು ಭಾಗದಲ್ಲಿ ಹಂಚಿ ಹೋಗಿರುವ ತಾಲ್ಲೂಕು ಕ್ರೀಡಾಂಗಣವನ್ನು ಒಂದುಗೂಡಿಸಿ ವಿಶಾಲ ಮೈದಾನ ಮಾಡಲು ಯೋಜನೆ ರೂಪಿಸಲಾಗುತ್ತಿದೆ’ ಎಂದು ಹೇಳಿದರು.

‘ಜೈನ ಸಮುದಾಯದವರಿಗೆ ಸಮಾಜ ಸೇವೆ ಮೊದಲಿನಿಂದಲೂ ರೂಢಿಗತ. ನಗರದಲ್ಲಿ ಜೈನ ಸಮಾಜ ಸಾಮಾಜಿಕವಾಗಿ ಪರಿಚರಿಯಿಸಿದವರು ಭವರ್ ಲಾಲ್ ಜೈನ್. ಸಮುದಾಯದ ಯುವ ಪೀಳಿಗೆ ಅವರನ್ನು ನೆನಪಿಸಿ ಕಾರ್ಯಗಳನ್ನು ಮುನ್ನೆಡಸಬೇಕು. ಶೈಕ್ಷಣಿಕ ಸೇವೆ ನಿರ್ವಹಿಸುತ್ತಿರುವ ‘ಜೀತೊ’ ಸಂಸ್ಥೆಯು ನಗರ ಸ್ವಚ್ಚತೆಗೆ ಕೈಜೋಡಿಸಬೇಕು’ ಎಂದರು.

ಬಿಒ ಪಿ.ಸುನಂದಾ ಮಾತನಾಡಿ, ‘ಸರ್ಕಾರ ಈಗಾಗಲೇ ಶೇ 30 ಪಠ್ಯಕ್ರಮ ಕಡಿತಗೊಳಿಸಿದೆ. ಜೂನ್ ತಿಂಗಳಲ್ಲಿ ಹತ್ತನೇ ತರಗತಿ ಪರೀಕ್ಷೆ ಆರಂಭಿಸಲಾಗುತ್ತಿದೆ. ಎಷ್ಟೋ ಪರೀಕ್ಷೆಗಳು ಮುಂದೂಡಿದ್ದರೂ ಸರ್ಕಾರ ಹತ್ತನೇ ತರಗತಿ ಪರೀಕ್ಷೆ ನಡೆಸಿತ್ತು, ಈ ಶೈಕ್ಷಣಿಕ ವರ್ಷದ ಪರೀಕ್ಷೆಯಲ್ಲಿ ಮಕ್ಕಳನ್ನು ಯಾವ ರೀತಿಯಾಗಿ ತಯಾರಿ ನಡೆಸಬೇಕೆಂಬ ಆತಂಕ ಪೋಷಕರು, ಮಕ್ಕಳಲ್ಲಿ ಇತ್ತು. ಶಿಕ್ಷಕ, ಮುಖ್ಯಶಿಕ್ಷಕರ ಸಂಘದಿಂದ ಚರ್ಚಿಸಿ ಪುಸ್ತಕ ಬಿಡುಗಡೆಗೆ ಯೋಜಿಸಲಾಗಿತ್ತು’ ಎಂದು ಹೇಳಿದರು.

‘ಆರು ವಿಷಯಗಳ ಶಿಕ್ಷಕರೊಂದಿಗೆ ಚರ್ಚಿಸಿ ಎರಡು ತಿಂಗಳಿಂದ ಬುಕ್ ಲೆಟ್ ಮಾಡಲಾಗಿದೆ. ಅದನ್ನು ‘ಜೀತೊ’ ಸಂಸ್ಥೆಯ ಮೂಲಕ ಮುದ್ರಿಸಿ ತಾಲ್ಲೂಕಿನ 101 ಶಾಲೆಗಳ 6,680 ಮಕ್ಕಳಿಗೆ ವಿತರಿಸಲಾಗುವುದು’ ಎಂದರು.

ಮುಖ್ಯಶಿಕ್ಷಕರಾದ ಅಕ್ರಂ, ವೆಂಕಟೇಶ್, ಅಕ್ಕಮ್ಮ, ಅಯ್ಯಪ್ಪ, ಜೀತೊ ಸಂಸ್ಥೆಯ ಅಧ್ಯಕ್ಷ ಇಂದರ್ ಭಂಡಾರಿ, ಕಾರ್ಯದರ್ಶಿ ಹಿತೇಶ್ ಕುಮಾರ್, ಮನೋಜ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT