ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕೆ ಆಗ್ರಹ

Last Updated 22 ಸೆಪ್ಟೆಂಬರ್ 2021, 8:37 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಬೇಡ ಜಂಗಮರಿಗೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಮೀನಮೇಷ ಎಣಿಸುತ್ತಿದೆ. ರಾಜ್ಯದ ಸಮಸ್ತ ಬೇಡ ಜಂಗಮರಿಗೆ ಸಂವಿಧಾನಾತ್ಮಕ ಸೌಲಭ್ಯ ಸಿಗುವವರೆಗೆ ನಿರಂತರವಾಗಿ ಹೋರಾಟ ನಡೆಸಲಾಗುವುದು’ ಎಂದು ಕರ್ನಾಟಕ ರಾಜ್ಯ ಬೇಡ ಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್‌.ಎಂ. ಕಾಶಿನಾಥಯ್ಯ ತಿಳಿಸಿದರು.

‘ವೀರಶೈವ ಲಿಂಗಾಯತ ಸಮಾಜದ 101 ಉಪಪಂಗಡಗಳಲ್ಲಿ ಬೇಡ ಜಂಗಮ ಕೂಡ ಒಂದು. ಕಂತಿ ಭಿಕ್ಷೆ ಬೇಡುವ ಜನಾಂಗವಿದು. ಬಳ್ಳಾರಿ, ವಿಜಯನಗರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದೇ ರೀತಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡದೆ ಕೊಡಬೇಕು. ಯಾವುದೇ ಕುಂಟು ನೆಪ ಸರ್ಕಾರ ಹೇಳಬಾರದು’ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಬೇಡ ಜಂಗಮರಲ್ಲಿ ನಾಯಕತ್ವದ ಕೊರತೆ ಇದೆ. ಸಮಾಜದ ಎಲ್ಲರನ್ನೂ ಒಂದೇ ವೇದಿಕೆಯಡಿ ಸಂಘಟಿಸಲು ಸಾಧ್ಯವಾಗುತ್ತಿಲ್ಲ. ಈ ಕೊರತೆ ನೀಗಿಸಲು ಸೆ. 26ರಂದು ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ರಾಜ್ಯಮಟ್ಟದ ಚಿಂತನ–ಮಂಥನ ಸಭೆ ಏರ್ಪಡಿಸಲಾಗಿದೆ. ಆ ಸಭೆಯಲ್ಲಿ ಕೊಳದ ಮಠದ ಶಾಂತವೀರ ಸ್ವಾಮೀಜಿ, ಕಲ್ಯಾಣ ಮಠದ ಕಲ್ಯಾಣಯ್ಯ ಸ್ವಾಮೀಜಿ, ಕೊಟ್ಟೂರು ಮಠದ ಸಂಗನಬಸವ ಸ್ವಾಮೀಜಿ ಸೇರಿದಂತೆ ನಾಡಿನ 30ಕ್ಕೂ ಅಧಿಕ ಸ್ವಾಮೀಜಿಗಳು ಭಾಗವಹಿಸುವರು. ರಾಜ್ಯ ಬೇಡ ಜಂಗಮ ಸಮಾಜದ ಅಧ್ಯಕ್ಷ ಕೆ. ವಿಶ್ವನಾಥ, ಉಪಾಧ್ಯಕ್ಷ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ 1,500ಕ್ಕೂ ಹೆಚ್ಚು ಪದಾಧಿಕಾರಿಗಳು ಪಾಲ್ಗೊಳ್ಳುವರು’ ಎಂದು ಮಾಹಿತಿ ನೀಡಿದರು.

‘ಅಂದಿನ ಸಭೆಯಲ್ಲಿ ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳ ಕುರಿತು ಚರ್ಚಿಸಲಾಗುವುದು. ಬಳಿಕ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಹೋರಾಟದ ರೂಪುರೇಷೆ ತಯಾರಿಸಲಾಗುವುದು. ಸಮಾಜ ಸರ್ಕಾರದ ಸವಲತ್ತುಗಳಿಂದ ವಂಚಿತವಾಗಿದೆ. ಇತರೆ ಸಮಾಜದವರಂತೆ ಈ ಸಮಾಜದವರು ಮುಖ್ಯ ವಾಹಿನಿಗೆ ಬರಬೇಕಿದೆ’ ಎಂದು ಹೇಳಿದರು.

‘ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡಬಾರದು ಎಂದು ಕೆಲವರು ವಿರೋಧಿಸುತ್ತಿರುವ ವಿಷಯ ಗೊತ್ತಿದೆ. ಅದರ ಬಗ್ಗೆ ನಾನೇನೂ ಪ್ರತಿಕ್ರಿಯಿಸಲಾರೆ. ನಮ್ಮ ಹೋರಾಟ ನಮ್ಮ ಸಮಾಜದ ಹಕ್ಕಿಗಾಗಿ. ಇದು ಯಾರ ವಿರುದ್ಧವೂ ಅಲ್ಲ. ಸಂವಿಧಾನಾತ್ಮಕವಾಗಿ ಆಯಾ ಜಾತಿ, ಜನಾಂಗದವರಿಗೆ ಎಲ್ಲಾ ಸೌಲಭ್ಯಗಳು ಸಿಗಬೇಕು. ಅದು ಅವರ ಹಕ್ಕು ಕೂಡ ಹೌದು’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಜಂಗಮ ಸಮಾಜದ ಗೌರವ ಅಧ್ಯಕ್ಷ ಒ.ಎಂ. ಮಲ್ಲಿಕಾರ್ಜುನ ಸ್ವಾಮೀಜಿ, ಉಪಾಧ್ಯಕ್ಷ ಎಸ್‌.ಎಂ. ರವಿಕಾಂತ, ಮುಖಂಡರಾದ ಎನ್‌. ಎಂ. ರವಿಶಂಕರ್‌, ಸಿದ್ದಲಿಂಗಯ್ಯ ಹಿರೇಮಠ, ಎಸ್‌.ಎಂ. ವೀರಯ್ಯ, ಜಿ.ಎಂ. ಮಂಜುನಾಥ ಸ್ವಾಮಿ, ಎಸ್‌.ಎಂ. ಶಶಿಧರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT