ಶನಿವಾರ, ಡಿಸೆಂಬರ್ 3, 2022
27 °C
ನಾಲ್ವರು ಸಚಿವರಿಂದ ಹಂಪಿ ವಿರೂಪಾಕ್ಷ, ಭುವನೇಶ್ವರಿ ದೇವಿಗೆ ವಿಶೇಷ ಪೂಜೆ

ಕೆಂಪೇಗೌಡರ ಪ್ರತಿಮೆ‌ ಅನಾವರಣಕ್ಕೆ ಹಂಪಿಯಲ್ಲಿ ಮೃತ್ತಿಕೆ ಸಂಗ್ರಹಿಸಿದ ಸಚಿವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ನವೆಂಬರ್‌ 11ರಂದು ಬೆಂಗಳೂರಿನಲ್ಲಿ ನಡೆಯಲಿರುವ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣದ ಅಂಗವಾಗಿ ನಾಲ್ಕು ಜನ ಸಚಿವರು ಶುಕ್ರವಾರ ಹಂಪಿಯಲ್ಲಿ ವಿಶೇಷ ಪೂಜೆ ನೆರವೇರಿಸಿ ಮೃತ್ತಿಕೆ (ಮಣ್ಣು) ಸಂಗ್ರಹಿಸಿ, ಬೆಂಗಳೂರಿಗೆ ಕೊಂಡೊಯ್ದರು.

ಕಂದಾಯ ಸಚಿವ ಆರ್‌. ಅಶೋಕ್‌, ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಸಿ. ನಾರಾಯಣಗೌಡ ಅವರು ಹಂಪಿ ಪಂಪಾಂಬಿಕೆ, ವಿರೂಪಾಕ್ಷೇಶ್ವರ ಹಾಗೂ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ಹಂಪಿ ಪುಷ್ಕರಣಿಗಳಿಂದ ಸಂಗ್ರಹಿಸಿದ ಮಣ್ಣನು ಒಂಬತ್ತು ತಾಮ್ರದ ಬಿಂದಿಗೆಗಳಲ್ಲಿ ಇರಿಸಿ, ಪೂಜೆ ನೆರವೇರಿಸಿದರು. ಅನಂತರ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರು ಮೃತ್ತಿಕೆಯ ಬಿಂದಿಗೆಗಳನ್ನು ಸಚಿವರಿಗೆ ಹಸ್ತಾಂತರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರಾದ ಆರ್. ಅಶೋಕ್‌, ಡಾ.ಸಿ.ಎನ್‌. ಅಶ್ವತ್ಥನಾರಾಯಣ, ವಿಜಯನಗರ ಸಾಮ್ರಾಜ್ಯ ಸಮೃದ್ಧಿಯ ನಾಡು. ಇದರ ಪ್ರೇರಣೆಯಿಂದ ಬೆಂಗಳೂರು ಅಸ್ತಿತ್ವಕ್ಕೆ ಬಂದಿದೆ. ಇಂದು ಜಗತ್ತಿನಲ್ಲೇ 25ನೇ ಪ್ರಮುಖ ನಗರ ಎಂಬ ಖ್ಯಾತಿ ಗಳಿಸಿದೆ. ಈ ಹಿಂದೆ ಬೆಂಗಳೂರು ಕೂಡ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಇತ್ತು. ನಾಡಪ್ರಭು ಕೆಂಪೇಗೌಡರು ವಿಜಯನಗರದ ಸಾಮಂತರಾಗಿದ್ದರು. ವಿಜಯನಗರ ಸಾಮ್ರಾಜ್ಯ ಹಾಗೂ ಬೆಂಗಳೂರಿನ ನಡುವೆ ಸಂಬಂಧ, ಗೌರವ ಹೆಚ್ಚಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಹಂಪಿಯಿಂದ ಮೃತ್ತಿಕೆ ಸಂಗ್ರಹಿಸಲಾಗುತ್ತಿದೆ ಎಂದರು.

ವಿಜಯನಗರ ಸಾಮ್ರಾಜ್ಯದ ನೆಲ ಹಂಪಿ, ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮ, ರಾಣಿ ಚನ್ನಮ್ಮ ಅವರ ಸಮಾಧಿಯಿರುವ ಬೈಲಹೊಂಗಲದಿಂದ ಮೃತ್ತಿಗೆ ಸಂಗ್ರಹ ಮಾಡಲಾಗುತ್ತಿದೆ. ನಾವು ನಾಲ್ಕು ಜನ ಸಚಿವರು ಸಾಂಕೇತಿಕವಾಗಿ ಪ್ರಮುಖ ಸ್ಥಳಗಳಿಂದ ಮಣ್ಣು ಸಂಗ್ರಹಿಸುತ್ತಿದ್ದೇವೆ. ರಾಜ್ಯದಲ್ಲಿನ ವಿವಿಧ ಭಾಗಗಳಿಂದ ಆ ಜಿಲ್ಲೆಯ ಜಿಲ್ಲಾಧಿಕಾರಿಗಳು ಪವಿತ್ರ ಮೃತ್ತಿಕೆ ಕಳುಹಿಸಿಕೊಡುವರು. ನ. 11ರಂದು ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ಅನಾವರಣದ ಸಂದರ್ಭದಲ್ಲಿ ಮೃತ್ತಿಕೆ ಇಟ್ಟು ಪೂಜೆ ಸಲ್ಲಿಸಿ, ಪ್ರತಿಮೆ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ಪ್ರತಿಮೆ ಅನಾವರಣದ ಮೂಲಕ ಇಡೀ ರಾಜ್ಯದ ಜನರನ್ನು ಒಗ್ಗೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಕರ್ನಾಟಕ ಒಂದು ಎಂಬ ಭಾವನಾತ್ಮಕ ಸಂಬಂಧ ಎಲ್ಲರಲ್ಲೂ ಬೆಳೆಯಬೇಕು. ಬೆಂಗಳೂರು, ಮೈಸೂರು ನಗರಗಳೆಲ್ಲ ವಿಜಯನಗರ ಸಾಮ್ರಾಜ್ಯಕ್ಕೆ ಒಳಪಟ್ಟಿದ್ದವು. ಕೆಂಪೇಗೌಡರು ಹಲವು ಸಲ ವಿಜಯನಗರಕ್ಕೆ ಭೇಟಿ ಕೊಟ್ಟಿದ್ದರು. ಅವರು ಓಡಾಡಿರುವ ಹಂಪಿಯ ನೆಲದಿಂದ ಪವಿತ್ರ ಮೃತ್ತಿಕೆ ಕೊಂಡೊಯ್ಯಲಾಗುತ್ತಿದೆ ಎಂದರು.

ಪ್ರತಿಮೆ ಲೋಕಾರ್ಪಣೆ ಪವಿತ್ರ ಕಾರ್ಯ. ಅದು ನಿರ್ವಿಘ್ನವಾಗಿ ನಡೆಯಬೇಕು. ಬಿಸಿಲು, ಮಳೆ, ಗಾಳಿಯನ್ನು ತಡೆದು, ಪ್ರತಿಮೆ ಶಾಶ್ವತವಾಗಿ ಇರಬೇಕೆಂಬ ಕಾರಣದಿಂದ ಪೂಜೆ ನೆರವೇರಿಸಲಾಗಿದೆ. ಪ್ರತಿಮೆ ಅನಾವರಣ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ನಾಡಿನ ಸ್ವಾಮೀಜಿಗಳೆಲ್ಲ ಪಾಲ್ಗೊಳ್ಳುವರು ಎಂದರು.

ಸಂಸದ ವೈ.ದೇವೇಂದ್ರಪ್ಪ, ಶಾಸಕ ಎಂ.ಎಸ್‌. ಸೋಮಲಿಂಗಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.