ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ | ಪೌರಕಾರ್ಮಿಕರ ಅಹವಾಲು ಆಲಿಸಿದ ಎಂ.ವೆಂಕಟೇಶನ್‌

Published 14 ಜೂನ್ 2024, 8:35 IST
Last Updated 14 ಜೂನ್ 2024, 8:35 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಸಫಾಯಿ ಕರ್ಮಚಾರಿ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್‌ ಅವರು ಶುಕ್ರವಾರ ನಗರದಲ್ಲಿ ಪೌರಕಾರ್ಮಿಕರ ಅಹವಾಲುಗಳನ್ನು ಆಲಿಸಿದ್ದು, ಆರು ತಿಂಗಳೊಳಗೆ ನಿವೇಶನ ಗುರುತಿಸಿಕೊಡುವ ಹಾಗೂ ಅದೇ ನಿವೇಶನದಲ್ಲಿ ಒಂದೂವರೆ ವರ್ಷದೊಳಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದಾರೆ.‌

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುವುದಕ್ಕೆ ಮೊದಲಾಗಿ ಇಲ್ಲಿನ ಅಂಬೇಡ್ಕರ್ ವೃತ್ತ ಸಮೀಪದ ಇಂದಿರಾನಗರ, ಶಾಂತಿನಗರ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಪೌರಕಾರ್ಮಿಕರು ವಾಸಿಸುತ್ತಿರುವ ಪ್ರದೇಶ, ಅವರ ವಸತಿ ಸಮಸ್ಯೆಗಳ ಕುರಿತು ಖುದ್ದು ಮಾಹಿತಿ ಪಡೆದರು. ಮಳೆ ಬಿರುಸಿನಿಂದ ಸುರಿದಾಗ ಅವರ ಮನೆಗಳಿಗೆ ನೀರು ನುಗ್ಗುತ್ತಿರುವ ಸಮಸ್ಯೆ ಸಹಿತ ಪೌರಕಾರ್ಮಿಕರು ಎದುರಿಸುತ್ತಿರುವ ಇತರ ಹಲವು ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

‘ನಮಗೆ ಮನೆ ಕಟ್ಟಿಸಿಕೊಡುವುದಾಗಿ ಭರವಸೆ ನೀಡಲಾಗುತ್ತಿದೆ, ಆದರೆ ಮನೆಯೂ ಇಲ್ಲ, ನಿವೇಶನವೂ ಇಲ್ಲ. ದಯವಿಟ್ಟು ಅದನ್ನು ಮಾಡಿಕೊಡಿ’ ಎಂದು ಹಲವು ಪೌರ ಕಾರ್ಮಿಕರು ಅಳಲು ತೋಡಿಕೊಂಡರು.

ವೆಂಕಟೇಶನ್‌ ಭರವಸೆ: ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಎಂ.ವೆಂಕಟೇಶನ್‌ ಅವರು ಜಿಲ್ಲಾ ಎಲ್ಲಾ ತಾಲ್ಲೂಕುಗಳಿಂದ ಬಂದ ಪೌರ ಕಾರ್ಮಿಕರು, ಹೊರಗುತ್ತಿಗೆ ನೌಕರರರು, ಹೊರಗುತ್ತಿಗೆ ಏಜೆನ್ಸಿಗಳ ಮಾಲೀಕರೊಂದಿಗೆ ಸಭೆ ನಡೆಸಿದರು. ಏಜೆನ್ಸಿಗಳ ಮಾಲೀಕರನ್ನು ಹೊರಗೆ ಕಳುಹಿಸಿ ಪೌರಕಾರ್ಮಿಕರ ಅಹವಾಲುಗಳನ್ನು ಆಲಿಸಿದರು. ಅವರಿಗೆ ಸರಿಯಾಗಿ ಉಪಾಹಾರ ನೀಡಲಾಗುತ್ತಿದೆಯೇ? ಸಂಬಳ ನಿಗದಿತ ಸಮಯಕ್ಕೆ ಬರುತ್ತಿದೆಯೇ? ಆರೋಗ್ಯ ವಿಮೆ ಮಾಡಿಸಲಾಗಿದೆಯೇ? ಶೂ, ರೈನ್‌ ಕೋಟ್ ಕೊಟ್ಟಿದ್ದಾರೆಯೇ ಎಂಬುದಾಗಿ ಹಲವು ಪ್ರಶ್ನೆಗಳನ್ನು ಕೇಳಿ ತಿಳಿದುಕೊಂಡರು.

ನಿಮ್ಮ ಸಮಸ್ಯೆಗಳನ್ನು ಹೇಳಿ ಎಂದು ಅವರು ಮತ್ತೆ ಕೇಳಿದಾಗ ಪೌರ ಕಾರ್ಮಿಕ ಮಹಿಳೆಯೊಬ್ಬರು ವಸತಿ ಸಮಸ್ಯೆಯ ಬಗ್ಗೆ ಗಮನ ಸೆಳೆದರು. ಅದಕ್ಕೆ ಸ್ಪಂದಿಸಿದ ಜಿಲ್ಲಾ ನಗರ ಯೋಜನಾ ನಿರ್ದೇಶಕ ಮನೋಹರ್‌, ‘ನಾನು ಈಗಾಗಲೇ ಈ ಕುರಿತು ಯೋಜನೆ ರೂಪಿಸಿದ್ದೇನೆ, ವರ್ಗಾವಣೆ ಆಗಿದ್ದಕ್ಕೆ ಯೋಜನೆ ಸ್ವಲ್ಪ ವಿಳಂಬವಾಗಿದೆ, ಆರು ತಿಂಗಳಲ್ಲಿ ನಿವೇಶನ ಗುರುತಿಸಿಕೊಡಲಾಗುವುದು, ಒಂದೂವರೆ ವರ್ಷದೊಳಗೆ ಅದೇ ನಿವೇಶನದಲ್ಲಿ ಮನೆ ನಿರ್ಮಿಸಿಕೊಡಲಾಗುವುದು’ ಎಂದರು. ಆಯೋಗದ ಅಧ್ಯಕ್ಷರು ಮತ್ತೆ ಅದನ್ನು ಪುನರುಚ್ಚರಿಸಿ, ನಿವೇಶನ ಸಿಕ್ಕಿದ್ದರ ಬಗ್ಗೆ ತಮಗೆ ಆರು ತಿಂಗಳೊಳಗೆ ಪತ್ರ ಬರೆದು ತಿಳಿಸಬೇಕು, ಸಿಗದಿದ್ದರೂ ತಿಳಿಸಬೇಕು, ಒಂದೂವರೆ ವರ್ಷದೊಳಗೆ ಮನೆ ಆಗದಿದ್ದರೆ ತಿಳಿಸಬೇಕು ಎಂದು ಸೂಚಿಸಿದರು.

‘ಪೌರ ಕಾರ್ಮಿಕರಿಗಾಗಿ ಆರೋಗ್ಯ ಶಿಬಿರಗಳನ್ನು ನಡೆಸಬೇಕು, ರಾಷ್ಟ್ರೀಯ ರಜಾ ದಿನಗಳಂದು ಕೆಲಸ ಮಾಡಿದ್ದಕ್ಕೆ ದುಪ್ಪಟ್ಟು ಸಂಬಳ ನೀಡಬೇಕು, ವಾರಕ್ಕೆ ಒಂದು ದಿನ ರಜೆ ಇರುವಂತೆ ವ್ಯವಸ್ಥೆ ಮಾಡಬೇಕು’ ಎಂದು ವೆಂಕಟೇಶನ್‌ ಅವರು ಹೊರಗುತ್ತಿಗೆ ಏಜೆನ್ಸಿ ಮಾಲೀಕರಿಗೆ ಹಾಗೂ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಮುಖ್ಯಸ್ಥರಿಗೆ ತಾಕೀತು ಮಾಡಿದರು.

ಪೌರಕಾರ್ಮಿಕರ ಪರವಾಗಿ ಮಾತನಾಡಿದ ಮಾದಿಗ ಸಮುದಾಯದ ಮುಖಂಡ ಸ್ಲಂ ರಾಮಚಂದ್ರ, ಸಫಾಯಿ ಕರ್ಮಚಾರಿಗಳ ವಿಚಾರದಲ್ಲಿ ರಾಷ್ಟ್ರೀಯ ನೀತಿ ರೂಪಿಸಬೇಕು, ಸಫಾಯಿ ಕರ್ಮಚಾರಿಗಳ ಸಮೀಕ್ಷೆ ನಡೆಸಬೇಕು, ನಿವೇಶನ, ಮನೆ ಒದಗಿಸಬೇಕು, ಪುನರ್ವಸತಿ ಪ್ಯಾಕೇಜ್‌ಗೆ ನೀಡುವ ಮೊತ್ತವನ್ನು ₹10 ಲಕ್ಷದಿಂದ ₹30 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. 

‘ಕೇವಲ ನಗರ ಪ್ರದೇಶಗಳ ಪೌರ ಕಾರ್ಮಿಕರ ಅಹವಾಲು ಆಲಿಸಿದರೆ ಸಾಲದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಫಾಯಿ ಕರ್ಮಚಾರಿಗಳ ಕಷ್ಟವನ್ನೂ ಆಲಿಸುವ ಕೆಲಸ ಆಯೋಗದಿಂದ ನಡೆಯಬೇಕು, ಹಾಗಿದ್ದರೆ ಮಾತ್ರ ಎಲ್ಲ ಸಫಾಯಿ ಕರ್ಮಚಾರಿಗಳ ಜೀವನ ಸುಗಮವಾಗಬಹುದು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧಾ ಜಿ., ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ., ಉಪವಿಭಾಗಾಧಿಕಾರಿ ಮೊಹಮ್ಮದ್ ಅಲಿ ಅಕ್ರಂ ಷಾ, ಎಎಸ್‌ಪಿ ಸಲೀಂ ಪಾಷಾ, ನಗರಸಭೆ ಪೌರಾಯುಕ್ತ ಚಂದ್ರಪ್ಪ ಇತರರು ಇದ್ದರು. ತಮಿಳು ಮತ್ತು ಹಿಂದಿಯಲ್ಲಿ ಮಾತ್ರ ಮಾತನಾಡುತ್ತಿದ್ದ ಆಯೋಗದ ಅಧ್ಯಕ್ಷರ ಮಾತನ್ನು ಕನ್ನಡಕ್ಕೆ ಅನವಾದಿಸುವ ಕೆಲಸ ನಡೆಯಿತು. ಆಯೋಗದ ಅಧ್ಯಕ್ಷರು ತಮ್ಮ ಫೋನ್ ನಂಬರ್ ಅನ್ನು ಎಲ್ಲರಿಗೂ ಕೊಟ್ಟು, ಅಗತ್ಯ ಇದ್ದರೆ ಕರೆ ಮಾಡಿ ಕಷ್ಟ ಹೇಳಿಕೊಳ್ಳಬಹುದು ಎಂದು ಸೂಚಿಸಿದರು.

ನಮ್ಮ ಮಕ್ಕಳು ಇದೇ ವೃತ್ತಿ ಮುಂದುವರಿಸಬಾರದು:

‘ನಮ್ಮ ಮಕ್ಕಳು ಸಹ ಸಫಾಯಿ ಕರ್ಮಚಾರಿಗಳಾಗಿ ಮುಂದುವರಿಯಬಾರದು ಎಂಬ ಸಂಕಲ್ಪವನ್ನು ನೀವೆಲ್ಲ ಮಾಡಬೇಕು. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರು ಬೇರೆ ಉದ್ಯೋಗಕ್ಕೆ ಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಸರ್ಕಾರದ ಸೌಲಭ್ಯ ಬಳಸಿಕೊಂಡು ಮಕ್ಕಳನ್ನು ಓದಿಸಿ ಅವರನ್ನು ಬೇರೆ ವೃತ್ತಿಗೆ ಕಳುಹಿಸಬೇಕೇ ಹೊರತು ನಿಮ್ಮಂತೆ ಪೌರಕಾರ್ಮಿಕರಾಗಿ, ಕಸ ಎತ್ತುವ ವೃತ್ತಿ ಮಾಡದಂತೆ ನೋಡಿಕೊಳ್ಳಿ’ ಎಂದು ವೆಂಕಟೇಶನ್ ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT