ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣ ಸಚಿವರಿಗೆ ಕಟಿಂಗ್ ಮಾಡಿಸಿ ಸಂಸ್ಕಾರ ಕಲಿಸಿ: ಎನ್‌.ರವಿಕುಮಾರ್

Published 20 ಮೇ 2024, 11:26 IST
Last Updated 20 ಮೇ 2024, 11:26 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ರಾಜ್ಯದಲ್ಲಿ ಹತ್ತನೇ ತರಗತಿ ಫಲಿತಾಂಶದಲ್ಲಿ ಗಣನೀಯ ಕುಸಿತ ಉಂಟಾಗಿದೆ. ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ. ಅವರಿಗೆ ಯಾರಾದರೂ ಕಟಿಂಗ್ ಮಾಡಿಸಿ ಸಂಸ್ಕಾರ ಕಲಿಸಬೇಕಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್ ಟೀಕಿಸಿದರು.

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಪ್ರಯುಕ್ತ ವಿಜಯನಗರ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಸೋಮವಾರ ಇಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

‘ಈ ಸಚಿವನಿಗೆ ಯಾವುದೇ ಗಾಂಭೀರ್ಯ ಇಲ್ಲ. ಶರಣರು, ಸಂತರು ಜನಿಸಿ ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಡಿನಲ್ಲಿ ಇಂತಹ ಸಚಿವ ಶಿಕ್ಷಣ ಖಾತೆ ಮಂತ್ರಿಯಾಗಿರುವುದು ಶೋಚನೀಯ’ ಎಂದು ಅವರು ಆಕ್ಷೇಪಿಸಿದರು.

‘ರಾಜ್ಯದಲ್ಲಿ ಸಾವಿರಾರು ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ, ಶಿಕ್ಷಕರ ನೇಮಕಾತಿ ಇಲ್ಲ, ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆಯಾಗಬೇಕಿದೆ. ಆದರೆ ಇದಾವುದನ್ನೂ ಮಾಡದ ಸಚಿವ ಕೇವಲ ಉಡಾಫೆ ಮಾತನಾಡುತ್ತಿದ್ದಾರೆ’ ಎಂದು ಸಚಿವ ಮಧು ಬಂಗಾರಪ‍್ಪ ಅವರ ಹೆಸರು ಎತ್ತದೆ ಲೇವಡಿ ಮಾಡಿದರು.

‘ಇವುಗಳನ್ನೆಲ್ಲ ನೋಡಿದರೂ ಸಹ ರಾಜ್ಯದಲ್ಲಿ ಅನೇಕರು ಕಾಂಗ್ರೆಸ್‌ಗೆ ಮತ ಹಾಕುವವರು ಇದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಮತ ಹಾಕದಂತೆ ನೋಡಿಕೊಂಡು ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಅವರನ್ನು ಗೆಲ್ಲಿಸುವ ಕೆಲಸ ಮಾಡೋಣ’ ಎಂದು ಹೇಳಿದರು.

‘ಜನರಿಗೆ ಯಾವ ಗ್ಯಾರಂಟಿ ಸಿಕ್ಕಿಲ್ಲ’

‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಆದರೆ ಕಾಂಗ್ರೆಸ್‌ನ ಅನೇಕರಲ್ಲಿ ಈ ಬಗ್ಗೆ ಸಂತಸ ಕಾಣುತ್ತಿಲ್ಲ. ಬದಲಾಗಿ ಅನೇಕ ಹಿರಿಯ ಕಾಂಗ್ರೆಸಿಗರಲ್ಲಿ ಅಸಮಾಧಾನ ಇದೆ. ಈ ಸರ್ಕಾರವನ್ನು ಗ್ಯಾರಂಟಿ ಮಾತ್ರ ಕೈ ಹಿಡಿದಿದೆ. ಆದರೆ ಜನರಿಗೆ ಮಾತ್ರ ಸರ್ಕಾರದಿಂದ ಯಾವ ಗ್ಯಾರಂಟಿ ಸಹ ಸಿಕ್ಕಿಲ್ಲ’ ಎಂದು ರವಿಕುಮಾರ್ ಆರೋಪಿಸಿದರು.

‘ಲೋಕಸಭಾ ಚುನಾವಣೆ ವೇಳೆ ಗ್ಯಾರಂಟಿ ಹೆಸರಿನಲ್ಲಿ ಮಹಿಳೆಯರಿಗೆ ಒಂದೇ ಸಲಕ್ಕೆ 6 ಸಾವಿರ ರೂಪಾಯಿ ಹಾಕಿದ್ದಾರೆ. ಆಗಲೂ ಕಾಂಗ್ರೆಸ್‌ಗೆ ಮತ ಬೀಳುವುದಿಲ್ಲ ಎನ್ನುವ ಕಾರಣಕ್ಕೆ ಪ್ರತಿ ಮತಕ್ಕೆ ಹಣ ನೀಡಿ ಆಮಿಷ ಒಡ್ಡಿದ್ದಾರೆ. ಕೆಲ ಕ್ಷೇತ್ರದಲ್ಲಿ 300 ಕೋಟಿ ಹಣ ಖರ್ಚು ಮಾಡಿರುವ ಮಾಹಿತಿ ನಮಗಿದೆ. ಇಷ್ಟಾದರೂ ಸಹ ಕಾಂಗ್ರೆಸ್‌ಗಿಂತ ಬಿಜೆಪಿಯೇ ಅತಿಹೆಚ್ಚು ಕ್ಷೇತ್ರದಲ್ಲಿ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಶಾಲಾ ಕಾಲೇಜು ವಿದ್ಯಾರ್ಥಿನಿಯರು, ಸಹೋದರಿಯರು ಶಾಲಾ ಕಾಲೇಜಿಗೆ ಸುರಕ್ಷಿತವಾಗಿ ಹೋಗಿ ಬರುವುದು ಕಷ್ಟವಾಗಿದೆ. ಹುಬ್ಬಳ್ಳಿಯಲ್ಲಿ ಬೆಳಗಿನ ಜಾವ 6 ಗಂಟೆಗೆ ಅಂಜಲಿ ಎಂಬ ಸಹೋದರಿಯ ಹತ್ಯೆಯಾಗಿದೆ. ಇದಕ್ಕೂ ಒಂದು ತಿಂಗಳ ಮುನ್ನ ನೇಹ ಹಿರೇಮಠ ಎನ್ನುವ ಸಹೋದರಿಯ ಕೊಲೆಯಾಗಿದೆ. ಕಲಬುರಗಿಯಲ್ಲಿ ಅರ್ಜುನ ಮಡಿವಾಳರ ಎನ್ನುವ ವ್ಯಾಪಾರಿಗೆ ತೀವ್ರ ಹಲ್ಲೆ ಮಾಡಿದ್ದಾರೆ. ಇದನ್ನೆಲ್ಲ ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿರುವುದು ಸ್ಪಷ್ಟವಾಗುತ್ತದೆ‘ ಎಂದರು.

ಅಭ್ಯರ್ಥಿ ಅಮರನಾಥ ಪಾಟೀಲ್‌, ಮುಖಂಡರಾದ  ಬಿ.ಶ್ರೀರಾಮುಲು, ಚನ್ನಬಸವನಗೌಡ ಪಾಟೀಲ್‌, ಬಂಗಾರು ಹನುಮಂತು, ಅಯ್ಯಾಳಿ ತಿಮ್ಮಪ್ಪ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT