ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿಗೆ ಬಸ್ಸಿಲ್ಲ: ಟ್ರ್ಯಾಕ್ಟರ್‌ನಲ್ಲಿ ವಿದ್ಯಾರ್ಥಿಗಳ ಸಂಚಾರ

ಜಿ20 ಶೃಂಗಕ್ಕೆ ಸಜ್ಜಾಗುತ್ತಿರುವ ವಿಶ್ವ ಪಾರಂಪರಿಕ ತಾಣ, ಬಸ್‌ ವ್ಯವಸ್ಥೆ ಮಾಡದ ಸಾರಿಗೆ ಇಲಾಖೆ
Published 7 ಜುಲೈ 2023, 5:31 IST
Last Updated 7 ಜುಲೈ 2023, 5:31 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಜಿ20 ಶೃಂಗಸಭೆಗೆ ಸಜ್ಜಾಗುತ್ತಿರುವ ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಎಲ್ಲಾ ಸಿದ್ಧತೆಗಳೂ ನಡೆಯುತ್ತಿವೆ. ಇದೇ ವೇಳೆ ಬಸ್‌ಗಳು ಇಲ್ಲದೆ ಶಾಲಾ ವಿದ್ಯಾರ್ಥಿಗಳು ಟ್ರ್ಯಾಕ್ಟರ್‌ನಲ್ಲಿ ಸಂಚರಿಸುವ ದೃಶ್ಯ ಸ್ಮಾರಕಗಳ ನಡುವೆಯೇ ಗುರುವಾರ ಕಂಡುಬಂದಿದೆ.

ಜೂನ್ 11ರಂದು ರಾಜ್ಯ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣಕ್ಕಾಗಿ ‘ಶಕ್ತಿ ಯೋಜನೆ’ ಜಾರಿಗೊಳಿಸಿದೆ. ಮರುದಿನದಿಂದಲೇ ಹಂಪಿಗೆ ಬರುವ ಮಹಿಳಾ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಬಸ್‌ನಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ತುಂಬಿಕೊಂಡಿರುವುದರಿಂದ ಹಂಪಿ ಸಮೀಪದ ವಿದ್ಯಾರ್ಥಿಗಳು, ರೈತರು, ಪ್ರವಾಸಿಗರು ಈ ಬಸ್‌ ಏರುವ ಸ್ಥಿತಿಯಲ್ಲಿ ಇಲ್ಲವಾಗಿದೆ.

’ಅಗತ್ಯಕ್ಕೆ ತಕ್ಕಂತೆ ಬಸ್‌ಗಳನ್ನು ಹೆಚ್ಚಿಸಬೇಕಾದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಬಸ್‌ಗಳ ಸಂಖ್ಯೆಯನ್ನು ಮತ್ತಷ್ಟು ತಗ್ಗಿಸಿದೆ. ಇದರ ನೇರ ಹೊಡೆತ ಬಿದ್ದಿರುವುದು ಹಂಪಿ, ಕಮಲಾಪುರ ಭಾಗದ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಈ ಭಾಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಇರುವ ರೈತರಿಗೆ. ವಿದ್ಯಾರ್ಥಿಗಳು ಅನಿವಾರ್ಯವಾಗಿ ಸಿಕ್ಕ ಸಿಕ್ಕ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರನ್ನೂ ಕಾಡಿಬೇಡಿ ಅವರೊಂದಿಗೆ ಹೋಗುವ ಸ್ಥಿತಿ ಇದೆ’ ಎಂದು ಕಮಲಾಪುರದ ಮಾನವೀಯ ಸಹಾಯ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್‌ ಹೇಳಿದರು.

‘ಹೊಸಪೇಟೆಯಿಂದ, ಕಮಲಾಪುರದಿಂದ ಹಂಪಿಗೆ ಹೆಚ್ಚಿನ ಬಸ್‌ಗಳನ್ನು ಓಡಿಸಬೇಕು. ಪ್ರಯಾಣಿಕರು ಭಾರಿ ಸಂಖ್ಯೆಯಲ್ಲಿ ಇದ್ದರೂ ಬಸ್‌ ಓಡಿಸುತ್ತಿಲ್ಲ ಎಂದರೆ ಯಾವುದೋ ಗುಮಾನಿ ಮೂಡುತ್ತದೆ. ಜಿ20 ಶೃಂಗಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ ಎನ್ನುವ ಜಿಲ್ಲಾಡಳಿತ, ಸ್ಥಳೀಯ ಜನರನ್ನು ಈ ರೀತಿ ಕಡೆಗಣಿಸುವುದು ಸರಿಯೇ?’ ಎಂದು ಅವರು ಪ್ರಶ್ನಿಸಿದರು.

ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್‌ ಬಿಡಲು ಇರುವ ಸಮಸ್ಯೆ ಏನು ಎಂದು ಕೇಳಲು ವಿಭಾಗೀಯು ಸಾರಿಗೆ ನಿಯಂತ್ರಣಾಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

ಹಂಪಿಯಲ್ಲಿ ಗುರುವಾರ ಬಸ್‌ ಏರಲು ಸೇರಿದ್ದ ಪ್ರಯಾಣಿಕರು. ಜೂನ್‌ 12ರಿಂದಲೂ ಇಲ್ಲಿ ಪ್ರತಿದಿನ ಇಂತಹ ದೃಶ್ಯ ಸಾಮಾನ್ಯ  –ಪ್ರಜಾವಾಣಿ ಚಿತ್ರ
ಹಂಪಿಯಲ್ಲಿ ಗುರುವಾರ ಬಸ್‌ ಏರಲು ಸೇರಿದ್ದ ಪ್ರಯಾಣಿಕರು. ಜೂನ್‌ 12ರಿಂದಲೂ ಇಲ್ಲಿ ಪ್ರತಿದಿನ ಇಂತಹ ದೃಶ್ಯ ಸಾಮಾನ್ಯ  –ಪ್ರಜಾವಾಣಿ ಚಿತ್ರ

ಶಾಲಾ–ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಎದುರಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿರಲಿಲ್ಲ. ತಕ್ಷಣ ಹೆಚ್ಚುವರಿ ಬಸ್‌ ಓಡಿಸಲು ಸೂಚಿಸುವೆ ವೆಂಕಟೇಶ್‌ ಟಿ. ಜಿಲ್ಲಾಧಿಕಾರಿ

ಸೀಮಿತ  ಬಸ್‌; ಏನಿದರ ಮರ್ಮ?

ಹೊಸಪೇಟೆಯಿಂದ ಹಂಪಿಗೆ ಕಮಲಾಪುರದಿಂದ ಹಂಪಿಗೆ ಸಂಚರಿಸುವ ಬಸ್‌ಗಳ ಸಂಖ್ಯೆ ಸೀಮಿತ. ಇದುವೇ ಸಮಸ್ಯೆಗೆ ಮೂಲ. ಬಸ್‌ ಹೆಚ್ಚಿಸದೆ ಇರುವುದಕ್ಕೆ ಸ್ಥಳೀಯ ಆಟೊಗಳ ಒತ್ತಡ ಇದೆಯೇ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಹಂಪಿಯಿಂದ ಕಮಲಾಪುರಕ್ಕೆ ಆಟೊಗಳಲ್ಲೇ ಹೋಗಬೇಕು. ಸಾಕಷ್ಟು ಆಟೊಗಳಿವೆ. ಒಬ್ಬೊಬ್ಬರು ₹20 ಪಾವತಿಸಬೇಕು. ಆಟೊ ಮಾಡಿ ಹೋಗುವುದಾದರೆ ಕನಿಷ್ಠ ₹100 ಇದೆ. ಪ್ರವಾಸಿಗರ ಮಾತು ಬಿಡಿ ಖರ್ಚಾಗುವ ನಿರೀಕ್ಷೆಯಲ್ಲಿಯೇ ಅವರು ಇಲ್ಲಿಗೆ ಬಂದಿರುತ್ತಾರೆ. ಆದರೆ ಇಲ್ಲೇ ಇರುವ ನಾವು ಏನು ಮಾಡಬೇಕು ವಿದ್ಯಾರ್ಥಿಗಳ ಪಾಡೇನು ಎಂಬುದು ಸ್ಥಳೀಯರ ಅಳಲು.

ಆರೆಂಜ್ ಕೌಂಟಿಯಲ್ಲೂ ಪೆಂಡಾಲ್‌ ಅಳವಡಿಕೆ

‘ಜಿ20 ಶೃಂಗಕ್ಕೆ ಕೊನೆಯ ಹಂತದ ಸಿದ್ಧತೆ ನಡೆದಿದೆ. ಸ್ವಚ್ಛತಾ ಕಾರ್ಯ ಬಹುತೇಕ ಕೊನೆಗೊಂಡಿದೆ. ಗುರುವಾರ ಜಿಟಿ ಜಿಟಿ ಮಳೆ ಸುರಿದಿದ್ದರೂ ಸಿದ್ಧತೆಗೆ ತೊಂದರೆ ಆಗಿಲ್ಲ. ಎದುರು ಬಸವಣ್ಣ ಮತ್ತು ವಿಜಯ ವಿಠ್ಠಲ ದೇವಸ್ಥಾನದ ಬಳಿ ಎರಡು ಜರ್ಮನ್‌ ಪೆಂಡಾಲ್‌ಗಳನ್ನು ಹಾಕುವ ಕೆಲಸ ಆರಂಭವಾಗಿದೆ. ಮುಖ್ಯ  ಸಭೆಗಳೆಲ್ಲ ಆರೆಂಜ್‌ ಕೌಂಟಿಯಲ್ಲೇ ನಡೆಯಲಿದ್ದರೂ ಅಲ್ಲೂ ಸಹ ಜರ್ಮನ್‌ ಪೆಂಡಾಲ್‌ ಹಾಕಿ ಸಭಾಂಗಣ ನಿರ್ಮಿಸಲಾಗುತ್ತಿದೆ ಏಕೆಂದರೆ ಕೌಂಟಿಯಲ್ಲಿ ದೊಡ್ಡ ಸಭಾಂಗಣ ಇಲ್ಲ’ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT