ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಿ.ವಿ.ಯಲ್ಲಿ ಮರಳಿದ ಸಂತಸ

ಅಧಿಕಾರ ಹಸ್ತಾಂತರಿಸದೇ ನಿರ್ಗಮಿಸಿದ ಸ.ಚಿ.ರಮೇಶ; ವಿಜಯ್‌ ಅಧಿಕಾರಕ್ಕೆ
Last Updated 22 ಫೆಬ್ರುವರಿ 2023, 12:04 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಟಿ.ಪಿ.ವಿಜಯ್‌ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು.

ವಿಶ್ರಾಂತ ಕುಲಪತಿ ಪ್ರೊ.ಸ.ಚಿ.ರಮೇಶ ಅವರು ಅಧಿಕಾರ ಹಸ್ತಾಂತರಿಸಬೇಕಿತ್ತು. ಆದರೆ, ಅವರು ಕಚೇರಿಯತ್ತ ಸುಳಿಯಲೇ ಇಲ್ಲ. ಅದಕ್ಕೆ ಕಾರಣವೇನೆಂಬುದು ಗೊತ್ತಾಗಲಿಲ್ಲ. ರಮೇಶ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯೆಗೂ ಲಭ್ಯರಾಗಲಿಲ್ಲ. ಕುಲಸಚಿವ ಪ್ರೊ.ಎ. ಸುಬ್ಬಣ್ಣ ರೈ ಅವರು ಕಾರ್ಯಭಾರ ವರ್ಗಾವಣೆ ಪತ್ರ ತಂದು ಕೊಟ್ಟರು. ಅದಕ್ಕೆ ಸಹಿ ಹಾಕುವುದರ ಮೂಲಕ ವಿಜಯ್‌ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.

‘ರಮೇಶ ಅವರಿಗೆ ವ್ಯವಸ್ಥೆ, ಉನ್ನತ ಹುದ್ದೆ ಮೇಲೆ ಗೌರವ ಇಲ್ಲ. ಈ ಹಿಂದೆ ಎಲ್ಲರೂ ಅಧಿಕಾರ ಹಸ್ತಾಂತರಿಸಿಯೇ ಹೋಗಿದ್ದಾರೆ. ಆದರೆ, ರಮೇಶ ಕನಿಷ್ಠ ಸೌಜನ್ಯಕ್ಕೆ ಬಂದು ಅಧಿಕಾರ ಹಸ್ತಾಂತರಿಸಲಿಲ್ಲ. ಇದು ಅವರ ಮೊಂಡುತನ ತೋರಿಸುತ್ತದೆ’ ಎಂದು ಹಿರಿಯ ಪ್ರಾಧ್ಯಾಪಕರು ತಿಳಿಸಿದರು.

ಮರಳಿದ ಸಂತಸ:

ಕಳೆದ ನಾಲ್ಕು ವರ್ಷಗಳ ಸ.ಚಿ.ರಮೇಶ ಅವರ ಅಧಿಕಾರದ ಅವಧಿಯಲ್ಲಿ ವಿ.ವಿ ಸಿಬ್ಬಂದಿ, ವಿದ್ಯಾರ್ಥಿಗಳು, ರಮೇಶ ಹಾಗೂ ಅವರ ಆಡಳಿತದ ವಿರುದ್ಧ ಸಂಘರ್ಷ, ಹೋರಾಟ ನಡೆಸುವುದು ಸಾಮಾನ್ಯವಾಗಿತ್ತು. ಪರಸ್ಪರ ಆರೋಪ, ಪ್ರತ್ಯಾರೋಪ, ವರ್ಗಾವಣೆ, ವಿಭಾಗ ಬದಲಾವಣೆ ಮಾಡಿ ಕಿರುಕುಳ ಕೊಡುತ್ತಿದ್ದಾರೆ ಎಂಬ ಆರೋಪಗಳೇ ಸದ್ದು ಮಾಡಿದವು. ಶೈಕ್ಷಣಿಕ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿದ್ದವು. ಅಕಾಡೆಮಿಕ್‌ ಚಟುವಟಿಕೆಗಳಿಗೆ ಪೂರಕವಾದ ವಾತಾವರಣವೇ ಇರಲಿಲ್ಲ. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ, ಹೆಸರಿಗೆ ಮಾತ್ರ ಎಂಬಂತೆ ಕೆಲಸ ಮಾಡುತ್ತಿದ್ದರು. ಆದರೆ, ವಿಜಯ್‌ ಅವರು ಅಧಿಕಾರ ಸ್ವೀಕರಿಸಿದ ನಂತರ ವಿ.ವಿ. ಸಿಬ್ಬಂದಿ, ವಿದ್ಯಾರ್ಥಿಗಳ ಮುಖದಲ್ಲಿ ಮಂಗಳವಾರ ಲವಲವಿಕೆ, ಸಂತಸ, ಸಂಭ್ರಮ ಕಂಡು ಬಂತು.

ಸಂಜೆ ಕಿಕ್ಕಿರಿದು ತುಂಬಿದ ಭುವನ ವಿಜಯ ಸಭಾಂಗಣವೇ ಅದಕ್ಕೆ ಸಾಕ್ಷಿಯಾಗಿತ್ತು. ನೂತನ ಕುಲಪತಿಯನ್ನು ಸಿಬ್ಬಂದಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ವಿಜಯ್‌, ‘ಯಾವ ಹುದ್ದೆಯೂ ದೊಡ್ಡದಿಲ್ಲ. ಎಲ್ಲರೂ ಪರಸ್ಪರ ಸಹಕಾರದಿಂದ ವಿಶ್ವವಿದ್ಯಾಲಯದಲ್ಲಿ ಉತ್ತಮವಾಗಿ ಕೆಲಸ ಮಾಡೋಣ. ಸಿಬ್ಬಂದಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತೇನೆ’ ಎಂದು ಭರವಸೆ ಕೊಟ್ಟರು. ಆಗ ಕರತಾಡನ ಮುಗಿಲು ಮುಟ್ಟಿತ್ತು. ಹೊರಗೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

‘ಯಾರಿಗೂ ಇಲ್ಲ ಮುಂಬಡ್ತಿ’:

‘ವಿಶ್ವವಿದ್ಯಾಲಯದ ಯಾವುದೇ ಸಿಬ್ಬಂದಿಗೂ ಮುಂಬಡ್ತಿ ಕೊಟ್ಟಿಲ್ಲ. ಅದು ಪರಿಶೀಲನೆಯ ಹಂತದಲ್ಲಿದೆ. ನಿಯಮಾನುಸಾರ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು’ ಎಂದು ಕುಲಸಚಿವ ಪ್ರೊ.ಎ. ಸುಬ್ಬಣ್ಣ ರೈ ಅವರು ವಿಶ್ವವಿದ್ಯಾಲಯದ ವಿವಿಧ ವೃಂದದ ಬೋಧಕೇತರ ಸಿಬ್ಬಂದಿಗೆ ಮಂಗಳವಾರ ಕೊಟ್ಟಿರುವ ಹಿಂಬರಹದಲ್ಲಿ ತಿಳಿಸಿದ್ದಾರೆ.

ಸ.ಚಿ. ರಮೇಶ ಅವರು ತಮ್ಮ ಅವಧಿ ಕೊನೆಗೊಳ್ಳುವ ವಿಷಯ ತಿಳಿದು, ತಮಗೆ ಬೇಕಾದವರಿಗೆ ಮುಂಬಡ್ತಿ ಕೊಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಕುರಿತು ರಾಜ್ಯಪಾಲರು, ಕುಲಸಚಿವರಿಗೆ ಪತ್ರ ಬರೆದು ದೂರಲಾಗಿತ್ತು. ಅದಕ್ಕೆ ಕುಲಸಚಿವರು ಮಂಗಳವಾರ ಮೇಲಿನಂತೆ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT