ಭಾನುವಾರ, ಜುಲೈ 3, 2022
24 °C
ನಾಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ

ಪಂಚಾಯಿತಿಯಿಂದ ಗ್ರಾಮದ ಸ್ವಯಂ ರಕ್ಷಣೆ: ಚೆಕ್‌ಪೋಸ್ಟ್‌ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ(ವಿಜಯನಗರ): ಕೋವಿಡ್19 ಮಾರ್ಗಸೂಚಿ ಅನುಸರಿಸುವಲ್ಲಿ ಗ್ರಾಮೀಣ ಭಾಗದ ಹಲವು ಕಡೆ ನಿರ್ಲಕ್ಷ್ಯ ತೋರಲಾಗುತ್ತಿದೆ. ಆದರೆ, ತಾಲ್ಲೂಕಿನ ನಾಗೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ವಿಶೇಷ ಕ್ರಮ ಕೈಗೊಳ್ಳುವುದರ ಮೂಲಕ ಸ್ವಯಂ ರಕ್ಷಣೆ ಮಾಡಿಕೊಳ್ಳಲಾಗುತ್ತಿದೆ.

ನಾಗೇನಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಬರುವ ಬೆನಕಾಪುರ, ಕಡ್ಡಿರಾಂಪುರ ಹಾಗೂ ಬಸವನದುರ್ಗ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಪಂಚಾಯಿತಿ ವತಿಯಿಂದ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ. ದಿನದ 24 ಗಂಟೆಯೂ ಸಿಬ್ಬಂದಿ ಮೂರು ಪಾಳಿಯಲ್ಲಿ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ತುರ್ತು ಇದ್ದವರಿಗಷ್ಟೇ ಗ್ರಾಮದಿಂದ ಹೊರಹೋಗಲು ಹಾಗೂ ಒಳಬರಲು ಅವಕಾಶ ಕಲ್ಪಿಸುತ್ತಿದ್ದಾರೆ. ಅನ್ಯ ಊರುಗಳಿಂದ ಗ್ರಾಮಕ್ಕೆ ಮರಳಿದರೆ ಅಂತಹವರ ಸಂಪೂರ್ಣ ಮಾಹಿತಿ ದಾಖಲಿಸುತ್ತಿದ್ದಾರೆ. ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿ, ಆರೋಗ್ಯ ತಪಾಸಣೆ ಕೂಡ ಮಾಡುತ್ತಿದ್ದಾರೆ. ಗ್ರಾಮಗಳಲ್ಲಿ ಅನಗತ್ಯ ಓಡಾಟಕ್ಕೆ ತಡೆ ಒಡ್ಡಲಾಗಿದೆ. ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು ಗ್ರಾಮಸ್ಥರಿಗೆ ತಿಳಿ ಹೇಳಿ, ಕೊರೊನಾ ಸೋಂಕು ಊರೊಳಗೆ ಪ್ರವೇಶಿಸದಂತೆ ಶ್ರಮಿಸುತ್ತಿದ್ದಾರೆ.

ಈ ವಿಶೇಷ ಕ್ರಮದಿಂದಾಗಿ ಪಂಚಾಯಿತಿ ವ್ಯಾಪ್ತಿಯ ಎರಡು ಗ್ರಾಮಗಳಲ್ಲಿ ಸೋಂಕು ಹರಡಿಲ್ಲ. ಸದ್ಯ 28 ಸಕ್ರಿಯ ಪ್ರಕರಣಗಳಿವೆ.

‘ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಸಾವು ನೋವು ಉಂಟಾಗಬಾರದು. ಅದಕ್ಕಾಗಿ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಚೆಕ್‌ಪೋಸ್ಟ್‌ ತೆರೆದು ವಿಶೇಷ ನಿಗಾ ವಹಿಸಲಾಗಿದೆ. ಕಡ್ಡಾಯವಾಗಿ ಮಾಸ್ಕ್‌ ಧರಿಸಿಕೊಂಡು ಓಡಾಡಲು ಗ್ರಾಮಸ್ಥರಿಗೆ ತಿಳಿಸಲಾಗಿದೆ’ ಎಂದು ಪಂಚಾಯಿತಿ ಅಧ್ಯಕ್ಷೆ ಹುಲಿಗೆಮ್ಮ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು