ರಥೋತ್ಸವದ ವೇಳೆ ಜೀವಹಾನಿ ಸಂಭವಿಸಬಾರದಿತ್ತು. ಮೃತರ ಕುಟುಂಬಕ್ಕೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು
ಎಂ.ಎಸ್.ದಿವಾಕರ್ ಜಿಲ್ಲಾಧಿಕಾರಿ
ಬಾಳೆಹಣ್ಣಿಗೆ ಇನ್ನು ನಿಷೇಧ?
ರಥೋತ್ಸವದ ಸಂದರ್ಭದಲ್ಲಿ ರಥಕ್ಕೆ ಬಾಳೆಹಣ್ಣು ಉತ್ತತ್ತಿ ಎಸೆಯುವ ಸಂಪ್ರದಾಯ ಹಲವೆಡೆ ನಡೆಯುತ್ತ ಬಂದಿದೆ. ಆದರೆ ಇದೇ ಬಾಳೆಹಣ್ಣಿಗೆ ಮೆಟ್ಟಿ ಜಾರಿ ಬಿದ್ದು ಜನರ ಮೇಲೆ ರಥದ ಚಕ್ರ ಹರಿದುಹೋದ ಹಲವಾರು ವಿದ್ಯಮಾನಗಳು ರಾಜ್ಯದ ಹಲವೆಡೆ ನಡೆದಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ರಥಕ್ಕೆ ಬಾಳೆಹಣ್ಣು ಎಸೆಯುವುದನ್ನು ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ತಯಾರಿ ಎಂಬಂತೆ ಭಾನುವಾರ ಬೆಳಿಗ್ಗೆಯೇ ಜಂಬುನಾಥ ಗುಡ್ಡದಲ್ಲಿ ಬಾಳೆಹಣ್ಣು ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಹೀಗಿದ್ದರೂ ಭಕ್ತರು ತಂದ ಬಾಳೆಹಣ್ಣುಗಳು ಸಾಕಷ್ಟು ಇದ್ದ ಕಾರಣ ರಥಕ್ಕೆ ಬಾಳೆಹಣ್ಣು ಎಸೆಯುವ ಸಂಪ್ರದಾಯಕ್ಕೆ ಚ್ಯುತಿ ಬಂದಿರಲಿಲ್ಲ. ಆದರೆ ಅದುವೇ ಒಂದು ಜೀವ ಬಲಿ ತೆಗೆದುಕೊಂಡಿದೆ.
ಬೆಟ್ಟ ಹತ್ತಿ ಬರುವ ಸಾಹಸ
ಜಂಬುನಾಥ ದೇವಸ್ಥಾನ ಇರುವುದು ಬೆಟ್ಟದ ಮೇಲೆ. ಹೀಗಾಗಿ ಅಲ್ಲಿಗೆ ಸುಮಾರು 700 ಮೆಟ್ಟಿಲು ಹತ್ತಿ ಹೋಗಬೇಕು ಇಲ್ಲವೇ ಕಚ್ಚಾ ರಸ್ತೆಯಲ್ಲಿ ವಾಹನದಲ್ಲಿ ತೆರಳಬೇಕು. ರಾಜಾಪುರ ಮತ್ತು ಕಲ್ಲಳ್ಳಿ ಊರಿನ ಜನರು ರಸ್ತೆಯೇ ಇಲ್ಲದ ಬೆಟ್ಟದ ಹಾದಿಯಲ್ಲಿ ಬೆಟ್ಟ ಏರಿ ಈ ದೇವಸ್ಥಾನಕ್ಕೆ ಬಂದು ಉತ್ಸವದಲ್ಲಿ ಪಾಲ್ಗೊಳ್ಳುವುದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ರಥೋತ್ಸವಕ್ಕೆ ಬರುವ ಮಂದಿಗೆ ಮೊಸರನ್ನ ಉಪ್ಪಿನಕಾಯಿ ಪ್ರಸಾದ ರೂಪದಲ್ಲಿ ನೀಡುವುದು ಇಲ್ಲಿ ನಡೆಯುತ್ತ ಬಂದಿದೆ. ಭಾನುವಾರ ಬಳ್ಳಾರಿ ರಸ್ತೆಯ ಲಕ್ಷ್ಮೀ ಸ್ಟೀಲ್ಸ್ ಸಂಸ್ಥೆಯವರು ಕೆಂಚ ಲಕ್ಷ್ಮೀದೇವಿ ಅವರ ನೆನಪಿನಲ್ಲಿ ಇಡೀ ದಿನ ಅನ್ನಸಂತರ್ಪಣೆ ಸೇವೆ ಸಲ್ಲಿಸಿದರು.