ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಬ್ಯಾಂಕ್‌ ಹಸಿವಿನ ಸರ್ಕಾರದಿಂದ ಜನರ ರಕ್ಷಣೆ ಅಸಾಧ್ಯ: ಪ್ರಧಾನಿ ಮೋದಿ

Published 28 ಏಪ್ರಿಲ್ 2024, 14:37 IST
Last Updated 28 ಏಪ್ರಿಲ್ 2024, 14:37 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಮತಬ್ಯಾಂಕ್ ಹಸಿವಿನಿಂದ ಕೂಡಿದ ಸರ್ಕಾರ ಜನರ ರಕ್ಷಣೆ ಮಾಡಲು ಸಾಧ್ಯವಿಲ್ಲ. ನೇಹಾರಂತಹ ಯುವತಿಯರ ರಕ್ಷಣೆಗೆ, ಭಯೋತ್ಪಾದನಾ ಕೃತ್ಯಗಳಿಂದ ದೇಶವನ್ನು ಮುಕ್ತಗೊಳಿಸುವುದಕ್ಕಾಗಿ ಬಿಜೆಪಿಯನ್ನು ಬೆಂಬಲಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.

ಇಲ್ಲಿನ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಭಾಷಣ ಮಾಡಿದ ಅವರು, ‘ಜೀವನದ ಕೊನೆಯ ಉಸಿರು ಇರುವವರೆಗೆ ದೇಶದ ಜನರಿಗಾಗಿ ಮೋದಿ ಜೀವಿಸುತ್ತಾನೆ’ ಎಂದರು.

‘2014ಕ್ಕೆ ಮೊದಲು ಬಾಂಬ್ ಸ್ಫೋಟ ಪ್ರತಿದಿನದ ವಿಷಯವಾಗಿತ್ತು. 2014ರ ಬಳಿಕ ಬಾಂಬ್ ಸ್ಫೋಟ ನಿಂತಿದೆ. ಹಿಂದೆ ನೆರೆ ರಾಷ್ಟ್ರಗಳು ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದ್ದವು. ಈಗ ಮೋದಿ ಇರುವುದರಿಂದ ದೇಶ ಸುರಕ್ಷಿತವಾಗಿದೆ. ಇದಕ್ಕೆಲ್ಲ ಮೋದಿ ಕಾರಣ ಅಲ್ಲ, ನಿಮ್ಮ ಒಂದು ಮತ ದೃಢ ಸರ್ಕಾರ ರಚನೆಯಾಗುವಂತೆ ಮಾಡಿದೆ. ದೇಶದಲ್ಲಿ ಇಂತಹ ಪರಿವರ್ತನೆಗಳೆಲ್ಲ ನಿಮ್ಮ ಮತದಿಂದ ಸಾಧ್ಯವಾಗಿದೆ’ ಎಂದು ಅವರು ಹೇಳಿದರು.

‘ಭಾರತವು ವೇಗವಾಗಿ ಮುನ್ನಡೆಯುತ್ತಿದೆ. ಇದು ಕೆಲವು ದೇಶಗಳು, ಕೆಲವು ಸಂಘಟನೆಗಳಿಗೆ ಇಷ್ಟವಾಗುತ್ತಿಲ್ಲ. ಭಾರತವು ದುರ್ಬಲವಾಗಿದ್ದರೆ ಪ್ರಯೋಜನ ಪಡೆಯಬಹುದೆಂದು ಕೆಲವರು ಭಾವಿಸುತ್ತಾರೆ. 2014ಕ್ಕೆ ಮೊದಲು ದೆಹಲಿಯ ರಾಜನೀತಿಯು ದಲ್ಲಾಳಿಗಳ ಕೈಯಲ್ಲಿತ್ತು. 2014ರ ಬಳಿಕ ದಲ್ಲಾಳಿಗಳು ದೆಹಲಿ ಬಿಟ್ಟು ರಾಜ್ಯಗಳಲ್ಲಿ ಅಂಗಡಿ ತೆರೆದಿದ್ದಾರೆ’ ಎಂದು ಮೋದಿ ಕುಟುಕಿದರು.

‘ಮೋದಿ’ ಘೋಷಣೆ: ಸಾವಿರಾರು ಮಂದಿ ಸೇರಿದ್ದ ಸಮಾವೇಶದಲ್ಲಿ ಮೋದಿ ಬಹಳ ಉತ್ಸಾಹದಿಂದ 50 ನಿಮಿಷಗಳ ವರೆಗೆ ಮಾತನಾಡಿದರು. ಶ್ರೀರಾಮಮಂದಿರ, ಭಯೋತ್ಪಾದನೆ ನಿರ್ಮೂಲನೆ, ಜನರ ಆಸ್ತಿಗೆ ಕಾಂಗ್ರೆಸ್ ಕೈಹಾಕುವ ಹುನ್ನಾರದ ಬಗ್ಗೆ ಮೋದಿ ಹೇಳುತ್ತಿದ್ದಾಗಲೆಲ್ಲಾ ಜನ ಒಕ್ಕೊರಲಿನಿಂದ ‘ಮೋದಿ. ಮೋದಿ’ ಎಂದು ಘೋಷಣೆ ಕೂಗಿದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮೂರೂ ಕ್ಷೇತ್ರಗಳ ಅಭ್ಯರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT