ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವು ಮತ ನೀಡಿದ್ದಕ್ಕೆ ಈ ಸಾಧನೆ:ಸಾವಿರಾರು ಅಭಿಮಾನಿಗಳನ್ನು ನೋಡಿ ಪುಳಕಿತರಾದ ಮೋದಿ

ಬಲಶಾಲಿ ಸರ್ಕಾರ ಬಂದ ಬಳಿಕ ಕಾಂಗ್ರೆಸ್‌ಗೆ ಕಷ್ಟ
Published 28 ಏಪ್ರಿಲ್ 2024, 16:05 IST
Last Updated 28 ಏಪ್ರಿಲ್ 2024, 16:05 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಕೂಪ. ಅಲ್ಲಿದ್ದವರೆಲ್ಲರೂ ಭ್ರಷ್ಟರಾಗಿದ್ದರು. ಬಿಜೆಪಿಯ ಬಲಶಾಲಿ ಸರ್ಕಾರ ಬಂದ ಬಳಿಕ ಕಾಂಗ್ರೆಸಿಗರಿಗೆ ಕಷ್ಟವಾಗಿದೆ. ಕೆಲಸ ಮಾಡಲೊಲ್ಲದ ಕಾಂಗ್ರೆಸ್ ಪಕ್ಷವು, ಬಿಜೆಪಿ ಕೆಲಸ ಮಾಡದಂತೆ ತಡೆಯುತ್ತದೆ, ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾನುವಾರ ಸಂಜೆ ಇಲ್ಲಿನ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಭಾಷಣ ಮಾಡಿದ ಅವರು, ಪಿಎಫ್‍ಐ ಎಂಬ ಭಯೋತ್ಪಾದಕರ ಸಂಘಟನೆಯನ್ನು ನಾವು ನಿಷೇಧಿಸಿದ್ದೆವು. ಅದರ ಸಹವರ್ತಿ ಸಂಘಟನೆ ಜೊತೆ ಕಾಂಗ್ರೆಸ್ ಪಕ್ಷವು ಒಪ್ಪಂದ ಮಾಡಿಕೊಂಡಿದೆ. ಬೆಂಗಳೂರು ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿದೆ. ಹುಬ್ಬಳ್ಳಿ ಕಾಲೇಜಿನಲ್ಲಿ ಯುವತಿಯನ್ನು ಚಾಕುವಿನಿಂದ ಹತ್ಯೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷವು ಇಂಥವರ ಜೊತೆ ನಿಂತಿರುವುದಕ್ಕೇ ಈ ಎಲ್ಲ ಘಟನೆಗಳು ನಡೆದಿವೆ ಎಂದರು.

‘ದೇಶಕ್ಕೆ ಸ್ವಾತಂತ್ರ್ಯ ಲಭಿಸಿದರೂ ಅಯೋಧ್ಯೆಯ ಶ್ರೀರಾಮನಿಗೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. 500 ವರ್ಷಗಳ ಬಳಿಕ ರಾಮಮಂದಿರದ ನಿರ್ಮಾಣ ಪೂರ್ಣಗೊಂಡಿತು. ಇದಕ್ಕೆ ನಿಮ್ಮ ಮತವೇ ಕಾರಣ. ಆಹ್ವಾನ ನೀಡಿದರೂ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ತಿರಸ್ಕರಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಇಂಡಿ ಒಕ್ಕೂಟದವರು ಅವಮಾನ ಮಾಡಿದರು. ರಾಮಲಲ್ಲಾಗೆ ಅವಮಾನ ಮಾಡಿದ ಇವರಿಗೆ ಪಾಠ ಕಲಿಸಿ’ ಎಂದು ಮೋದಿ ಹೇಳುತ್ತಿದ್ದಂತೆಯೇ ಹರ್ಷೋದ್ಗಾರ ಮೊಳಗಿತು.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬದ್ಧ: ‘ಕಾಂಗ್ರೆಸ್ ಪಕ್ಷ ಎಷ್ಟೇ ಪ್ರಯತ್ನಪಟ್ಟರೂ ಭಾರತ ವಿಕಾಸ ಹೊಂದಿಯೇ ಸಿದ್ಧ. ಕರ್ನಾಟಕವು ಕೂಡ ಅಭಿವೃದ್ಧಿ ಹೊಂದಲಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಬಿಜೆಪಿ ತನ್ನ ಜವಾಬ್ದಾರಿ ಎಂದು ಭಾವಿಸಿದೆ. ಸಾವಿರಾರು ಕೋಟಿ ರೂಪಾಯಿಯ ಯೋಜನೆಗಳನ್ನು ಕೇಂದ್ರವು ಜಾರಿಗೊಳಿಸಿದೆ. ಬಳ್ಳಾರಿಯಲ್ಲಿ ಜೀನ್ಸ್ ಉದ್ಯಮದಿಂದ, ಉಕ್ಕಿನ ಕೈಗಾರಿಕೆಯಿಂದ ಹೆಚ್ಚು ಉದ್ಯೋಗಗಳು ಸಿಕ್ಕಿವೆ’ ಎಂದು ಮೋದಿ ಹೇಳಿದರು.

‘ಬಿಜೆಪಿ ಪ್ರಯತ್ನದಿಂದ ಕೊಪ್ಪಳದ ಆಟಿಕೆ ಉದ್ಯಮವೂ ಸಾಕಷ್ಟು ಮಂದಿಗೆ ಉದ್ಯೋಗ ನೀಡಿದೆ. ಕಾಂಗ್ರೆಸ್ಸಿಗರು ನಮ್ಮ ಪ್ರಯತ್ನಗಳನ್ನು ತಮಾಷೆ ಮಾಡಿದ್ದರು. ಈಗ ಭಾರತವು ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬಿ ಆಗಿದೆ. ಜಾಗತಿಕ ಮಾರುಕಟ್ಟೆಯನ್ನೂ ಸೃಷ್ಟಿಸಿದೆ’ ಎಂದು ಹೇಳಿದರು.

‘ಕರ್ನಾಟಕದಲ್ಲಿ ವಿದ್ಯುತ್, ನೀರು ಇಲ್ಲದೆ ಕೈಗಾರಿಕೆಗಳಿಗೆ ಸಂಕಷ್ಟ ಬಂದಿದೆ. ಕಿಸಾನ್ ಸಮ್ಮಾನ್ ಅಡಿಯಲ್ಲಿ ಬಿಜೆಪಿ ರಾಜ್ಯ ಸರ್ಕಾರ ಕೊಡುತ್ತಿದ್ದ ₹ 4 ಸಾವಿರವನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡಿದೆ’ ಎಂದು ಅವರು ಟೀಕಿಸಿದರು.

‘ಬಳ್ಳಾರಿಯ ಈ ಭೂಮಿ ವಿಜಯನಗರ ಸಾಮ್ರಾಜ್ಯದ ಸಮೃದ್ಧಿಯ ಸಂಕೇತ. ಇಲ್ಲಿನ ಜನರು ವಿಕಸಿತ ಭಾರತ, ವಿಕಸಿತ ಕರ್ನಾಟಕದ ಸಂಕಲ್ಪದೊಂದಿಗೆ ನಿಂತಿದ್ದಾರೆ. ಮತ್ತೊಮ್ಮೆ ಮೋದಿ ಸರ್ಕಾರ ಎಂದು ಇಡೀ ದೇಶವೇ ಹೇಳುತ್ತಿದೆ’ ಎಂದ ಪ್ರಧಾನಿ ಅವರು, ನನ್ನ ವೈಯಕ್ತಿಕ ಕೆಲಸವೊಂದಿದೆ. ಈ ಸಮಾವೇಶದ ಬಳಿಕ ಮನೆ ಮನೆಗೆ ಹೋಗಿ ಮೋದಿಜೀ ಬಂದಿದ್ದರು. ನಿಮಗೆ ನಮಸ್ಕಾರ ಹೇಳಿದ್ದಾರೆ ಎಂದು ತಿಳಿಸಿ ಎಂದು ಮನವಿ ಮಾಡಿದರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಯಚೂರು ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ಬಳ್ಳಾರಿ ಅಭ್ಯರ್ಥಿ ಬಿ.ಶ್ರೀರಾಮುಲು, ಕೊಪ್ಪಳ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್, ಸಂಸದ ದೇವೇಂದ್ರಪ್ಪ, ಶಾಸಕರಾದ ಕೃಷ್ಣ ನಾಯ್ಕ್‌, ನೇಮಿರಾಜ ನಾಯ್ಕ್, ವೈ.ಎಂ.ಸತೀಶ್‌, ಪಕ್ಷದ ಮುಖಂಡರಾದ ಚನ್ನಬಸವನಗೌಡ ಪಾಟೀಲ, ಸಿದ್ಧಾರ್ಥ ಸಿಂಗ್, ಅರುಣಾ ಲಕ್ಷ್ಮಿ, ಪಿ.ರಾಜೀವ್ ಇತರರು ಇದ್ದರು.

–––––

ಮುಗಿಲು ಮುಟ್ಟಿದ ‘ಮೋದಿ’ ಘೋಷಣೆ

ಪ್ರಧಾನಿ ಮೋದಿ ಅವರ ಭಾಷಣ ಆಲಿಸಲು ನಿರೀಕ್ಷೆಗೂ ಮೀರಿ ಅಭಿಮಾನಿಗಳು ಬಂದಿದ್ದರು. 45 ಸಾವಿರಕ್ಕಿಂತ ಅಧಿಕ ಆಸನಗಳನ್ನು ಅಳವಡಿಸಿದ್ದರೆ, ಅದು ಭರ್ತಿಯಾಗಿ ಸಾವಿರಾರು ಮಂದಿ ನಿಂತೇ ಭಾಷಣ ಆಲಿಸಿದರು. ಭಾಷಣದದ ಉದ್ದಕ್ಕೂ ‘ಮೋದಿ ಮೋದಿ’ ಘೋಷಣೆ ಮುಗಿಲು ಮುಟ್ಟುತ್ತಲೇ ಇತ್ತು.

ಕೊನೆಯ ಕಾರ್ಯಕ್ರಮವವಾಗಿದ್ದ ಕಾರಣ ಮೋದಿ ಅವರಲ್ಲೂ ಅವಸರ ಕಾಣಲಿಲ್ಲ. ಅಭಿಮಾನಿಗಳ ಅಭಿಮಾನಕ್ಕೆ ತಲೆದೂಗುತ್ತಲೇ ನಿಧಾನವಾಗಿ ಭಾಷಣ ಮುಂದುವರಿಸಿದರು. ರಾಜ್ಯದ ಇತರ ಮೂರು ಕಡೆಗಳಲ್ಲಿ ಮಾಡಿದ ಭಾಷಣದಂತೆಯೇ ಹೊಸಪೇಟೆಯ ಭಾಷಣದ ಹೂರಣ ಇದ್ದರೂ, ಇಲ್ಲಿನ ಸಾವಿರಾರು ಅಭಿಮಾನಿಗಳಿಗೆ ಇದು ಹೊಸ ವಿಷಯವೆಂಬಂತೆಯೇ ಕೇಳಿಸಿತು.

ಸಂಜೆ 4 ಗಂಟೆ ಸುಮಾರಿಗೆ ಸಾವಿರಾರು ಜನ ಬರತೊಡಗಿದ್ದರು. ಬಿಸಿಲು ತಗ್ಗಿದ್ದರೂ ಸೆಖೆ ವಿಪರೀತವಾಗಿತ್ತು. ಒಂದು ಹಂತದಲ್ಲಿ ನೀರು ಬೇಕೆಂದು ಸಭಿಕರ ಗದ್ದಲ ಎಬ್ಬಿಸಿದ್ದೂ ನಡೆಯಿತು. ಸಂಘಟಕರು ಸಭಾಂಗಣದ ಹೊರಗಡೆ ನೀರಿನ ವ್ಯವಸ್ಥೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT