ಸತತ ಮಳೆಗೆ ಜನಜೀವನ ಅಸ್ತವ್ಯಸ್ತ

ಹೊಸಪೇಟೆ (ವಿಜಯನಗರ): ಬುಧವಾರ ರಾತ್ರಿ ಹಾಗೂ ಗುರುವಾರ ದಿನವಿಡೀ ಸುರಿದ ಸತತ ಮಳೆಗೆ ಜಿಲ್ಲೆಯಾದ್ಯಂತ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ವಿಜಯದಶಮಿ ಅಂಗವಾಗಿ ಬುಧವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಮನೆಗಳಲ್ಲಿ ಪೂಜೆ ಪುನಸ್ಕಾರ ನಡೆದವು. ಸಂಜೆ ಸಂಬಂಧಿಕರು, ಸ್ನೇಹಿತರಿಗೆ ಬನ್ನಿ ಕೊಡಲು ಯೋಚಿಸಿದ್ದ ಜನರಿಗೆ ಮಳೆ ಅಡ್ಡಿಪಡಿಸಿತು. ಬುಧವಾರ ರಾತ್ರಿಯಿಡೀ ಮಳೆ ಸುರಿಯಿತು. ಬೆಳಿಗ್ಗೆ ಕೆಲಹೊತ್ತು ಬಿಡುವು ಕೊಟ್ಟ ಮಳೆ ಅನಂತರ ಸಂಜೆಯ ವರೆಗೆ ಎಡೆಬಿಡದೇ ಸುರಿಯಿತು. ದಟ್ಟ ಕಾರ್ಮೋಡ ಆವರಿಸಿತು. ಪ್ರಮುಖ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿದ್ದರಿಂದ ನಗರ ಮೌನಕ್ಕೆ ಜಾರಿತು. ಬಿಡುವಿಲ್ಲದೆ ಮಳೆ ಸುರಿದ ಕಾರಣ ಅನೇಕರು ಮನೆಗಳಿಂದ ಹೊರಬರಲಿಲ್ಲ. ಅಲ್ಲಲ್ಲಿ ಕೆಲವರು ಕೊಡೆ ಹಿಡಿದುಕೊಂಡು ಓಡಾಡುತ್ತಿರುವುದು ಕಂಡು ಬಂತು.
ಸತತ ಮಳೆಗೆ ಜಿಲ್ಲೆಯ ಬಹುತೇಕ ಚೆಕ್ ಡ್ಯಾಂ, ಕೆರೆ, ಕಟ್ಟೆಗಳು ತುಂಬಿ ಹರಿದಿವೆ. ಕಟಾವು ಹಂತಕ್ಕೆ ಬಂದಿರುವ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಈರುಳ್ಳಿ, ಮೆಣಸಿನಕಾಯಿ ಗದ್ದೆಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದ್ದು, ಬೆಳೆ ಹಾಳಾಗುವ ಸಾಧ್ಯತೆ ಹೆಚ್ಚಾಗಿದೆ.
ಜಿಲ್ಲೆಯಾದ್ಯಂತ 25 ಮನೆಗಳ ಗೋಡೆ ಕುಸಿದು ಬಿದ್ದಿದೆ. ಜಿಲ್ಲೆಯ ಕೂಡ್ಲಿಗಿಯಲ್ಲಿ 9, ಹಗರಿಬೊಮ್ಮನಹಳ್ಳಿಯಲ್ಲಿ 5, ಹೂವಿನಹಡಗಲಿ, ಕೊಟ್ಟೂರಿನಲ್ಲಿ ತಲಾ ನಾಲ್ಕು, ಹರಪನಹಳ್ಳಿ ತಾಲ್ಲೂಕಿನಲ್ಲಿ 3 ಮನೆಗಳಿಗೆ ಹಾನಿಯಾಗಿದೆ.
ಒಳಹರಿವು ಹೆಚ್ಚಳ:
ಇಲ್ಲಿನ ತುಂಗಭದ್ರಾ ಜಲಾಶಯ ಈಗಾಗಲೇ ಸಂಪೂರ್ಣ ತುಂಬಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಒಳಹರಿವು ಹೆಚ್ಚಾಗಿದ್ದು, ಹೆಚ್ಚುವರಿ ನೀರನ್ನು ನೇರ ನದಿಗೆ ಹರಿಸಲಾಗುತ್ತಿದೆ.
1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯಕ್ಕೆ 20,187 ಕ್ಯುಸೆಕ್ ನೀರು ಹರಿದು ಬರುತ್ತಿದೆ. 23,359 ಕ್ಯುಸೆಕ್ ನೀರು ನದಿಗೆ ಹರಿಸಲಾಗುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.