ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಹಾನಿಗೀಡಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಭೇಟಿ

ಜಗತ್ತೇ ಬದಲಾದರೂ ಕಾಲೊನಿ ಬದಲಾಗಿಲ್ಲ
Last Updated 2 ಸೆಪ್ಟೆಂಬರ್ 2022, 12:57 IST
ಅಕ್ಷರ ಗಾತ್ರ

ಹೊಸಪೇಟೆ: ‘ಜಗತ್ತು ಬದಲಾದರೂ ನಮ್ಮ ಕಾಲೊನಿ ಬದಲಾಗಿಲ್ಲ. 5ಜಿ ಬಂದರೂ ನಮ್ಮ ಪರಿಸ್ಥಿತಿ ಸುಧಾರಣೆಯಾಗಿಲ್ಲ’ ಇದು ನಗರದ 15ನೇ ವಾರ್ಡಿನ ಇಂದಿರಾ ನಗರದ ನಿವಾಸಿಗಳು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಎದುರು ತೋಡಿಕೊಂಡ ಗೋಳು. ಒಂದೂವರೆ ತಿಂಗಳ ನಂತರ ಶುಕ್ರವಾರ ಜಿಲ್ಲೆಗೆ ಬಂದ ಸಚಿವೆ ಶಶಿಕಲಾ ಅವರು ನೇರವಾಗಿ ಮಳೆಯಿಂದ ಹಾನಿಗೀಡಾದ ನಗರದ ಇಂದಿರಾ ನಗರಕ್ಕೆ ಭೇಟಿ ನೀಡಿ, ಹಾನಿ ಪರಿಶೀಲಿಸಿದರು.

ಈ ವೇಳೆ ವಿಜಯಕುಮಾರ್‌, ಪರಮೇಶ್ವರಪ್ಪ ಹಾಗೂ ಇತರರು, ‘ಪ್ರತಿ ವರ್ಷ ಮಳೆ ಬಂದಾಗ ರಾಜಕಾಲುವೆಯ ನೀರು ಮನೆಗಳಿಗೆ ನುಗ್ಗಿ ಹಾನಿಯಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಸಂಬಂಧಿಸಿದವರಿಗೆ ಹೇಳಿದರೂ ಪ್ರಯೋಜನವಾಗಿಲ್ಲ’ ಎಂದರು.

ಅದಕ್ಕೆ ಶಶಿಕಲಾ ಪ್ರತಿಕ್ರಿಯಿಸಿ, ‘ನಿಮ್ಮ ಸಮಸ್ಯೆ ನನಗೆ ಗೊತ್ತಾಗಿದೆ. ನೀವು ಅನುಭವಿಸುತ್ತಿರುವ ತೊಂದರೆಯೂ ನೋಡಿದ್ದೇನೆ. ಆಶ್ರಯ ಯೋಜನೆಯಡಿ ನಿವೇಶನಗಳಿವೆ. ಸ್ಥಳೀಯರು ಒಪ್ಪಿದರೆ ಅಲ್ಲಿ ಮನೆ ನಿರ್ಮಿಸಿಕೊಡಲಾಗುವುದು. ಶೀಘ್ರದಲ್ಲೇ ಜಿಲ್ಲಾಧಿಕಾರಿ ನಿಮ್ಮೊಂದಿಗೆ ಸಭೆ ನಡೆಸಿ, ಮಾಹಿತಿ ಕಳಿಸುವಂತೆ ಸೂಚಿಸಿದ್ದೇನೆ. ಎಲ್ಲರ ಅಭಿಪ್ರಾಯ ಪಡೆದು ಮುಂದುವರೆಯಲಾಗುವುದು’ ಎಂದು ಭರವಸೆ ನೀಡಿದರು.

‘ಇಂದಿರಾ ನಗರದಲ್ಲಿ ಸ್ವಚ್ಛತೆ ಇಲ್ಲ. ಓಣಿ ಬಹಳ ಕಿರಿದಾಗಿದೆ. ಮಕ್ಕಳಿಗೆ ಕನಿಷ್ಠ ಆಟವಾಡುವ ಜಾಗವೂ ಇಲ್ಲ. ನೀವೆಲ್ಲ ಮನಸ್ಸು ಮಾಡಿದರೆ ನಿಮಗೆ ಬೇರೆ ಕಡೆ ಮನೆ ಕಟ್ಟಿಸಿಕೊಡಲು ವ್ಯವಸ್ಥೆ ಮಾಡಲಾಗುವುದು. ಒಟ್ಟು 54 ಮನೆಗಳಿಗೆ ಹಾನಿಯಾಗಿದೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಒಬ್ಬರಿಗೆ ತಲಾ ₹10 ಸಾವಿರ ನೀಡಲಾಗಿದೆ’ ಎಂದು ಹೇಳಿದರು.

ಸುನೀಲ್‌, ರುಕ್ಮಿಣಿ, ಓಬಳಮ್ಮ ಹಾಗೂ ಮಾರೆಮ್ಮ ಅವರ ಮನೆಯೊಳಗೆ ಹೋಗಿ ಹಾನಿ ಪರಿಶೀಲಿಸಿದ ಸಚಿವರು ಬಳಿಕ ಅವರಿಗೆ ಪರಿಹಾರದ ಚೆಕ್‌ ವಿತರಿಸಿ, ಧೈರ್ಯ ತುಂಬಿದರು. ಅನಂತರ ಗಾಂಧಿ ನಗರಕ್ಕೂ ಭೇಟಿ ನೀಡಿದರು. ಬಳಿಕ ಅವರು ತಾಲ್ಲೂಕಿನ ಡಣಾಯಕನಕೆರೆಗೆ ಭೇಟಿ ಕೊಟ್ಟು, ಅಲ್ಲಿ ದೇವರಿಗೆ ಪೂಜೆ ಸಲ್ಲಿಸಿದರು. ಕೆರೆ ಕೋಡಿ ಬಿದ್ದು ಹಾನಿಯಾದ ಹೊಲಗಳನ್ನು ವೀಕ್ಷಿಸಿದರು. ಅನಂತರ ಪಾವಗಡ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್‌ ಕಾಮಗಾರಿ ವೀಕ್ಷಿಸಿದರು.

ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ, ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್‌, ನಗರಸಭೆ ಪೌರಾಯುಕ್ತ ಮನೋಹರ್, ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್‌.ಎಸ್‌. ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಡಿವೈಎಸ್ಪಿ ವಿಶ್ವನಾಥ ರಾವ್ ಕುಲಕರ್ಣಿ ಇದ್ದರು.

ಸಚಿವರು ಎಲ್ಲೆಲ್ಲಿಗೆ ಭೇಟಿ ಕೊಟ್ಟರು?
* ಬೆಳಿಗ್ಗೆ 11.40ಕ್ಕೆ ಹೊಸಪೇಟೆಯ ಇಂದಿರಾ ನಗರಕ್ಕೆ ಭೇಟಿ
* ಮಧ್ಯಾಹ್ನ 12.30ಕ್ಕೆ ಹೊಸಪೇಟೆ ತಾಲ್ಲೂಕಿನ ಡಣಾಯಕನಕೆರೆಗೆ
* ಮಧ್ಯಾಹ್ನ 1.33ಕ್ಕೆ ಮರಿಯಮ್ಮನಹಳ್ಳಿ ಕುಡಿವ ನೀರಿನ ಕಾಮಗಾರಿ ವೀಕ್ಷಣೆ
* ಮಧ್ಯಾಹ್ನ 1.30ಕ್ಕೆ ಎಂ.ಎಂ. ಹಳ್ಳಿ ಲಕ್ಷ್ಮಿನಾರಾಯಣ–ಆಂಜನೇಯ ಸ್ವಾಮಿ ದೇಗುಲಕ್ಕೆ
* ಮಧ್ಯಾಹ್ನ 2.10ಕ್ಕೆ ಹೊಸಪೇಟೆಯಲ್ಲಿ ಎಸ್ಪಿ ಕಚೇರಿಗೆ ಗುದ್ದಲಿ ಪೂಜೆ

2,153 ಹೆಕ್ಟೇರ್‌ ಬೆಳೆ, 197 ಮನೆಗಳಿಗೆ ಹಾನಿ
‘ವಿಜಯನಗರ ಜಿಲ್ಲೆಯಲ್ಲಿ ಈ ಸರಾಸರಿಗಿಂತ 185.9 ಮಿ.ಮೀ ಜಾಸ್ತಿ ಮಳೆಯಾಗಿದ್ದು, ಇದರಿಂದ 2153 ಹೆಕ್ಟೇರ್‌ ಬೆಳೆ, 197 ಮನೆಗಳಿಗೆ ಹಾನಿಯಾಗಿದೆ. ಇದಕ್ಕಾಗಿ ₹2.98 ಕೋಟಿ ಬೇಡಿಕೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ’ ಎಂದು ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಸುದ್ದಿಗಾರರಿಗೆ ತಿಳಿಸಿದರು.

ಮನೆ ಹಾನಿಯಾದವರಿಗೆ ತಲಾ ₹10 ಸಾವಿರದಂತೆ ₹9 ಲಕ್ಷ ಪರಿಹಾರ ವಿತರಿಸಲಾಗಿದೆ. ಹರಪನಹಳ್ಳಿ ತಾಲ್ಲೂಕಿನ ಸಿಂಗ್ರಿಹಳ್ಳಿಯಲ್ಲಿ 36 ಮನೆಗಳಿಗೆ ಹಾನಿಯಾಗಿದೆ. ಅವರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಅವರಿಗೆ ₹3.60 ಲಕ್ಷ ಪರಿಹಾರ ಕೊಡಲಾಗಿದೆ. ಹೊಸಪೇಟೆ ತಾಲ್ಲೂಕಿನ ಡಣಾಯಕನಕೆರೆ ಮೂರು ವರ್ಷಗಳ ನಂತರ ತುಂಬಿ ಕೋಡಿ ಬಿದ್ದಿದೆ. 120 ಎಕರೆ ಬೆಳೆ ಹಾನಿಯಾಗಿದೆ. ಗದ್ದೆಗಳಿಂದ ನೀರು ಹೋದ ನಂತರ ಕೃಷಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ಕೈಗೊಳ್ಳಲಿದ್ದು, ನಿಖರ ಮಾಹಿತಿ ಲಭ್ಯವಾಗಲಿದೆ. ಮಳೆಗೆ ಒಬ್ಬರು ಮೃತಪಟ್ಟಿದ್ದು, ಅವರ ಕುಟುಂಬದ ವಾರಸುದಾರರಿಗೆ ₹5 ಲಕ್ಷ ಪರಿಹಾರ ವಿತರಿಸಲಾಗಿದೆ. ಜಿಲ್ಲಾಧಿಕಾರಿ ಖಾತೆಯಲ್ಲಿ ₹11.48 ಕೋಟಿ ಇದೆ. ವಿಕೋಪ ಪರಿಹಾರ ವಿತರಣೆಗೆ ಯಾವುದೇ ಸಮಸ್ಯೆ ಇಲ್ಲ ಎಂದರು.

‘ಭೂ ಒತ್ತುವರಿ ನನ್ನ ಗಮನಕ್ಕೆ’
‘ನಗರದಲ್ಲಿ ನಡೆಯುತ್ತಿರುವ ಭೂ ಒತ್ತುವರಿ ನನ್ನ ಗಮನಕ್ಕೆ ಬಂದಿದೆ. ಅಧಿಕಾರಿಗಳ ಜತೆ ಚರ್ಚಿಸಿ, ಅದರ ಬಗ್ಗೆ ಏನು ಮಾಡಬೇಕು ಎನ್ನುವುದಕ್ಕೆ ತೀರ್ಮಾನಕ್ಕೆ ಬರಲಾಗುವುದು’ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವೆ ಶಶಿಕಲಾ ಪ್ರತಿಕ್ರಿಯಿಸಿದರು.
‘ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರ ಪ್ರಕರಣ ಈಗ ನ್ಯಾಯಾಂಗದ ಮೆಟ್ಟಿಲೇರಿದೆ. ಅದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ’ ಎಂದು ಪ್ರಶ್ನೆಗೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT