ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಿ ಕೋಟಿ ಖರ್ಚಾದರೂ ಸಿಗದ ನೀರು

ನಲ್ಲಿ ನೀರಿನ ಭರವಸೆ ಕಳೆದುಕೊಂಡ ಜನ; ಆರ್‌.ಒ ಪ್ಲಾಂಟ್‌ಗಳಲ್ಲಿ ಹಣ ಕೊಟ್ಟು ಖರೀದಿಸುವ ಪರಿಸ್ಥಿತಿ
Last Updated 23 ಜನವರಿ 2023, 12:27 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕೋಟಿ ಕೋಟಿ ಹಣ ಖರ್ಚಾದರೂ ನಗರದ ಜನತೆಗೆ ಶುದ್ಧ ಕುಡಿಯುವ ನೀರು ಈಗಲೂ ಮರೀಚಿಕೆಯಾಗಿದೆ.

ಸ್ವಲ್ಪವೇ ದೂರದಲ್ಲಿ ತುಂಗಭದ್ರಾ ಜಲಾಶಯವಿದ್ದರೂ ನೀರಿಗಾಗಿ ಹೆಣಗಾಡುವುದು ತಪ್ಪಿಲ್ಲ. 2015ರಲ್ಲಿ ಕೈಗೆತ್ತಿಕೊಂಡಿದ್ದ 24X7 ಕುಡಿಯುವ ನೀರಿನ ಕಾಮಗಾರಿ ಇದುವರೆಗೆ ಪೂರ್ಣಗೊಂಡಿಲ್ಲ. ಶೇ 80ರಷ್ಟು ಕಾಮಗಾರಿ ಮುಗಿಸಿ ಗುತ್ತಿಗೆದಾರರು ಬಿಟ್ಟು ಹೋಗಿದ್ದಾರೆ. ಅದರ ಪೈಪ್‌ಲೈನ್‌ ಎಲ್ಲಿ ಹಾದು ಹೋಗಿದೆ ಎನ್ನುವುದು ಗೊತ್ತಿಲ್ಲ. ಮೂಲಗಳ ಪ್ರಕಾರ, ಈಗಾಗಲೇ ₹80 ಕೋಟಿ ಖರ್ಚಾಗಿದೆ.

ಒಳಚರಂಡಿ ಪೈಪ್‌ಲೈನ್‌ ಕಾಮಗಾರಿಯೊಂದಿಗೆ 24X7 ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸಿರುವುದರಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಎಂಜಿನಿಯರ್‌ಗಳು ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ನಗರದ 25ಕ್ಕೂ ಹೆಚ್ಚು ವಾರ್ಡುಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂದು ಸ್ವತಃ ನಗರಸಭೆ ಸದಸ್ಯರೇ ಹೇಳಿದ್ದಾರೆ. ನಗರದ ರಾಣಿಪೇಟೆಯಲ್ಲಿ ಕಲುಷಿತ ನೀರು ಸೇವನೆಗೆ ಲಕ್ಷ್ಮಿದೇವಿ ಎಂಬುವವರು ಮೃತಪಟ್ಟಿದ್ದಾರೆ. ವಾಂತಿ, ಭೇದಿ ಪ್ರಕರಣಗಳು ನಿರಂತರವಾಗಿ ಬರುತ್ತಿವೆ. ಇದು ಇತರೆ ವಾರ್ಡ್‌ಗಳಿಗೂ ವಿಸ್ತರಿಸಿದೆ.

‘ಲಕ್ಷ್ಮಿದೇವಿ ಮರಣೋತ್ತರ ಪರೀಕ್ಷೆ ನಡೆಸಿಲ್ಲ. ವೈದ್ಯಕೀಯ ಪರೀಕ್ಷೆ ಆಗಿಲ್ಲ. ಕಲುಷಿತ ನೀರಿನಿಂದಾಗಿಯೇ ಅವರು ಮೃತಪಟ್ಟಿದ್ದಾರೆ ಎಂದು ದೃಢಪಟ್ಟಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಕಲುಷಿತ ನೀರಿನಿಂದ ಅವರು ಅಸ್ವಸ್ಥರಾಗಿದ್ದರು ಎನ್ನುವುದು ನಿಜ ಎಂದು ಗೊಂದಲಕಾರಿ ಹೇಳಿಕೆ ಕೊಟ್ಟಿದ್ದಾರೆ. ಏನೇ ಇರಲಿ ಕನಿಷ್ಠ ಮೂಲ ಸೌಕರ್ಯಗಳಲ್ಲಿ ಒಂದಾಗಿರುವ ಕುಡಿಯುವ ನೀರಿಗಾಗಿ ಮಹಿಳೆ ಜೀವ ತೆತ್ತಿದ್ದಾಳೆ. ಜ. 19ರಂದು ಸುವರ್ಣ (65) ಎಂಬುವರು ಮೃತಪಟ್ಟಿದ್ದಾರೆ.

ಆರೋಗ್ಯ ಇಲಾಖೆಯ ಪ್ರಕಾರ, ಅವರು ವಯೋಸಹಜ ಕಾಯಿಲೆಯಿಂದ ಸತ್ತಿದ್ದಾರೆ. ಆದರೆ, ಸ್ಥಳೀಯರ ಪ್ರಕಾರ, ಹಾಸಿಗೆ ಹಿಡಿದಿದ್ದ ಅವರು ಕಲುಷಿತ ನೀರು ಸೇವಿಸಿ ಮತ್ತಷ್ಟು ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗೆ ನೀರಿಗಾಗಿ ನಿತ್ಯ ಒಂದಿಲ್ಲೊಂದು ವಾರ್ಡ್‌ ಜನ ಅಸ್ವಸ್ಥರಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ವಾಂತಿ, ಭೇದಿ ಪ್ರಕರಣಗಳು ನಿಲ್ಲುವುದಿಲ್ಲವೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಇಷ್ಟೇ ಅಲ್ಲ, ಜನ ನಲ್ಲಿ ನೀರು ಬಳಸುವುದು ಬಿಟ್ಟಿದ್ದಾರೆ. ಆರ್‌.ಒ. ಘಟಕಗಳಲ್ಲಿ ಹಣ ಕೊಟ್ಟು ನೀರು ಕೊಂಡೊಯ್ಯುತ್ತಿದ್ದಾರೆ.

ಮತ್ತೆ ₹50 ಕೋಟಿ: 24X7 ಕಾಮಗಾರಿಗೆ ಈಗಾಗಲೇ ₹80 ಕೋಟಿಗೂ ಅಧಿಕ ಹಣ ಖರ್ಚಾಗಿದೆ. ಈಗ ಅದರಲ್ಲಿ ಆಗಿರುವ ಲೋಪ ಸರಿಪಡಿಸಲು ಮತ್ತೆ ₹50 ಕೋಟಿ ಖರ್ಚಿಗೆ ಸಿದ್ಧತೆ ನಡೆದಿದೆ. ಗುಜರಾತ್‌ನಿಂದ ತಂತ್ರಜ್ಞರ ತಂಡ ಕರೆಸಲು ಯೋಜಿಸಲಾಗಿದೆ. ಮಿಕ್ಕುಳಿದ ಶೇ 20ರಷ್ಟು ಕಾಮಗಾರಿ ಸ್ವತಃ ನಗರಸಭೆಯೇ ಪೂರ್ಣಗೊಳಿಸಲು ಮುಂದಾಗಿದೆ. ಸರ್ಕಾರ ಈಗಾಗಲೇ ಈ ಕಾಮಗಾರಿಯ ಮೇಲುಸ್ತುವಾರಿಗೆ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಂಜಿನಿಯರ್‌ ಮಲ್ಲಿಕಾರ್ಜುನ ಅವರನ್ನು ನೇಮಿಸಿದೆ.

ಅವೈಜ್ಞಾನಿಕ ಕಾಮಗಾರಿಗೆ ಜೀವವೊಂದು ಹೋಗಿದೆ. ಕೋಟ್ಯಂತರ ರೂಪಾಯಿ ನೆಲದಡಿ ಹಾಳಾಗಿದೆ. ಇಂತಹ ಗಂಭೀರ ಪ್ರಕರಣದಲ್ಲಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕಿತ್ತು. ಆದರೆ, ನೋಟಿಸ್‌ಗಷ್ಟೇ ಸೀಮಿತವಾಗಿದೆ. ಇಷ್ಟೇ ಅಲ್ಲ, ಯಾವುದೇ ಉತ್ತರದಾಯಿತ್ವ ಇಲ್ಲದೆ ಸಾರ್ವಜನಿಕರ ತೆರಿಗೆ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಜಿಲ್ಲಾಡಳಿತದ ಬಳಿ ಉತ್ತರ ಇದೆಯೇ?

ವಾರಕ್ಕೊಮ್ಮೆ ಸಿಹಿ‌ ನೀರು:

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಬನ್ನಿಗೋಳ ಬಳಿ‌ ನಿರ್ಮಿಸಿರುವ ಜಾಕ್ ವೆಲ್ ಮೂಲಕ ತುಂಗಭದ್ರಾ ಹಿನ್ನೀರಿನಿಂದ ಸರಬರಾಜು ಆಗುವ ಕುಡಿಯುವ ನೀರು ವಾರಕ್ಕೊಮ್ಮೆ ಪೂರೈಕೆಯಾಗುತ್ತಿದೆ.

ಮಳೆಗಾಲದಲ್ಲಿಯೂ ವಾರಕ್ಕೊಮ್ಮೆ ನೀರು ಸರಬರಾಜು ಮಾಡಲಾಗಿದೆ, ಬೇಸಿಗೆಯಲ್ಲಿ ತಿಂಗಳಿಗೊಮ್ಮೆ ನಿರೀಕ್ಷಿಸುವುದು ಕಷ್ಟ. ಪಟ್ಟಣದ ಬಹುತೇಕರು ಶುದ್ಧ ನೀರಿನ ಘಟಕಗಳಿಂದ ಹಣ ಪಾವತಿಸಿ ನೀರು ತರುವುದು ಇಲ್ಲಿ ಸಾಮಾನ್ಯ ಎನ್ನುವಂತಾಗಿದೆ.

‘ಹಗರಿಬೊಮ್ಮನಹಳ್ಳಿಯ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಅದು ಕೆಲವು ನಿಮಿಷಗಳು ಮಾತ್ರ. ಪುರಸಭೆಯಿಂದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು. ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಸ್ಥಳೀಯ ನಿವಾಸಿ ಕೆ.ವಿರೂಪಾಕ್ಷ ಆಗ್ರಹಿಸಿದರು.

ಶುದ್ಧ ನೀರಿಗೆ ಬರ:

ಕೂಡ್ಲಿಗಿ: ಪಟ್ಟಣದಲ್ಲಿ ಈಗಲೂ ಶುದ್ಧ ನೀರಿಗೆ ಬರ ಇದೆ. ಪಟ್ಟಣದ 16 ವಾರ್ಡುಗಳಿಗೆ ನೀರು ಸರಬರಾಜಾಗುತ್ತಿದೆ. ಉಳಿದ 17ರಿಂದ 20ನೇ ವಾರ್ಡುಗಳಿಗೆ ಕೊಳವೆಬಾವಿ ನೀರು ಪೂರೈಸಲಾಗುತ್ತಿದೆ. ಕೆ.ಕೆ ಹಟ್ಟಿ, ಎ.ಡಿ ಗುಡ್ಡ, ಎಡಿಗುಡ್ಡ ತಾಂಡಾ ಹಾಗೂ ಗೊಲ್ಲರಹಟ್ಟಿ, ಗೋವಿಂದಗಿರಿ ತಾಂಡಾ, ಗೊಲ್ಲರಹಟ್ಟಿ ವ್ಯಾಪ್ತಿಯಲ್ಲಿ ಕೊಳವೆ ಬಾವಿ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ. ಈ ವಾರ್ಡುಗಳಲ್ಲಿ ಶುದ್ಧ ನೀರಿನ ಘಟಕಗಳು ಕೆಲಸ ಮಾಡುತ್ತಿಲ್ಲ. ಇದರಿಂದ ಇಲ್ಲಿನ ಜನ ಪ್ಲೋರೈಡ್ ನೀರನ್ನೇ ಕುಡಿಯಬೇಕಿದೆ.

ನೀರು ನಿರ್ವಹಣೆ ಉತ್ತಮ:

ಹೂವಿನಹಡಗಲಿ: ತುಂಗಭದ್ರಾ ನದಿಯಿಂದ 2ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಬಳಿಕ ಪಟ್ಟಣದಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಸುಧಾರಣೆ ಕಂಡಿದೆ.

ಹೊನ್ನೂರು ಬಳಿ ಹಾಗೂ ನವಲಿ ಕ್ರಾಸ್ ಹತ್ತಿರದ ಶುದ್ಧೀಕರಣ ಘಟಕಗಳಲ್ಲಿ ನದಿ ನೀರನ್ನು ಶುದ್ಧೀಕರಿಸಿ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ. ಪುರಸಭೆಯವರು ಎಲ್ಲ 23 ವಾರ್ಡ್ ಗಳಿಗೆ ಮೂರು ದಿನಕ್ಕೊಮ್ಮೆ ಸಮರ್ಪಕ ರೀತಿಯಲ್ಲಿ ನೀರು ಪೂರೈಕೆ ಮಾಡುತ್ತಿದ್ದಾರೆ. ಅಚ್ಚುಕಟ್ಟಾದ ನೀರು ನಿರ್ವಹಣೆಯಿಂದ ಬೇಸಿಗೆಯಲ್ಲೂ ಅಂತಹ ತೊಂದರೆ ಕಾಣಿಸುವುದಿಲ್ಲ. ಹೀಗಾಗಿ ಪಟ್ಟಣದ ಜನರು ನೀರು ಸರಬರಾಜು ವ್ಯವಸ್ಥೆಯನ್ನು ಪ್ರಶಂಸಿಸುತ್ತಾರೆ.

ಪಟ್ಟಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಬಗ್ಗೆ ಆಗಾಗ ದೂರುಗಳು ಬರುತ್ತಿವೆ. ಎಪಿಎಂಸಿ, ಶ್ರೀರಾಮ ದೇವಸ್ಥಾನ ಬಳಿಯ ನೀರಿನ ಘಟಕ ಅನೇಕ ದಿನಗಳಿಂದ ದುರಸ್ತಿಯಾಗಿಲ್ಲ. ಈ ಪ್ರದೇಶದ ಜನರು ನೀರಿಗಾಗಿ ಬೇರೆಡೆ ಅಲೆಯಬೇಕಿದೆ.

ಪ್ರಜಾವಾಣಿ ತಂಡ: ಶಶಿಕಾಂತ ಎಸ್‌. ಶೆಂಬೆಳ್ಳಿ, ಸಿ. ಶಿವಾನಂದ, ಸೋಮಶೇಖರ್‌ ಆರಾಧ್ಯ, ಕೆ. ಸೋಮಶೇಖರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT