ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವು ವಿಸ್ತರಿಸುವುದೇ ನಿಜವಾದ ಧರ್ಮ: ಪ್ರಾಧ್ಯಾಪಕ ಶಿವಾನಂದ

Last Updated 23 ಡಿಸೆಂಬರ್ 2021, 12:39 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಯಾವುದು ಮನುಷ್ಯನ ಅರಿವು ವಿಸ್ತರಿಸುತ್ತದೆಯೋ ಅದೇ ನಿಜವಾದ ಧರ್ಮ’ ಎಂದು ವಿಜಯನಗರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಸ್.ಶಿವಾನಂದ ತಿಳಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಾಲುಮತ ಅಧ್ಯಯನ ಪೀಠದಿಂದ ಏರ್ಪಡಿಸಿದ್ದ ಕನಕದಾಸ ಜಯಂತಿಯಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು.

‘ಕನಕದಾಸರು ವೈದಿಕ ಪರಂಪರೆಯ ಹೊರಗಿನಿಂದ ಒಳಹೋದವರು. ವೈದಿಕ ಪರಂಪರೆಯ ಒಳಗಿದ್ದುಕೊಂಡು ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದರು. ಅಂತರಂಗದ ಧ್ವನಿಗಿಂತ ಬೇರೆ ಧ್ವನಿ ಉಂಟೆ, ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ಕೀರ್ತನೆಗಳಿಂದ ಕನಕದಾಸರು ಜನರನ್ನು ಸಮಾಜಮುಖಿ ಚಿಂತನೆಗೆ ಹಚ್ಚಿದರು’ ಎಂದರು.

‘ಪರಧರ್ಮ, ಪರರ ವಿಚಾರಗಳನ್ನು ಸಹಿಸಿಕೊಳ್ಳುವುದು ಮುಖ್ಯ. ಇಂದು ಪ್ರತಿಯೊಂದು ವಿಚಾರಕ್ಕೂ ವಿದ್ಯಾವಂತರಿಂದಲೇ ಸಮಾಜದಲ್ಲಿ ಅಸಹನೆ ತಾಂಡವವಾಡುತ್ತಿದೆ. ಬದುಕನ್ನು ಪ್ರೀತಿಸುವುದನ್ನು ಕಲಿಯಬೇಕು. ಸ್ವಂತ ಚಿಂತನೆ, ಆಲೋಚನೆ ಮಾಡುವುದನ್ನು ಯುವಜನತೆ ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.

‘ಯಾವುದೇ ಸಮಾಜ ಪರಿವರ್ತನೆಯಾಗಬೇಕಾದರೆ ವ್ಯಕ್ತಿ ಬದಲಾಗಬೇಕು. ವ್ಯಕ್ತಿ ಬದಲಾಗಲು ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ತುಂಬಾ ಮುಖ್ಯವಾಗಿದೆ. ಕನಕದಾಸರ ಕೀರ್ತನೆಗಳು ವ್ಯಕ್ತಿ ಮತ್ತು ಸಮಾಜದ ಸಮಗ್ರ ವಿಕಾಸದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ’ ಎಂದು ಅಭಿಪ್ರಾಯಪಟ್ಟರು.

ಕುಲಪತಿ ಪ್ರೊ. ಸ.ಚಿ.ರಮೇಶ, ‘ಕನಕದಾಸರು ದೀನ ದಲಿತರು, ಮಹಿಳೆಯರು, ಬಡವರು ಹೀಗೆ ಮೇಲು-ಕೀಳೆಂಬ ಬೇಧವಿಲ್ಲದೆ ಎಲ್ಲರನ್ನು ಗೌರವಿಸಿದರು. ಸಮ-ಸಮಾಜ ನಿರ್ಮಾಣದ ಹಾದಿಯನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು’ ಎಂದು ಹೇಳಿದರು. ಕುಲಸಚಿವ ಪ್ರೊ.ಎ.ಸುಬ್ಬಣ್ಣ ರೈ, ಪೀಠದ ಸಂಚಾಲಕ ಎಫ್.ಟಿ. ಹಳ್ಳಿಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT