ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೂವಿನಹಡಗಲಿ | ಸಿಂಗಟಾಲೂರು ಏತ ನೀರಾವರಿ ಯೋಜನೆ: ರೈತರಿಗೆ ಮರೀಚಿಕೆಯಾದ ಭೂ ಪರಿಹಾರ

Published : 11 ಆಗಸ್ಟ್ 2023, 5:49 IST
Last Updated : 11 ಆಗಸ್ಟ್ 2023, 5:49 IST
ಫಾಲೋ ಮಾಡಿ
Comments

ಕೆ. ಸೋಮಶೇಖರ್

ಹೂವಿನಹಡಗಲಿ: ಈ ಭಾಗದ ರೈತರ ಜೀವನಾಡಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಉದ್ಘಾಟನೆಯಾಗಿ ದಶಕ ಕಳೆದಿದೆ. ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಇನ್ನೂ ಭೂ ಪರಿಹಾರ ದೊರೆಯದೇ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆಗೂ ಮುನ್ನವೇ ಅಧಿಕಾರಿಗಳು ರೈತರ ಮನವೊಲಿಸಿ ಜಮೀನುಗಳಲ್ಲಿ ಕಾಲುವೆ ನಿರ್ಮಿಸಿದ್ದಾರೆ. ಇದೀಗ ಉಳುಮೆಗೆ ಜಮೀನು ಇರದೇ, ಭೂ ಪರಿಹಾರವೂ ದೊರೆಯದೇ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ರೈತರು ದಶಕದಿಂದ ಕಚೇರಿಗಳಿಗೆ ಅಲೆದರೂ ಇನ್ನೂ ಪರಿಹಾರ ಸಿಕ್ಕಿಲ್ಲ.

ಸಿಂಗಟಾಲೂರು ಯೋಜನೆಗಾಗಿ ಎಡ-ಬಲ ದಂಡೆಯಲ್ಲಿ ಒಟ್ಟು 7,234.09 ಎಕರೆ ಜಮೀನು ಭೂ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈಗಾಗಲೇ 5,977 ಎಕರೆಗೆ ಪರಿಹಾರ ನೀಡಿದ್ದು, 1,257 ಎಕರೆಗೆ ಪರಿಹಾರ ನೀಡಬೇಕಿದೆ.

ಹೂವಿನಹಡಗಲಿ ತಾಲ್ಲೂಕಿನ ಹುಗಲೂರು, ಮಾನ್ಯರಮಸಲವಾಡ, ಮಾಗಳ, ಮಾನಿಹಳ್ಳಿ, ಹಿರೇಹಡಗಲಿ, ಹಿರೇಕೊಳಚಿ, ಕೊಯಿಲಾರಗಟ್ಟಿ, ಹಿರೇಮಲ್ಲನಕೆರೆ, ದಾಸನಹಳ್ಳಿ, ಕೊಟ್ನಿಕಲ್, ಹೊಳಗುಂದಿ, ಮುದೇನೂರು, ನಾಗತಿಬಸಾಪುರ, 63-ತಿಮ್ಮಲಾಪುರ, ಕೆ.ಅಯ್ಯಹಳ್ಳಿ, ಶಿವಲಿಂಗನಹಳ್ಳಿ, ಮಾಗಳ ಗ್ರಾಮಗಳ 927 ಎಕರೆ ಭೂ ಪರಿಹಾರ ಬಾಕಿ ಇದೆ. ಗದಗ ಜಿಲ್ಲೆಯ 410 ಎಕರೆ, ಕೊಪ್ಪಳ ಜಿಲ್ಲೆಯ 19.12 ಎಕರೆಗೂ ಪರಿಹಾರ ಸಿಕ್ಕಿಲ್ಲ.

ಈ ಭಾಗದ ಬರಡು ಭೂಮಿಗೆ ನೀರುಣಿಸುವ ಸಿಂಗಟಾಲೂರು ಯೋಜನೆ ಅನುಷ್ಠಾನ ತಾಲ್ಲೂಕಿನ ರೈತರಿಗೆ ಖುಷಿ ತಂದಿದೆ. ಆದರೆ, ಭೂ ಪರಿಹಾರ ಮರೀಚಿಕೆ ಆಗಿರುವುದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಶಪಿಸುತ್ತಿದ್ದಾರೆ. ಕಾಲುವೆ ನಿರ್ಮಾಣಕ್ಕೆ ತೋರಿದ ಆಸಕ್ತಿಯನ್ನು ರೈತರಿಗೆ ಪರಿಹಾರ ಕೊಡಿಸಲು ತೋರಿಸಲಿಲ್ಲ ಎಂದು ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸ್ವಾಧೀನಪಡಿಸಿಕೊಂಡ ಜಮೀನುಗಳ ಪಹಣಿ, ಕಂದಾಯ ದಾಖಲೆಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ನಮೂದು ಆಗಿರುವುದರಿಂದ ಅಳಿದುಳಿದ ಜಮೀನುಗಳ ಮಾರಾಟ, ಅಡಮಾನ, ಪಾಲು ವಿಭಾಗ, ಸಾಲ ಸೌಲಭ್ಯ ಪಡೆಯಲು ತಾಂತ್ರಿಕ ಅಡಚಣೆ ಉಂಟಾಗಿದೆ. ಇದರಿಂದ ರೈತರು ನಾನಾ ತೊಂದರೆ ಅನುಭವಿಸುತ್ತಿದ್ದಾರೆ.

ಸಂತ್ರಸ್ತ ರೈತರು ಭೂ ಪರಿಹಾರಕ್ಕೆ ಆಗ್ರಹಿಸಿ ಹಲವು ಬಾರಿ ಹೋರಾಟ ನಡೆಸಿದ್ದಾರೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಬರೀ ಸಬೂಬು ಹೇಳಿದ್ದಾರೆ ಹೊರತು ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂಬುದು ರೈತರ ಆರೋಪ. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಭೂ ಪರಿಹಾರ ಕೊಡಿಸಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.

ಸಿಬ್ಬಂದಿ ಕೊರತೆ ನಡುವೆಯೂ ಭೂ ಪರಿಹಾರದ ಕಡತಗಳನ್ನು ಹೊಸದಾಗಿ ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸಿದ್ದೇವೆ. ಕೆಲವು ಅನುಮೋದನೆ ಹಂತದಲ್ಲಿವೆ. ರೈತರಿಗೆ ಪರಿಹಾರ ಕೊಡಿಸುವ ಪ್ರಯತ್ನದಲ್ಲಿದ್ದೇವೆ
ಟಿ.ವಿ.ಪ್ರಕಾಶ್ ವಿಶೇಷ ಭೂಸ್ವಾಧೀನಾಧಿಕಾರಿ ಹೂವಿನಹಡಗಲಿ
ಕಾಯಂ ಭೂಸ್ವಾಧೀನ ಅಧಿಕಾರಿ ಇಲ್ಲ
2005ರಲ್ಲಿ ಪ್ರಾರಂಭವಾದ ಭೂ ಸ್ವಾಧೀನಾಧಿಕಾರಿ ಕಚೇರಿಗೆ ಸರ್ಕಾರ ಕಾಯಂ ಅಧಿಕಾರಿ ನೇಮಿಸದೇ ತಹಶೀಲ್ದಾರರು ಉಪ ವಿಭಾಗಾಧಿಕಾರಿಗಳಿಗೆ ಕಾರ್ಯಭಾರ ವಹಿಸಿದೆ. 18 ವರ್ಷಗಳಲ್ಲಿ 23 ಅಧಿಕಾರಿಗಳು ಬದಲಾವಣೆಯಾಗಿದ್ದಾರೆ. ಇದರಲ್ಲಿ 18 ಅಧಿಕಾರಿಗಳು ಪ್ರಭಾರ 5 ಜನ ಮಾತ್ರ ಕಾಯಂ ಅಧಿಕಾರಿಗಳು ಸೇವೆ ಸಲ್ಲಿಸಿದ್ದಾರೆ. ಕಚೇರಿಯಲ್ಲಿ ಶಿರಸ್ತೇದಾರ ಗುಮಾಸ್ತರು ಮೋಜಣಿದಾರರ ಹುದ್ದೆಗಳೆಲ್ಲ ಖಾಲಿ ಇವೆ. ಭೂಸ್ವಾಧೀನ ಕಡತಗಳು ನಿಯಮಾನುಸಾರ ಒಂದು ವರ್ಷದ ಅವಧಿಯೊಳಗೆ ಅನುಮೋದನೆಗೊಳ್ಳಬೇಕು. ವಿಳಂಬವಾದಲ್ಲಿ ಅವು ಅಸಿಂಧುಗೊಳ್ಳುತ್ತವೆ. ಕಾಯಂ ಅಧಿಕಾರಿ ಸಿಬ್ಬಂದಿ ಕೊರತೆಯಿಂದ ರೈತರು ತೊಂದರೆ ಅನುಭವಿಸುವಂತಾಗಿದ್ದು ಸರ್ಕಾರ ಕೂಡಲೇ ಕಾಯಂ ಅಧಿಕಾರಿ ನೇಮಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT