ತಾಳಿಕೋಟೆ: ಪಟ್ಟಣದ ಹುಣಸಗಿ ರಸ್ತೆಯಲ್ಲಿ ಹಾಗೂ ಗಡಿಸೋಮನಾಳ ರಸ್ತೆಯಲ್ಲಿ ಹುಡ್ಕೊ ವತಿಯಿಂದ ನಿರ್ಮಿಸಿರುವ ವಸತಿ ಸಮುಚ್ಚಯಗಳು ಕಳಪೆಯಾಗಿವೆ ಎಂದು ಕವೀ (ಓಅ್ಖಉಉ) ಫೌಂಡೇಶನ್‌ನ ವೀರೇಶ ಕೋರಿ ಆರೋಪಿಸಿದ್ದಾರೆ.
ಹುಣಸಗಿ ರಸ್ತೆಯಲ್ಲಿ ನಿರ್ಮಿಸಲಾದ ಎಲ್ಲ ಎಲ್‌ಐಜಿ.ಮನೆಗಳ ಮುಂದೆ ಹಾಗೂ ಎಚ್‌ಐಜಿ-2 ಮನೆ.ಸಂ.304 ರಲ್ಲಿ ನಿರ್ಮಿಸಿದ ಮನೆಯ ಮುಂದಿನ ಕಂಬಗಳು ಕಟ್ಟಡದಿಂದ ಬೇರ್ಪಟ್ಟು ಬೀಳುವ ಸ್ಥಿತಿ ತಲುಪಿರುವುದೇ ಇದಕ್ಕೆ ಸಾಕ್ಷಿ ಎಂದಿರುವ ಅವರು, ಮನೆಗಳು ಹಣ ಕಟ್ಟಿದ ಮಾಲೀಕರಿಗೆ ಹಸ್ತಾಂತರ ವಾಗುವ ಪೂರ್ವದಲ್ಲಿಯೇ ಇಂತಹ ಸ್ಥಿತಿಯಲ್ಲಿದ್ದು ವಾಸಕ್ಕೆ ಬಂದರೆ ಎಷ್ಟು ದಿನ ಬಾಳಿಕೆ ಬರುತ್ತವೆ ತಿಳಿಯುತ್ತಿಲ್ಲ.
ಗಡಿಸೋಮನಾಳ ರಸ್ತೆಯಲ್ಲಿನ ಮನೆಗಳೂ ಸಹ ಅಲ್ಲಲ್ಲಿ ಬಿರುಕು ಬಿಟ್ಟಿವೆ. ಕಟ್ಟಡ ನಿರ್ಮಾಣ ಹಂತದಲ್ಲಿ ಸರಿಯಾದ ಕ್ಯೂರಿಂಗ್ ಆಗಿಲ್ಲ, ಡಾಂಬರು ರಸ್ತೆಗಳು ಆಗಲೇ ಬಿರುಕು ಬಿಟ್ಟಿವೆ ಎಂದು ಅವರು ಹೇಳಿದ್ದಾರೆ.
ಸ್ವಂತ ಮನೆ ಹೊಂದುವ ಕನಸಿನಲ್ಲಿ ಹುಡ್ಕೋ ನಿವೇಶನ, ಮನೆ ನಿರ್ಮಾಣಕ್ಕೆ ಜಾಗ ಪಡೆದವರು, ನಾಲ್ಕು ತಿಂಗಳಲ್ಲಿ ನಾಲ್ಕು ಕಂತುಗಳನ್ನು ಕಟ್ಟದಿದ್ದರೆ ದಂಡ ಕಟ್ಟಬೇಕಾಗುತ್ತದೆ ಸಾಲ ಮಾಡಿ ಹೆಚ್ಚಿನ ಬಡ್ಡಿಗೆ ಹಣ ತಂದು ಕಂತು ಕಟ್ಟಿದ್ದಾರೆ. ಜನ ಹಣ ಕಟ್ಟಿ ಆಗಲೇ ಇಪ್ಪತ್ತು ತಿಂಗಳಾಯಿತು. ಆದರೂ ಹಣ ನೀಡಿದವರಿಗೆ ಶೀಘ್ರ ಮನೆ, ನಿವೇಶನ ಯಾಕೆ ಒಪ್ಪಿಸುತ್ತಿಲ್ಲವೆಂಬುದು ಹಣ ಕಟ್ಟಿದವರ ಪ್ರಶ್ನೆ.
ನಾವು ಕಂತಿನ ಹಣ ಕಟ್ಟುವುದು ತಡವಾದರೆ ದಂಡದ ಹಣಕಟ್ಟಿಸಿ ಕೊಳ್ಳುತ್ತಾರೆ. ನಾವು ನಿವೇಶನಗಳಿಗೆ ಸರಾಸರಿ ನಾಲ್ಕು ಲಕ್ಷ ಮನೆಗಳಿಗೆ ಸರಾಸರಿ 10 ಲಕ್ಷ ಹಣ ಕಟ್ಟಿದ್ದೇವೆ. ಇಪ್ಪತ್ತು ತಿಂಗಳಾಯಿತು. ನಮ್ಮ ಹಣಕ್ಕೆ ಹುಡ್ಕೊ ದಂಡ ಕಟ್ಟುತ್ತದೆಯೇ ಎಂದು ನಿವೃತ್ತ ಪಿಎಸ್‌ಐ ಮಾಮನಿ ಪ್ರಶ್ನಿಸುತ್ತಾರೆ.
ಮನೆಗಳ ಮುಂದೆ ನಿರ್ಮಿಸಿದ ಕಂಬಗಳು ಕಳಚಿ ಬೀಳುತ್ತಿರುವ ಬಗ್ಗೆ ಹಾಗೂ ಪುರಸಭೆಗೆ ಹಸ್ತಾಂತರಿಸುವ ಬಗ್ಗೆ ವಿಜಾಪುರದ ಹುಡ್ಕೊದ ಕಾರ್ಯ ನಿರ್ವಾಹಕ ಎಂಜಿನಿಯರ್ ಶಿವಶಂಕರ ಅವರನ್ನು ಮಾಹಿತಿಗಾಗಿ ಸಂಪರ್ಕಿಸಲಾ ಯಿತು. ಕಟ್ಟಡ ಕಾಮಗಾರಿ ಅಂತಿಮಗೊಂಡ ಮೇಲೆ ಮನೆಯ ಮುಂದೆ ಇಟ್ಟಿಗೆಯಿಂದ (ಎಡಿಶನ್ ಬ್ರಿಕ್‌ವರ್ಕ್) ಕಂಬವನ್ನು ನಿರ್ಮಿಸಲಾಗಿದೆ.
ಇಲ್ಲಿ ಕಾಲಂ ಬಳಕೆಯಾಗಿಲ್ಲ. ಕಟ್ಟಡ ಸೌಂದರ್ಯಕ್ಕೆಂದು ಆರ್ಟಿಟೆಕ್ಟ್ ಸಲಹೆಯಂತೆ ನಿರ್ಮಿಸಿತ್ತು. ಅದನ್ನು ದುರಸ್ತಿ ಮಾಡಿ ಇಲ್ಲ ತೆಗೆದು ಹಾಕಿ ಎಂದು ತಿಳಿಸಿದ್ದೇನೆ. ಆದರೆ ಹುಡ್ಕೊ ಮನೆಗಳು ಕಳಪೆ ಕಾಮಗಾರಿಯಾಗಿಲ್ಲ ಎಂದು `ಪ್ರಜಾವಾಣಿ'ಗೆ ತಿಳಿಸಿದರು.
ಹುಣಸಗಿ ರಸ್ತೆಯಲ್ಲಿ 34 ಹಾಗೂ ಗಡಿಸೋಮನಾಳ ರಸ್ತೆಯಲ್ಲಿ 55 ಮನೆಗಳ ನಿರ್ಮಾಣ ಕಾರ್ಯ ಅಂತಿಮಗೊಂಡಿದೆ. ವಿದ್ಯುಚ್ಛಕ್ತಿ ಸಂಪರ್ಕ ಹಾಗೂ ಕುಡಿಯುವ ನೀರಿನ ವ್ಯವಸ್ತೆ ಮಾತ್ರ ಉಳಿದಿದೆ.
ವಿದ್ಯುತ್ ಸಂಪರ್ಕಕ್ಕೆ ಹೆಸ್ಕಾಂಗೆ ಪತ್ರ ಬರೆಯಲಾಗಿದೆ. ಕುಡಿಯುವ ನೀರಿಗಾಗಿ ವಿಜಾಪುರದ ನೀರು ಮಂಡಳಿಗೆ ಪತ್ರ ಬರೆದಿದ್ದೇವೆ. ಅವರು ಅವರು 1300 ಮನೆಗಳ ಲೆಕ್ಕದಲ್ಲಿ ರೂ.2.25 ಕೋಟಿ ಹಣ ಪಾವತಿಸುವಂತೆ ತಿಳಿಸಿದ್ದಾರೆ.
ಕಟ್ಟಿದ್ದು 89 ಮನೆಗಳು ಎರಡು ವರ್ಷಕ್ಕೆ ಅಂದಾಜು ಎರಡು ನೂರು ಮನೆಗಳು ಆಗಬಹುದು. ಆದ್ದರಿಂದ 1300 ಮನೆಗಳನ್ನು ಲೆಕ್ಕಕ್ಕೆ ಹಿಡಿಯದೇ ವಾಸ್ತವ ಲೆಕ್ಕ ಹಾಕಿ ಪಾವತಿ ನೀಡಿ ಎಂದು ವಿನಂತಿಸಿದ್ದೇವೆ. ವಿದ್ಯುಚ್ಚಕ್ತಿ ಮತ್ತು ನೀರು ಪೂರೈಕೆ ಕಾರ್ಯ ಮುಗಿದ ತಕ್ಷಣ ಪುರಸಭೆಗೆ ಹಸ್ತಾಂತರಿಸುತ್ತೇವೆ. ಇದಕ್ಕೆ ಕನಿಷ್ಠ ಆರು ತಿಂಗಳಾಗಬಹುದು ಎನ್ನುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.