ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿಗೆ ₹ 13 ಸಾವಿರ ಕೋಟಿ ಖರ್ಚು

ಗಂಗಾಪೂಜೆ, ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡ ಉದ್ಘಾಟನೆ
Last Updated 15 ಜನವರಿ 2018, 13:13 IST
ಅಕ್ಷರ ಗಾತ್ರ

ವಿಜಯಪುರ: ‘ರಾಜ್ಯದ ನೀರಾವರಿ ಇತಿಹಾಸದಲ್ಲಿ ಯಾವುದೇ ಜಿಲ್ಲೆಗೆ ₹ 13,500 ಕೋಟಿ ಹಣ ಖರ್ಚು ಮಾಡಿ ನೀರಾವರಿ ಕೆಲಸ ಮಾಡಿಸಿಲ್ಲ. ಆದರೆ, ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ನಮ್ಮ ಜಿಲ್ಲೆಗೆ ಅಷ್ಟೊಂದು ಅನುದಾನ ನೀಡಿ ಹತ್ತು ಯೋಜನೆಗಳನ್ನು ಪೂರ್ಣಗೊಳಿಸುತ್ತಿದೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು.

ತಾಲ್ಲೂಕಿನ ಕಾರಜೋಳದಲ್ಲಿ ಭಾನುವಾರ ನಡೆದ ಗಂಗಾಪೂಜೆ ಹಾಗೂ ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ‘ಬಬಲೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ₹ 5 ಸಾವಿರ ಕೋಟಿ ಅನುದಾನ ನೀಡಿದ್ದು, ಮುಳವಾಡ, ತುಬಚಿ-ಬಬಲೇಶ್ವರ ಯೋಜನೆಗಳು ಮುಕ್ತಾಯ ಹಂತದಲ್ಲಿವೆ’ ಎಂದರು.

ಬಚಾವತ್ ಐತೀರ್ಪಿನಲ್ಲಿ ಹೆಚ್ಚಿನ ನೀರನ್ನು ಮತ್ತು ಯೋಜನೆಗಳನ್ನು ಕಲಬುರಗಿ, ಕೊಪ್ಪಳ, ರಾಯಚೂರ ಜಿಲ್ಲೆಗಳಿಗೆ ಉಪಯೋಗಿಸಿದ್ದರು. ವಿಜಯಪುರ ಜಿಲ್ಲೆಯ 75 ಸಾವಿರ ಎಕರೆ ಮಾತ್ರ ನೀರಾವರಿಗೆ ಒಳಪಡಿಸಿದ್ದರೂ. ಬ್ರಜೇಶಕುಮಾರ ತೀರ್ಪಿನಲ್ಲಿ ಜಿಲ್ಲೆಗೆ 84 ಟಿ.ಎಂ.ಸಿ ಅಡಿ ನೀರು ದೊರೆತಿದೆ. ನಾನು ನೀರಾವರಿ ಸಚಿವನಾದ ತಕ್ಷಣ ಜಿಲ್ಲೆಯ ಎಲ್ಲ ಯೋಜನೆಗಳಿಗೆ ಚಾಲನೆ ನೀಡಿ 84 ಟಿ.ಎಂ.ಸಿ ಅಡಿ ನೀರು, ಜೊತೆಗೆ ಹೆಚ್ಚುವರಿ 16 ಟಿ.ಎಂ.ಸಿ ಅಡಿ ನೀರು ಹಂಚಿಕೆ ಮಾಡಿ 14.50 ಲಕ್ಷ ಎಕರೆ ಪ್ರದೇಶ ನೀರಾವರಿಗೆ ಒಳಪಡಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಹಿಂದೆ ಅಧಿಕಾರದಲ್ಲಿದ್ದವರು ತಮ್ಮ ತಮ್ಮ ಭಾಗಕ್ಕೆ ನೀರಾವರಿಗೆ ನೀರನ್ನು ತೆಗೆದುಕೊಂಡು ಹೋಗಿದ್ದಾರೆ. ಸ್ವಾಭಾವಿಕವಾಗಿ ನನ್ನ ಜಿಲ್ಲೆಯ ಮೇಲಿನ ಪ್ರೀತಿಯಿಂದ 14 ಟಿ.ಎಂ.ಸಿ ಅಡಿ ಹೆಚ್ಚುವರಿ ನೀಡಿದ್ದೇನೆ. ಕೇವಲ ಆಲಮಟ್ಟಿ ಆಣೆಕಟ್ಟು ಎತ್ತರಿಸಿದರೆ ಮಾತ್ರ ಎಂ.ಬಿ.ಪಾಟೀಲರು ಮಾಡುತ್ತಿರುವ ಕಾಲುವೆಗಳಿಗೆ ನೀರು ಹರಿಯುತ್ತದೆ ಎಂದು ಕುಹಕ ಮಾಡಿದ್ದರು. ಆದರೆ, ಅಣೆಕಟ್ಟು ಎತ್ತರಿಸದೇ ಕಾಲುವೆಗೆ ನೀರು ಹರಿಸಿ 203 ಕೆರೆಗಳನ್ನು ತುಂಬಿಸಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಕೆಲಸವನ್ನು ಮಾಡಿದ್ದೇನೆ’ ಎಂದರು.

ಇದೇ ವೇಳೆ ಸಚಿವ ಎಂ.ಬಿ.ಪಾಟೀಲಗೆ ಕಾರಜೋಳದ ಪಾಂಡು ಜಾಧವ ಬೆಳ್ಳಿ ಕಿರೀಟ ತೊಡಿಸಿದರೆ, ಪರಸಪ್ಪ ಹಳಿಜೋಳ ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು. ಯರನಾಳ ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಬಾಡಗಿ ಶಿವಯ್ಯ ಸ್ವಾಮೀಜಿ, ಜಿ.ಪಂ.ಸದಸ್ಯರಾದ ಉಮೇಶ ಕೋಳಕೂರ, ಸುಜಾತಾ ಕಳ್ಳಿಮನಿ, ಭೂ ದಾನಿ ಲಕ್ಷ್ಮೀಬಾಯಿ ನಾಗರಾಳ, ಟಿ.ಕೆ.ಹಂಗರಗಿ, ಜ್ಯೋತಿ ದೇಸಾಯಿ, ವಿ.ಎಸ್.ಪಾಟೀಲ, ಸಂಗಮೇಶ ಬಬಲೇಶ್ವರ ಉಪಸ್ಥಿತರಿದ್ದರು. ಸೋಮನಾಥ ಕಳ್ಳಿಮನಿ ಸ್ವಾಗತಿಸಿದರು. ಬಿ.ಡಿ.ಆಸಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT