ಕಲಕೇರಿ: ಸಮೀಪದ ಬೆಕಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಬೂದಿಹಾಳ ಪಿ.ಟಿ. ಗ್ರಾಮದಲ್ಲಿ ಮೂಲ ಸೌಕರ್ಯ ಮರೀಚಿಕೆಯಾಗಿವೆ.
ವ್ಯವಸ್ಥಿತವಾದ ರಸ್ತೆ, ಚರಂಡಿ, ಸಾರ್ವಜನಿಕ ಶೌಚಾಲಯಗಳಿಲ್ಲ. ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತದೆ. ರಸ್ತೆ ಮೇಲೆ ತ್ಯಾಜ್ಯ ನೀರು ಹರಿಯುವುದರಿಂದ ನಡೆದಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ದುರ್ವಾಸನೆ ಪರಿಣಾಮ ಗ್ರಾಮದಲ್ಲಿ ಮುಗು ಮುಚ್ಚಿಕೊಂಡು ಸಂಚರಿಸಬೇಕಾದ ಸ್ಥಿತಿ ಇದೆ. ಈ ಕುರಿತು ಗ್ರಾ.ಪಂ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದು ಸ್ವಚ್ಛ ಗ್ರಾಮ ಮಾಡಲು ಪ್ರಯತ್ನಿಸುತ್ತೇವೆ ಎನ್ನುತ್ತಾರೆ ಗ್ರಾ.ಪಂ ಸದಸ್ಯರಾದ ಸಂಗಣ್ಣ ಸಾಸಾಬಾಳ ಹಾಗೂ ಗೋಲ್ಲಾಳಪ್ಪ ಮನಗೂಳಿ.
ಈ ವರ್ಷ ಬರ ತಲೆದೋರಿರುವುದರಿಂದ ದಿನನಿತ್ಯ ನೀರಿಗಾಗಿ ಜನ ಅಲೆದಾಡುವಂತಾಗಿದೆ. ಸರ್ಕಾರದ ಎರಡು ಕೊಳವೆ ಬಾವಿಗಳಿದ್ದು, ಒಂದು ಪಾಳು ಬಿದ್ದಿದ್ದು, ಇನ್ನೊಂದರಲ್ಲಿ ನೀರಿಲ್ಲ. ಜೆ.ಜೆ.ಎಂ ಕಾಮಗಾರಿ ನಡೆದಿದೆಯಾದರೂ ಅದಕ್ಕೂ ನೀರಿನ ಕೊರತೆ ಕಾಡುತ್ತಿದೆ. ಕುಡಿಯಲು ಶುದ್ಧ ನೀರಿನ ಘಟಕದ ಅವಶ್ಯಕತೆ ಎಂದು ಸಾಕಷ್ಟು ಬಾರಿ ಮನವಿ ಮಾಡಿದರೂ ಗ್ರಾಮ ಪಂಚಾಯ್ತಿಯಿಂದ ಸ್ಪಂದನೆ ಇಲ್ಲ.
ಗ್ರಾಮದಲ್ಲಿ ಸುಮಾರು 600 ಜಾನುವಾರುಗಳಿದ್ದರೂ ಪಶು ಆಸ್ಪತ್ರೆ ಇಲ್ಲದ ಕಾರಣ ನೆರೆಯ ಆಸ್ಕಿ ಅಥವಾ ಕಲಕೇರಿಗೆ ಜಾನುವಾರುಗಳನ್ನು ಕೊಂಡೊಯ್ಯುವ ಪರಿಸ್ಥಿತಿ ಇದೆ. ಗ್ರಾಮಕ್ಕೆ ಸಾಕಷ್ಟು ಬಸ್ ಸೌಲಭ್ಯ ಇಲ್ಲ.
ಬೂದಿಹಾಳ–ಕಲಕೇರಿಯ ರಸ್ತೆ, ಬೂದಿಹಾಳ- ಅಸಂತಾಪೂರ ರಸ್ತೆ, ಬೂದಿಹಾಳ- ಸಲಾದಳ್ಳಿ ಕ್ರಾಸ್ ವರೆಗಿನ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಪ್ರತಿನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ ಪ್ರಯಾಣಿಕರು.
ಬಟ್ಟೆ ತೊಳೆಯಲು ಡೋಬಿ ಘಾಟ್ ಮಾಡಬೇಕು. ಜೊತೆಗೆ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಬೇಕು. ಅಂದಾಗ ಮಾತ್ರ ರಸ್ತೆಯಲ್ಲಿ ಬಯಲು ಶೌಚ ಮಾಡುವುದು ನಿಲ್ಲುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸರಿಪಡಿಸಲು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಸಾರ್ವಜನಿಕರು ಗ್ರಾಮ ಪಂಚಾಯ್ತಿ ಜೊತೆ ಕೈಜೋಡಿಸಬೇಕು – ಪಾರ್ವತಿ ಕುಮಾರಗೌಡ ಬಿರಾದಾರ ಗ್ರಾ.ಪಂ. ಸದಸ್ಯೆ
ಶಾಸಕರು ಈ ಗ್ರಾಮದ ಕಡೆ ವಿಶೇಷ ಕಾಳಜಿ ವಹಿಸಬೇಕು. ಸುತ್ತಮುತ್ತಲಿನ ರಸ್ತೆಗಳನ್ನು ಮಾಡಿಸಿ ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜು ಶುದ್ಧ ಕುಡಿಯುವ ನೀರಿನ ಘಟಕ ಮಾಡಬೇಕು– ಮಲ್ಲಿಕಾರ್ಜುನ ನಾಯ್ಕಲ್ ಯುವ ಮುಖಂಡ ಬೂದಿಹಾಳ.ಪಿ.ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.