ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ, ನಿಷ್ಪಕ್ಷಪಾತ ಚುನಾವಣೆಗೆ ಕ್ರಮ: ಡಿಸಿ

ವಿಧಾನ ಪರಿಷತ್‌ ವಾಯವ್ಯ ಶಿಕ್ಷಕರ ಮತ್ತು ಪದವೀಧರರ ಮತಕ್ಷೇತ್ರದ ಚುನಾವಣೆ
Last Updated 18 ಮೇ 2022, 15:33 IST
ಅಕ್ಷರ ಗಾತ್ರ

ವಿಜಯಪುರ: ವಿಧಾನ ಪರಿಷತ್‌ವಾಯವ್ಯ ಶಿಕ್ಷಕರ ಮತ್ತು ಪದವೀಧರರ ಮತಕ್ಷೇತ್ರದ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ನಿಟ್ಟಿನಲ್ಲಿ ಆಯಾ ಇಲಾಖೆಗಳ ಅಧಿಕಾರಿಗಳು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಬಿ.ದಾನಮ್ಮನವರ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಅಬಕಾರಿ, ಲೀಡ್ ಬ್ಯಾಂಕ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮುದ್ರಣ ಸಂಸ್ಥೆಗಳ ಮಾಲೀಕರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಅಬಕಾರಿ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಬಗ್ಗೆ ಈ ವೇಳೆ ಹೆಚ್ಚಿನ ನಿಗಾ ವಹಿಸಬೇಕು. ಅನಧೀಕೃತ ಮದ್ಯ ತಯಾರಿಕೆ, ದಾಸ್ತಾನು, ಸರಬರಾಜು ಇತ್ಯಾದಿ ಅಕ್ರಮಗಳ ಬಗ್ಗೆ ಅನುಮಾನ, ದೂರುಗಳು ಬಂದಲ್ಲಿ ಅಬಕಾರಿ ದಾಳಿ ನಡೆಸಿ ತಪ್ಪಿತಸ್ಥರ ಬಗ್ಗೆ ಕಾನೂನಿನ್ವಯ ಕ್ರಮಕೈಗೊಳ್ಳಬೇಕು ಎಂದರು.

ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಅಕ್ರಮವಾಗಿ ಸ್ವಾಧೀನದಲ್ಲಿ ಇಟ್ಟುಕೊಂಡಿರುವುದು ಕಂಡುಬಂದರೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ ಮುಗಿಯುವರೆಗೂ ನ್ಯಾಯಾಂಗ ಬಂಧನದಲ್ಲಿ ಇಡಲು ಮುಂದಿನ ಕ್ರಮ ವಹಿಸಬೇಕು ಎಂದರು.

ಯಾವುದೇ ಕಾರಣಕ್ಕೂ ಕಳ್ಳಬಟ್ಟಿ, ನಕಲಿ, ಕಲೆಬೆರಕೆ ಇತ್ಯಾದಿ ಅಕ್ರಮ ಮದ್ಯ ತಯಾರಿಕಾ, ದಾಸ್ತಾನು, ಸಾಗಾಣಿಕೆ, ಸರಬರಾಜು ಮತ್ತು ಸೇವನೆ ನಡೆಯದಂತೆ ಎಚ್ಚರ ವಹಿಸಬೇಕು ಮತ್ತು ದಾಳಿಗಳನ್ನು ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ವಿವಿಧ ವ್ಯಕ್ತಿಗಳು ಮತದಾರರನ್ನು ಓಲೈಸಲು ಮದ್ಯ ಒದಗಿಸುವುದನ್ನು ತಡೆಗಟ್ಟಬೇಕು. ಅಬಕಾರಿ ಇಲಾಖೆಯ ಅಧಿಕಾರಿ, ಸಿಬ್ಬಂದಿಯು ಈ ಬಗ್ಗೆ ಗಮನ ಹರಿಸಿ ಅಂತಹ ಪ್ರಕರಣಗಳ ಸುಳಿವು ಸಿಕ್ಕ ಕೂಡಲೇ ದೂರು ದಾಖಲಿಸಿಕೊಂಡು ಕಾನೂನು ರೀತಿಯ ಕ್ರಮಕೈಗೊಳ್ಳಬೇಕು. ಯಾವುದೇ ರೀತಿಯ ಅಬಕಾರಿ ಅಕ್ರಮಗಳು ಕಂಡುಬಂದಲ್ಲಿ, ಪತ್ತೆ ಹಚ್ಚಿದ್ದಲ್ಲಿ ಎಂಸಿಸಿ ತಂಡದ ಸದಸ್ಯರ ಸಮಕ್ಷಮ ಪಂಚನಾಮೆ ಬರೆದು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮವಹಿಸಬೇಕು ಎಂದು ಹೇಳಿದರು.

ಮುದ್ರಣಕಾರರು, ಪ್ಲೆಕ್ಸ್, ಬ್ಯಾನರ್ ತಯಾರಿಸುವವರು ಆಯೋಗ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ಜಾತಿ, ಧರ್ಮ ನಿಂದನೆ ಮಾಡುವಂತಹ, ಪ್ರಚೋದನಕಾರಿ ವಿಷಯಗಳ ಒಳಗೊಂಡ, ವೈಯಕ್ತಿಕ ನಿಂದನೆ ಮತ್ತು ಕೋಮು ಸಾಮರಸ್ಯ ಕದಡುವಂತಹ ವಿಷಯಗಳ ಕರಪತ್ರಗಳನ್ನು ಮುದ್ರಿಸಬಾರದು. ಕಡ್ಡಾಯವಾಗಿ ಅನುಮತಿ ಪಡೆದುಕೊಂಡೇ ಕರಪತ್ರ ಮುದ್ರಿಸಬೇಕು. ಕರಪತ್ರದಲ್ಲಿ ಮುದ್ರಣ ಸಂಸ್ಥೆಯ ಹೆಸರು, ಮುದ್ರಣ ಪ್ರತಿಗಳ ಸಂಖ್ಯೆಯನ್ನು ತಪ್ಪದೇ ನಮೂದಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ನಗರದ ವಿವಿಧ ಮುದ್ರಣ ಸಂಸ್ಥೆಗಳ ಮಾಲೀಕರಿಗೆ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಅಬಕಾರಿ ಇಲಾಖೆಯ ಅಧಿಕಾರಿ ಶಿವಲಿಂಗಪ್ಪ ಬನಹಟ್ಟಿ, ಜಗದೀಶ ಇನಾಂದಾರ, ಚುನಾವಣಾ ವಿಭಾಗದ ಹಾದಿಮನಿ, ನಗರದ ವಿವಿದ ಮುದ್ರಣ ಸಂಸ್ಥೆಗಳ ಮಾಲೀಕರು ಹಾಗೂ ಇನ್ನೀತರರು ಸಭೆಯಲ್ಲಿ ಇದ್ದರು.

****

ಚುನಾವಣೆಯಲ್ಲಿ ಅಕ್ರಮವಾಗಿ ನಡೆಸುವ ಹಣ ಬಳಕೆ ತಡೆಯಬೇಕು. ಈ ನಿಟ್ಟಿನಲ್ಲಿ ಅಭ್ಯರ್ಥಿಗಳ, ರಾಜಕೀಯ ಪಕ್ಷಗಳ ಮತ್ತು ಸಂಶಯಾಸ್ಪದ ಅನಿಸುವ ಉಳಿತಾಯ ಖಾತೆಗಳ ಮೇಲೆ ನಿಗಾ ಇಡಲು ಕ್ರಮ ವಹಿಸಬೇಕು

-ವಿಜಯಮಹಾಂತೇಶ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT