ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ | ವಾರಾಬಂಧಿ ರದ್ದು: ಕಾಲುವೆಗೆ ನಿರಂತರ ನೀರು

Published 25 ಅಕ್ಟೋಬರ್ 2023, 4:17 IST
Last Updated 25 ಅಕ್ಟೋಬರ್ 2023, 4:17 IST
ಅಕ್ಷರ ಗಾತ್ರ

ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ)ಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ಅವಧಿಯನ್ನು ಮತ್ತೇ ಮೂರನೇ ಬಾರಿಗೆ ಬದಲಾಯಿಸಲಾಗಿದ್ದು, ವಾರಾಬಂಧಿ ರದ್ದುಗೊಳಿಸಿ ನಿರಂತರ ನೀರು ಹರಿಸುವುದಕ್ಕೆ ಯುಕೆಪಿಯ ನೀರಾವರಿ ಸಲಹಾ ಸಮಿತಿ (ಐಸಿಸಿ) ನಿರ್ಧರಿಸಿದೆ.

ಡಿ.4ರವರೆಗೆ ನೀರು

ಮುಂಗಾರು ಹಂಗಾಮಿಗೆ ಈ ಮೊದಲು 14 ದಿನ ಚಾಲು ಹಾಗೂ 10 ದಿನ ಬಂದ್‌ ವಾರಾಬಂಧಿ ಅವಧಿಗೆ ಒಳಪಟ್ಟು ನ.23ರ ವರೆಗೆ ನೀರು ಹರಿಸಲು ನಿರ್ಧರಿಸಲಾಗಿತ್ತು. ಅದೇ ಪ್ರಕಾರದಲ್ಲಿ ನೀರು ಹರಿಯುತ್ತಿತ್ತು. ಆದರೆ ಕಳೆದ 15 ದಿನಗಳಿಂದ ವಾರಾಬಂಧಿ ಅವಧಿಯಲ್ಲಿ 10 ದಿನ ಬಂದ್‌ ಬದಲಿಗೆ 8 ದಿನಕ್ಕೆ ಇಳಿಸಿ ಡಿ.10ರ ವರೆಗೆ ನೀರು ಪೂರೈಕೆಗೆ ಐಸಿಸಿ ಅಧ್ಯಕ್ಷರು ನಿರ್ದೇಶಿಸಿದ್ದರು.
ಈಗ ಅ.14ರಿಂದ ಆರಂಭಗೊಂಡಿರುವ ಕಾಲುವೆಗೆ ನೀರು ಹರಿಸುವ ಅವಧಿ ಯಾವುದೇ ವಾರಾಬಂಧಿ ಅಳವಡಿಸದೇ ನ.18ರ ವರೆಗೆ 36 ದಿನಗಳ ಕಾಲ ನಿರಂತರ ನೀರು ಪೂರೈಕೆಯಾಗಲಿದೆ. ನ.19ರಿಂದ 26ರ ವರೆಗೆ ಮಾತ್ರ ಬಂದ್‌ಮಾಡಿ ಮತ್ತೇ ನ.27ರಿಂದ ಡಿ.4ರ ವರೆಗೆ ನೀರು ಪೂರೈಕೆಯಾಗಲಿದೆ. ಅ.14ರಿಂದ 44 ದಿನ ಕಾಲುವೆಗೆ ನೀರು ಹರಿಯಲಿದ್ದು, 8 ದಿನ ಮಾತ್ರ ಬಂದ್‌ ಇರಲಿದೆ.

‘ಅಚ್ಚುಕಟ್ಟು ಪ್ರದೇಶದಲ್ಲಿ ಅತಿಯಾದ ಬಿಸಿಲಿನಿಂದ ಉಷ್ಣಾಂಶ ಹೆಚ್ಚಾಗಿ, ಮಳೆಯ ಅಭಾವದಿಂದ ಭೂಮಿಯಲ್ಲಿನ ತೇವಾಂಶ ಬತ್ತಿ ಹೋಗುತ್ತಿದ್ದು, ರೈತರಿಗೆ ನೀರಿನ ಬೇಡಿಕೆ ಹೆಚ್ಚಾಗಿ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಹೀಗಾಗಿ ಅಚ್ಚುಕಟ್ಟು ಪ್ರದೇಶದ ಸಚಿವರು, ಶಾಸಕರು ಹಾಗೂ ರೈತರು ಬೆಳೆದು ನಿಂತಿರುವ ಬೆಳೆಗಳನ್ನು ಸಂರಕ್ಷಣೆಗಾಗಿ ಕಾಲುವೆ ಜಾಲದಲ್ಲಿ ವಾರಾಬಂಧಿ ಮಾಡದೇ ಹೆಚ್ಚಿನ ಅವಧಿಗೆ ನೀರನ್ನು ಹರಿಸಲು ಒತ್ತಾಯಿಸಿದ್ದರು. ಸದ್ಯದ ಸ್ಥಿತಿಯಲ್ಲಿ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿದ್ದು, ಹೆಚ್ಚಿನ ಪ್ರಮಾಣದ ನೀರಿನ ಅವಶ್ಯಕತೆ ಇದೆ. ಐಸಿಸಿ ಅಧ್ಯಕ್ಷರೂ ಆಗಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಾಲುವೆಗೆ ನೀರು ಹರಿಸುವ ಅವಧಿ ಬದಲಾಯಿಸಿದ್ದಾರೆ ಎಂದು ಐಸಿಸಿಯ ಸದಸ್ಯ ಕಾರ್ಯದರ್ಶಿಗಳು ಆಗಿರುವ ಭೀಮರಾಯನಗುಡಿಯ ಮುಖ್ಯ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದ್ವಿಋತು ಬೆಳೆಗೆ ನೀರು ಅಗತ್ಯ

ಒಂದೆಡೆ ಕೈಕೊಟ್ಟ ಮಳೆ, ಮತ್ತೊಂದೆಡೆ ಹೆಚ್ಚುತ್ತಿರುವ ಉಷ್ಣಾಂಶ, ಹೀಗಾಗಿ ರೈತರಿಂದ ನಿತ್ಯವೂ ನೀರಿನ ಬೇಡಿಕೆ ಹೆಚ್ಚುತ್ತಿದೆ. ಸೆಪ್ಟೆಂಬರ್‌ ನಲ್ಲಿ ಬೆಳೆದ ದ್ವಿಋತು ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ, ತೊಗರಿ ಬೆಳೆಗೆ ಡಿಸೆಂಬರ್‌ ಅಂತ್ಯದವರೆಗೂ ನೀರಿನ ಅಗತ್ಯವಿದೆ. ಕೇವಲ ನಾರಾಯಣಪುರ ಭಾಗದ ರೈತರ ಒತ್ತಡಕ್ಕೆ ಮಣಿದು ಕಾಲುವೆಗೆ ಹರಿಸುವ ಅವಧಿ ಬದಲಾಯಿಸಬಾರದು. ಹಿಂಗಾರಿಗೆ ಹಾಗೂ ದ್ವಿಋತು ಬೆಳೆಗಳಿಗೆ ನೀರು ನೀಡುತ್ತಾರೆಯೋ ಇಲ್ಲವೋ ಎಂಬುದನ್ನು ಮೊದಲೇ ಸ್ಪಷ್ಟಪಡಿಸಬೇಕು. ಶೀಘ್ರವೇ ಐಸಿಸಿ ಸಭೆ ಕರೆದು ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು ಎಂದು ರೈತರಾದ ಶಿವಾನಂದ ಮುರನಾಳ, ಶಿವಾನಂದ ಅವಟಿ, ನಿಂಗರಾಜ ಆಲೂರ, ಸೀತಪ್ಪ ಗಣಿ, ತಿರುಪತಿ ಬಂಡಿವಡ್ಡರ ಮತ್ತಿತರರು ಆಗ್ರಹಿಸಿದ್ದಾರೆ.

ನ.7ಕ್ಕೆ ಐಸಿಸಿ?

ನೀರಿಗಾಗಿ ರೈತರ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ನ.7ಕ್ಕೆ ಸ್ಪಷ್ಟ ನಿರ್ಣಯಕ್ಕಾಗಿ ಐಸಿಸಿ ಸಭೆ ನಡೆಯುವ ಸಾಧ್ಯತೆ ಇದೆ. ಆದರೆ ಸಭೆ ನಡೆಯುವ ಬಗ್ಗೆ ಇನ್ನೂ ಅಂತಿಮವಾಗಿಲ್ಲ ಎಂದು ಕೆಬಿಜೆಎನ್‌ಎಲ್‌ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT