ಕೊಲ್ಹಾರ: ಕೊಲ್ಹಾರ ಪಟ್ಟಣದ ಹೊರತು ಪಡಿಸಿ ತಾಲ್ಲೂಕಿನ ದೊಡ್ಡ ಪುನರ್ವಸತಿ ಕೇಂದ್ರವಾಗಿರುವ ಬಳೂತಿ ಪುನರ್ವಸತಿ ಕೇಂದ್ರದಲ್ಲಿ ಸಮರ್ಪಕ ರಸ್ತೆಗಳು, ಆರೋಗ್ಯ ಕೇಂದ್ರ, ಚರಂಡಿ ವ್ಯವಸ್ಥೆ, ಬಸ್ ನಿಲ್ದಾಣ, ಸ್ಮಶಾನ ರಸ್ತೆಗಳಿಲ್ಲದೇ ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿದೆ.
ಮುಳವಾಡ ಏತ ನೀರಾವರಿ ಯೋಜನೆಯ ಮುಖ್ಯ ಜಾಕ್ವೆಲ್ ಬಳಿ ಇರುವ ಬಳೂತಿ ಗ್ರಾಮ ಎರಡು ದಶಕಗಳ ಹಿಂದೆ ಹೊಸ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡಿತು. ಸಂತ್ರಸ್ತರು ಪುನರ್ವಸತಿ ಕೇಂದ್ರದಲ್ಲಿ ಹೊಸ ಬದುಕು ಕಟ್ಟಿಕೊಂಡು ಎರಡು ದಶಕಗಳಾಗುತ್ತಿದ್ದರೂ ಗ್ರಾಮಸ್ಥರಿಗೆ ಇನ್ನೂ ಸಮರ್ಪಕ ಮೂಲಸೌಲಭ್ಯಗಳು ದೊರೆಯುತ್ತಿಲ್ಲ.
ಹಣಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬಳೂತಿ ಗ್ರಾಮದಲ್ಲಿ ಸುಮಾರು 4 ಸಾವಿರದಷ್ಟು ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಬಳೂತಿ ಗ್ರಾಮಕ್ಕೆ ಇನ್ನೂ ಹೆಚ್ಚಿನ ಮೂಲಸೌಲಭ್ಯಗಳನ್ನು ಒದಗಿಸಿ ಗ್ರಾಮಾಭಿವೃದ್ಧಿಗೊಳಿಸಬೇಕಿದೆ.
‘ಬಳೂತಿ ಪುನರ್ವಸತಿ ಕೇಂದ್ರ ಯೋಜನಾಬದ್ಧ ಪ್ರದೇಶವಾದರೂ ಸಮರ್ಪಕ ಒಳರಸ್ತೆಗಳು, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಮಲಿನ ನೀರು ಸಂಗ್ರಹಗೊಂಡು ಅನಾರೋಗ್ಯದ ಭೀತಿ ಆವರಿಸುತ್ತದೆ. ಇನ್ನೂ ಆರೋಗ್ಯ ಕೇಂದ್ರ ಕಟ್ಟಡವಿದ್ದರೂ ವೈದ್ಯಕೀಯ ಸೌಲಭ್ಯವಿಲ್ಲ. ಅಲ್ಲದೇ ಕೃಷಿ, ಪಶುಸಂಗೋಪನೆಯೇ ಮುಖ್ಯ ಉದ್ಯೋಗವಾಗಿಸಿಕೊಂಡ ಬಳೂತಿ ರೈತಾಪಿ ವರ್ಗದ ಅನುಕೂಲಕ್ಕೆ ಪಶು ಆಸ್ಪತ್ರೆ ಮರಿಚಿಕೆಯಾಗಿದೆ. ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಹದಗೆಟ್ಟಿದೆ’ ಎಂದು ಗ್ರಾಮಸ್ಥ ಜಗದೀಶ ಸುನಗದ ದೂರಿದರು.
‘ಸ್ಮಶಾನವಿದ್ದರೂ ಸ್ಮಶಾನಕ್ಕೆ ಹೋಗುವ ರಸ್ತೆ ಹದಗೆಟ್ಟಿದೆ. ಸ್ಮಶಾನದಲ್ಲಿ ಚಿತಾಗಾರ, ನೀರು, ಬೆಳಕಿನ ವ್ಯವಸ್ಥೆ ಕಲ್ಪಿಸಬೇಕಿದೆ’ ಎಂದು ಗ್ರಾಮಸ್ಥ ರವಿ ಗೊಳಸಂಗಿ ಎಂದು ಒತ್ತಾಯಿಸಿದರು.
‘ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತಾಲ್ಲೂಕು ಕೇಂದ್ರಗಳು ಹಾಗೂ ಜಿಲ್ಲಾ ಕೇಂದ್ರಗಳಿಗೆ ಹೋಗಲು ಸೂಕ್ತ ಬಸ್ ಸೌಕರ್ಯವಿಲ್ಲ. ಬರುವ ಬಸ್ ನಿಗದಿತ ಸಮಯಕ್ಕೆ ಸಂಚರಿಸದೇ ಯಾವಾಗ ಬರುತ್ತೆ ಯಾವಾಗ ಹೋಗುತ್ತದೆ ಎಂಬುದು ಜನರಿಗೆ ತಿಳಿಯದಾಗಿದೆ. ಬಸ್ ನಿಲ್ದಾಣವಂತೂ ಇಲ್ಲವೇ ಇಲ್ಲ. ಸ್ಥಳೀಯ ಶಾಸಕರು, ಹಣಮಾಪುರ ಗ್ರಾ.ಪಂ ಸದಸ್ಯರು, ಅಧಿಕಾರಿಗಳು ಬಳೂತಿ ಗ್ರಾಮದತ್ತ ಗಮನಹರಿಸಿ ಇಲ್ಲಿನ ಸಮಸ್ಯೆಗಳಿಗೆ ಮುಕ್ತಿ ನೀಡಿ ಗ್ರಾಮಸ್ಥರಿಗೆ ಸೂಕ್ತ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಗ್ರಾಮದ ಯುವ ಮುಖಂಡ ಬಸವರಾಜ ಬನಾಗೊಂಡ ಒತ್ತಾಯಿಸಿದರು.
ಬಳೂತಿ ಗ್ರಾಮದಲ್ಲಿನ ಚರಂಡಿ ರಸ್ತೆ ಹಾಗೂ ಇತರೆ ಸಮಸ್ಯೆಗಳ ಕುರಿತು ಗಮನಕ್ಕೆ ಬಂದಿದೆ. ಸದಸ್ಯರೊಂದಿಗೆ ಚರ್ಚಿಸಿ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಿ ಸೂಕ್ತ ಮೂಲಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಮಾಡುತ್ತೇನೆ- ದತ್ತಾತ್ರೇಯ ಜೋಶಿ ಪಿಡಿಒ ಹಣಮಾಪುರ ಗ್ರಾ.ಪಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.