ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ: ಐಇಎಸ್ ಪಾಸಾದ ಗ್ರಾಮೀಣ ಪ್ರತಿಭೆ ಭಾಗ್ಯಶ್ರೀ

Last Updated 14 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಆಲಮಟ್ಟಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಇಂಡಿಯನ್ ಎಂಜಿನಿಯರಿಂಗ್ ಸರ್ವಿಸ್ (ಐಇಎಸ್) ಪರೀಕ್ಷೆಯಲ್ಲಿ ಅಪ್ಪಟ ಗ್ರಾಮೀಣ ಪ್ರತಿಭೆಯೊಬ್ಬರು ಆಯ್ಕೆಯಾಗಿದ್ದಾಳೆ.

ಬಸವನಬಾಗೇವಾಡಿ ತಾಲ್ಲೂಕಿನ ಮುತ್ತಗಿ ಗ್ರಾಮದ, ಆಲಮಟ್ಟಿ ಆರ್. ಎಸ್. ನಿವಾಸಿ ಸುರೇಶ ವಾಲೀಕಾರ ಹಾಗೂ ಭಾರತಿ ವಾಲೀಕಾರ ಶಿಕ್ಷಕ ದಂಪತಿಯ ಪುತ್ರಿ ಭಾಗ್ಯಶ್ರೀ ಸುರೇಶ ವಾಲೀಕಾರ ಐಇಎಸ್ ಪರೀಕ್ಷೆಯಲ್ಲಿ ದೇಶಕ್ಕೆ 39ನೇ ರ‍್ಯಾಂಕ್‌ ಪಡೆದಿದ್ದಾರೆ.
ಏಪ್ರಿಲ್‌ 12 ರಂದು ಯುಪಿಎಸ್‌ಸಿ ಪ್ರಕಟಿಸಿರುವ ಪಟ್ಟಿಯಲ್ಲಿ ಆಯ್ಕೆಯಾಗಿರುವ ಭಾಗ್ಯಶ್ರೀ, ಪರೀಕ್ಷೆ ಕಟ್ಟಿದ ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಿದ್ದು ವಿಶೇಷ.

1ರಿಂದ 5ನೇ ವರೆಗೆ ಇಲ್ಲಿಯ ಕನ್ನಡ ಶಾಲೆಯಲ್ಲಿ ಕಲಿತಿರುವ ಇವರು, 6 ರಿಂದ 12 ನೇ ವರೆಗೆ ಆಲಮಟ್ಟಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ಓದಿದ್ದಾರೆ.

ಬಾಲ್ಯದಿಂದಲೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಇವರು ಎಸ್ ಎಸ್ ಎಲ್ ಸಿಯಲ್ಲಿ 10 ಕ್ಕೆ 10 (ಸಿಜಿಪಿಎ) ಅಂಕ ಪಡೆದು ಶಾಲೆಗೆ ಪ್ರಥಮ, ಪಿಯುಸಿ ದ್ವಿತೀಯ ವರ್ಷದಲ್ಲಿ ಶೇ 91 ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿದ್ದರು.

ಬೆಳಗಾವಿಯ ಗೋಗಟೆ ಎಂಜಿನಿಯರಿಂಗ್ ಕಾಲೇಜ್‌ನಲ್ಲಿ 2018ರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿಯನ್ನು ಉನ್ನತ ದರ್ಜೆಯಲ್ಲಿ ಪಾಸಾಗಿದ್ದರು.

ಸಾಫ್ಟ್ ವೇರ್ ಎಂಜಿನಿಯರ್ ನೌಕರಿ ಬಿಟ್ಟು ಅಧ್ಯಯನ:ಐಇಎಸ್ ಮಾಡಬೇಕೆನ್ನುವ ಗುರಿಯ ಕಾರಣ ಕ್ಯಾಂಪಸ್ ಸಂದರ್ಶನದಲ್ಲಿ ಬಿಇ ಕಲಿಯುವಾಗ ಸಾಫ್ಟ್ ವೇರ್ ಎಂಜಿನಿಯರ್ ನೇಮಕಗೊಂಡರೂ ಅದನ್ನು ಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಅಧ್ಯಯನ ನಡೆಸಿದ್ದರು ಭಾಗ್ಯಶ್ರೀ.

ಒಂದು ವರ್ಷ ಹೈದರಾಬಾದ್‌ನಲ್ಲಿ ತರಬೇತಿ ಪಡೆದು, 2020 ನೇ ಇಸವಿಯಿಂದಲೇ ಐಇಎಸ್ ಪ್ರಾಥಮಿಕ ಹಂತ ಪರೀಕ್ಷೆ ಬರೆದು ಮುಖ್ಯ ಪರೀಕ್ಷೆಗೆ ಆಯ್ಕೆಯಾದಾಗ ಲಾಕ್‌ಡೌನ್ ಕಾರಣ ಮುಖ್ಯ ಪರೀಕ್ಷೆ ಮುಂದಕ್ಕೆ ಹೋಯಿತು. ತಾಳ್ಮೆ ಕಳೆದುಕೊಳ್ಳದೇ ಗುರಿ ಈಡೇರಿಕೆಗೆ ಮನೆಯಲ್ಲಿಯೇ ಇದ್ದು ಸತತ ಅಧ್ಯಯನ ನಡೆಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.

ಇವರು ಐಐಟಿಯಲ್ಲಿ ಎಂ.ಟೆಕ್ ಪ್ರವೇಶಕ್ಕಾಗಿ ನಡೆಯುವ ಗೇಟ್ ಪರೀಕ್ಷೆಯಲ್ಲಿಯೂ ದೇಶಕ್ಕೆ 610 ನೇ ರ್‍ಯಾಂಕ್‌ ಪಡೆದಿದ್ದು ವಿಶೇಷ.

ಮಹಿಳೆಯರು ಮುಂದೆ ಬರಬೇಕು

‘200 ಅಂಕಗಳ ಯುಪಿಎಸ್‌ಸಿ ಅಂತಿಮ ಸಂದರ್ಶನದಲ್ಲಿಯೂ ಧೈರ್ಯ ಹಾಗೂ ಸಮರ್ಥ ರೀತಿಯಿಂದ ಎದುರಿಸಿದೆ, ಭಾಷೆ, ವಿಷಯದ ಜ್ಞಾನ ಸೇರಿದಂತೆ ಯಾವುದೇ ರೀತಿಯ ತೊಂದರೆಯಾಗಲಿಲ್ಲ, ಬಹುಶಃ ಈ ವರ್ಷ ಕರ್ನಾಟಕದಿಂದ ಐಇಎಸ್ ಪರೀಕ್ಷೆ ಪಾಸಾದ ಏಕೈಕ ಮಹಿಳೆ ನಾನಾಗಿರಬಹುದು’ ಎಂದು ಭಾಗ್ಯಶ್ರೀ ಹೇಳಿದರು.

‘ಚಿಕ್ಕ, ಚಿಕ್ಕ ಬಯಕೆಗಳು ಈಡೇರಿದ ಕೂಡಲೇ ನಮ್ಮ ಆಸೆಯನ್ನು ಮೊಟಕಾಗಲು ಬಿಡದೇ, ಉನ್ನತವಾದ ಸಾಧನೆಯತ್ತ ಹೆಜ್ಜೆ ಇಡಬೇಕು’ ಎಂದರು.

‘ವಿದ್ಯಾರ್ಥಿನಿಯರು ಹೆಚ್ಚು ಹೆಚ್ಚು ಜನ ಯುಪಿಎಸ್‌ಇ ಬರೆಯುವಂತಾಗಬೇಕು, ದೇಶದ ಯಾವುದೇ ಮೂಲೆಯಲ್ಲಿಯೂ ನನಗೆ ನೌಕರಿ ದೊರೆಯಬಹುದು, ಅಲ್ಲಿ ಹೋಗಿ ನೌಕರಿ ಮಾಡಿ, ಏನಾದರೂ ಹೊಸತು ಮಾಡಬೇಕೆನ್ನುವ ಛಲವಿದೆ’ ಎಂದರು.

ಐಎಎಸ್ ಮಾಡುವ ಆಸೆ

‘ಐಇಎಸ್‌ ನೇಮಕ ಹೊಂದಿ, ಮುಂದೆ ಐಎಎಸ್ ಪರೀಕ್ಷೆ ಪಾಸು ಮಾಡುವ ಕನಸಿದೆ, ಆ ಕನಸಿಗೆ ತಕ್ಕಂತೆ ಅಧ್ಯಯನ ಈಗಿನಿಂದಲೇ ನಡೆಸುತ್ತಿರುವೆ’ ಎಂದು ಭಾಗ್ಯಶ್ರೀ ಹೇಳಿದರು.

ತಂದೆ ಸುರೇಶ ವಾಲೀಕಾರ ಬಾಗಲಕೋಟೆ ತಾಲ್ಲೂಕಿನ ರಾಂಪೂರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ, ತಾಯಿ ಭಾರತಿ ನಿಡಗುಂದಿ ತಾಲ್ಲೂಕಿನ ಇಟಗಿಯಲ್ಲಿ ಶಿಕ್ಷಕಿ.

ಸನ್ಮಾನ

ಶಿಕ್ಷಕ ದಂಪತಿಯ ಪುತ್ರಿ ಭಾಗ್ಯಶ್ರೀಯ ಐಇಎಸ್ ಸಾಧನೆಗಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು. ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ನೇತೃತ್ವದಲ್ಲಿ ನಿಡಗುಂದಿ ತಾಲ್ಲೂಕಿನ ಹಲವಾರು ಶಿಕ್ಷಕರು ಸೇರಿ ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT