ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರರ ಬಿಲ್ ವಿಳಂಬವಾಗಲು ಬಿಜೆಪಿಯವರೇ ನೇರ ಕಾರಣ: ಸಚಿವ ಸತೀಶ ಜಾರಕಿಹೊಳಿ

Published 10 ಡಿಸೆಂಬರ್ 2023, 15:38 IST
Last Updated 10 ಡಿಸೆಂಬರ್ 2023, 15:38 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಗುತ್ತಿಗೆದಾರರ ಬಿಲ್ ವಿಳಂಬವಾಗಲು ಬಿಜೆಪಿಯವರೇ ನೇರ ಕಾರಣ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದರು.

ಸುರಪೂರ ತಾಲ್ಲೂಕಿನ ಕಕ್ಕೇರಿಯಿಂದ ಪಟ್ಟಣದ ಮಾರ್ಗವಾಗಿ ಆಲಮಟ್ಟಿಗೆ ತೆರಳುವ ವೇಳೆ ವಿದ್ಯಾನಗರದಲ್ಲಿ ತಮ್ಮ ಆಪ್ತರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈ ಬಗ್ಗೆ ಉದಾಹರಣೆಯೊಂದಿಗೆ ವಿವರಿಸಿದ ಸಚಿವರು, ಬಜೆಟ್‌ನಲ್ಲಿ ನಮ್ಮ ಇಲಾಖೆಗೆ ಕೊಟ್ಟದ್ದು ನೂರು ರೂಪಾಯಿ, ಆದರೆ ಖರ್ಚು ಮಾಡಿದ್ದು 300 ರೂಪಾಯಿ. ಹಣಕಾಸು ಇಲಾಖೆಯಿಂದ ನಮಗೆ ನೂರು ರೂಪಾಯಿ ಮಾತ್ರ ಕೊಟ್ಟಿದ್ದಾರೆ. ಅದರಲ್ಲಿ ಸಣ್ಣ ನೀರಾವರಿ, ಪಿಡಬ್ಲ್ಯೂಡಿ, ನೀರಾವರಿ ಸೇರಿ ಹಿಂದಿನ ಸರ್ಕಾರ ₹4000 ಕೋಟಿ ಹೆಚ್ಚುವರಿಯಾಗಿ ಖರ್ಚು ಮಾಡಿದೆ. ಆದರೆ ಕೊಟ್ಟಿದ್ದು ₹2 ಸಾವಿರ ಕೋಟಿ ಮಾತ್ರ. ಬಜೆಟ್‌ನಲ್ಲಿ ಹಂಚಿಕೆಯಾಗಿರುವಷ್ಟೇ ನಮಗೆ ಕೊಟ್ಟಿದ್ದಾರೆ ಎಂದರು.

ಹಿಂದಿನ ಸರ್ಕಾರ ಡಬ್ಬಲ್ ಖರ್ಚು ಮಾಡಿದೆ. ಅವರು ಹೆಚ್ಚಿಗೆ ಮಾಡಿಟ್ಟಿದ್ದಕ್ಕೆ ಗುತ್ತಿಗೆದಾರರಿಗೆ ಬಿಲ್ ಕೊಡುವುದಕ್ಕೆ ಆಗುತ್ತಿಲ್ಲ. ಅದು ಸರಿ ಹೋಗುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ‌ರು.

‘ಗ್ಯಾರಂಟಿ ಯೋಜನೆಗಳಿಗೂ ಅಭಿವೃದ್ಧಿ ಕಾಮಗಾರಿಗಳ ವಿಳಂಬಕ್ಕೂ ಸಂಬಂಧವಿಲ್ಲ. ಹೊರಗಡೆ ಇರುವವರಿಗೆ ಹಾಗೆನ್ನಿಸುತ್ತದೆ. ಹೆಚ್ಚುವರಿ ಅನುದಾನ ನೀಡಲು ಕೋರಿದ್ದೇವೆ. ಬರಲಿರುವ ದಿನಗಳಲ್ಲಿ ಹಣಕಾಸು ಇಲಾಖೆಯವರು ಅನುದಾನ ನೀಡುವ ವಿಶ್ವಾಸವಿದೆ’ ಎಂದು ಹೇಳಿದರು.

ದಲಿತ ಸಿಎಂ ಎಂಬ ಕೂಗು ಕೇಳಿ ಬಂದಾಗ ಪಕ್ಷದ ತೀರ್ಮಾನವನ್ನು ಶಾಸಕರು ಒಪ್ಪಬೇಕು. ಅದಕ್ಕೆಲ್ಲ ಸಮಯ ಕೂಡಿ ಬಂದಾಗ ನೋಡೋಣ ಎಂದರು.

ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ (ಕೊಣ್ಣೂರ), ವೈ.ಎಚ್.ವಿಜಯಕರ್, ಗುತ್ತಿಗೆದಾರ ಯಲ್ಲಪ್ಪ ಚಲವಾದಿ, ಕಾಂಗ್ರೆಸ್ ಮುಖಂಡ ಹುಲಗಪ್ಪ ನಾಯ್ಕಮಕ್ಕಳ, ಪವನಕುಮಾರ್ ಧನ್ನೂರ, ಮೊದಲಾದವರು ಇದ್ದರು. ಇದೇ ವೇಳೆ ಜಾರಕಿಹೊಳಿ ಅವರ ಅಭಿಮಾನಿಗಳು ಸಚಿವರನ್ನು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT