ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳವಾರ ಸಮಾಜ ಕಡೆಗಣಿಸಿದ ಬಿಜೆಪಿ: ಸಿದ್ದರಾಮಯ್ಯ

ತಳವಾರ ಸ್ವಾಭಿಮಾನಿ ಸಮಾವೇಶದಲ್ಲಿ ಸಿದ್ಧರಾಮಯ್ಯ ಆರೋಪ
Last Updated 24 ಅಕ್ಟೋಬರ್ 2021, 16:35 IST
ಅಕ್ಷರ ಗಾತ್ರ

ಸಿಂದಗಿ(ವಿಜಯಪುರ): ತಳವಾರ ಸಮಾಜವನ್ನು ಎಸ್‌ಟಿಗೆ ಸೇರಿಸಲು ಮುಖ್ಯಮಂತ್ರಿಯಾದಾಗ ನಾನು ಕೇಂದ್ರಕ್ಕೆ ಸಿಫಾರಸು ಮಾಡಿದ್ದೆ. ಬಿಜೆಪಿ ತಳವಾರ ಸಮಾಜವನ್ನು ಕಡೆಗಣಿಸುತ್ತಲೆ ಬಂದಿದೆ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಇಲ್ಲಿನ ಬಸ್ ನಿಲ್ದಾಣದ ಎದುರಿನ ಶಾಲಾ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಳವಾರ ಸ್ವಾಭಿಮಾನಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ,

ತಳವಾರ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಲು ಕೇಂದ್ರ ಮಾಡಿದ ಆದೇಶವನ್ನು ರಾಜ್ಯ ಸರ್ಕಾರ ನೀಡಲು ಹಿಂದೇಟು ಹಾಕುತ್ತಿದೆ ಎಂದರು.

ತಳವಾರ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಒಂದು ವೇಳೆ ಈಡೇರಿಸದೆ ಹೊದಲ್ಲಿ ಮುಂಬರುವ 2023 ರಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತೇ ನಿಮ್ಮ ಸಮಾಜದ ಮನವಿಯನ್ನು ಪೂರೈಸುವಲ್ಲಿ ನಾನು ಮೊದಲಿಗನಾಗಿರುತ್ತೇನೆ ಎಂದು ಭರವಸೆ ನೀಡಿದರು.

ಕೇಂದ್ರದಲ್ಲಿ ಬಿಜೆಪಿ ಎಂಟು ವರ್ಷದಿಂದ ಆಡಳಿತ ನಡೆಸುತ್ತಿದೆ. ಯಾಕೆ ನಿಮಗೆ ಎಸ್.ಟಿ ಮೀಸಲಾತಿ ನೀಡಲಿಲ್ಲ. ಚುನಾವಣೆ ಸಂದರ್ಭದಲ್ಲಿ ಮತದಾಸೆಗಾಗಿ ಸಚಿವ ಗೋವಿಂದ ಕಾರಜೋಳ ಮೀಸಲಾತಿ ಆದೇಶ ಆಗಿದೆ ಎಂದು ಸುಳ್ಳು ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.

ಎಸ್.ಟಿ ಮೀಸಲಾತಿ ಆದೇಶ ಹೊರಡಿಸುವಂತೆ ಸಚಿವ ಶ್ರೀರಾಮುಲು ಅವರಿಗೆ ತಿಳಿಸಿದ್ದೆ. ಆದರೆ, ಮಾಡಲಿಲ್ಲ. ನಾನು ವಿಧಾನಸಭೆಯಲ್ಲಿ ಒತ್ತಾಯ ಮಾಡುವೆ. ಮಾಡದಿದ್ದರೆ ಹೋರಾಟವೂ ಮಾಡುವೆ ಎಂದು ಭರವಸೆ ನೀಡಿದರು

ಬಿಜೆಪಿ ಯಾವತ್ತೂ ಮೀಸಲಾತಿ ಪರ ಇಲ್ಲ. ಹಿಂದುಳಿದವರಿಗೆ ಪ್ರಾತಿನಿಧ್ಯ ಕೊಡುವುದಿಲ್ಲ. ಈ ಸಮುದಾಯದ ಬಾಬುರಾವ್‌ ಚಿಂಚನಸೂರ, ಪ್ರಮೋದ್‌ ಮದ್ವರಾಜ್, ಆರ್.ಬಿ.ಚೌಧರಿ, ಶರಣಪ್ಪ ಸುಣಗಾರರಿಗೆ ಮಂತ್ರಿ, ಶಾಸಕ ಸ್ಥಾನ ನೀಡಿರುವುದು ಕಾಂಗ್ರೆಸ್ ಪಕ್ಷ. ಬಿಜೆಪಿಯನ್ನು ಕನಸ್ಸಿನಲ್ಲೂ ನೆನಸಿಕೊಳ್ಳಬೇಡಿ ಎಂದು ಹೇಳಿದರು.

ಶರಣಪ್ಪ ಸುಣಗಾರನ ಭವಿಷ್ಯ ನೀವು ನೀಡುವ ವೋಟಿನ ಮೇಲೆ ನಿಂತಿದೆ. ಈ ಸಲ ಸುಣಗಾರ ಅವರಿಗೆ ಕಾರಣಾಂತರದಿಂದ ಟಿಕೆಟ್ ನೀಡಲಾಗಿಲ್ಲ. ಆದರೆ, ಅವರಿಗೆ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಗೌರವದ ಸ್ಥಾನ ನೀಡಲಿದೆ ಎಂದು ಕಾಂಗ್ರೆಸ್‌ನ ಎಲ್ಲ ವರಿಷ್ಠರು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ತಳವಾರ ಪರಿವಾರ ಸಮಾಜ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಸಮುದಾಯದ ಬಾಬುರಾವ್‌ ಚಿಂಚನಸೂರ ಬಿಜೆಪಿಗೆ ಸೇರ್ಪಡೆಗೊಂಡು ಎಸ್.ಟಿ ಪ್ರಮಾಣಪತ್ರ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಕೊಡಿಸಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ನಮ್ಮ ಸಮುದಾಯವೇ ಕಾರಣವಾಯಿತು. ಸಮುದಾಯ ಯಾವತ್ತೂ ಕಾಂಗ್ರೆಸ್ ಕೈಬಿಟ್ಟಿಲ್ಲ. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ. ಆಗ ಎಸ್.ಟಿ ಪ್ರಮಾಣಪತ್ರ ಕೊಡಿಸುತ್ತಾರೆ. ಎಲ್ಲರೂ ನನ್ನ ಮಾತಿಗೆ ಗೌರವ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವ ಪ್ರತಿಜ್ಞೆ ಮಾಡಬೇಕು ಎಂದು ಕೇಳಿಕೊಂಡರು.

26ರಂದು ಬಿಜೆಪಿಯವರು ಆಯೋಜಿಸಿರುವ ತಳವಾರ ಸಮಾವೇಶದಲ್ಲಿ ಇಲ್ಲಿದ್ದವರು ಯಾರೂ ಪಾಲ್ಗೊಳ್ಳಬಾರದು ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣ ಕಮಕನೂರ ಮಾತನಾಡಿ, ತಳವಾರ ಸಮಾಜದ ಆಲದ ಮರ ಶರಣಪ್ಪ ಸುಣಗಾರ. ಅವರಿಗೆ ಕಾಂಗ್ರೆಸ್ ಪಕ್ಷ ರಾಜಕೀಯ ಉನ್ನತ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಈ ಸಮುದಾಯದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಸರ್ಕಾರದ ಆಚರಣೆಗಾಗಿ ಉಮಾಶ್ರೀ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆಯಾಗಿದ್ದಾಗ ಆದೇಶ ಹೊರಡಿಸಿದ್ದರು ಎಂದು ಹೇಳುತ್ತಿದ್ದಂತೆ, ‘ಅದೆಲ್ಲ ಇಲ್ಲಿ ಬೇಡ ಎಸ್.ಟಿ ಮೀಸಲಾತಿ ಕುರಿತು ಹೇಳಿ’ಎಂದು ಸಭಿಕರು ಆಗ್ರಹಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಶಾಸಕ ಎಂ.ಬಿ.ಪಾಟೀಲ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾತನಾಡಿದರು.

ಕಾಂಗ್ರೆಸ್‌ಗೆ ಮತ: ಪ್ರತಿಜ್ಞೆ

‘ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕು. ಇದರಲ್ಲಿ ನನ್ನ ರಾಜಕೀಯ ಭವಿಷ್ಯ ಅಡಗಿದೆ’ ಎಂದು ತಳವಾರ ಪರಿವಾರ ಸಮಾಜ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಸುಣಗಾರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅಪಾರ ಜನಸ್ತೋಮವನ್ನು ಎಂದು ನಿಲ್ಲಿಸಿ, ಕೈಮುಂದೆ ಮಾಡಿಸಿ ಸಾಮೂಹಿಕವಾಗಿ ಪ್ರತಿಜ್ಞೆ ಮಾಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT