ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಹಿಪ್ಪರಗಿ | ಬಸ್‌ಗಳಲ್ಲಿ ವ್ಯಾಪಾರ; ಕಡಿವಾಣಕ್ಕೆ ಅಗತ್ಯ

ಪ್ರಯಾಣಿಕರಿಗೆ, ಚಾಲಕ, ನಿರ್ವಾಹಕರಿಗೆ ಕಿರಿಕಿರಿ
Published 19 ಮಾರ್ಚ್ 2024, 4:50 IST
Last Updated 19 ಮಾರ್ಚ್ 2024, 4:50 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ಪಟ್ಟಣದ ನಿಲ್ದಾಣಕ್ಕೆ ಬಸ್ಸುಗಳು ಆಗಮಿಸುವುದೇ ತಡ ಓಡಿ ಹೋಗಿ ಬಸ್ ಹತ್ತಿ ನೀರು, ಹಣ್ಣು, ಬಿಸ್ಕಿಟ್‌ ಸೇರಿದಂತೆ ಬಗೆಬಗೆಯ ತಿನಿಸುಗಳನ್ನು ಮಾರಾಟ ಮಾಡಲು ಮುಗಿಬೀಳುವ ವ್ಯಾಪಾರಿಗಳಿಂದ ಪ್ರಯಾಣಿಕರಿಗೆ, ಚಾಲಕ, ನಿರ್ವಾಹಕರಿಗೆ ಕಿರಿಕಿರಿ ಉಂಟಾಗುತ್ತಿರುವ ಪ್ರಕರಣಗಳು ಹೆಚ್ಚಳವಾಗಿದೆ.

ಪ್ರಯಾಣಿಕರ ಸೆಳೆಯುವ ತವಕದಲ್ಲಿ ವ್ಯಾಪಾರಿಗಳು ನಿಲ್ದಾಣಕ್ಕೆ ಬಸ್‌ ಬರುವಾಗ, ಹೊರಡುವಾಗ ಕೊನೇ ಕ್ಷಣದಲ್ಲಿ ಬಸ್‌ ಏರುವುದು, ಇಳಿಯುವುದು ಮಾಡುವ ಭರದಲ್ಲಿ ಆತಂಕವನ್ನು ಸೃಷ್ಟಿಸುತ್ತಿರುವುದು ನಿತ್ಯ ಕಂಡುಬರುತ್ತಿದೆ.

ಚಲಿಸುವ ಬಸ್‌ನಿಂದಲೇ ವ್ಯಾಪಾರಿಗಳು ಹೇಳದೇ, ಕೇಳದೇ ಜಿಗಿಯುವುದು, ಹತ್ತುವುದು ಮಾಡುವಾಗ ಬಸ್ಸಿಂದ ಬಿದ್ದರೇ ಏನಾದೀತು ಎಂಬ ಆತಂಕ ಸಿಬ್ಬಂದಿಯದು.

ಪಟ್ಟಣದ ಬಸ್ ನಿಲ್ದಾಣದವು  ಸುಮಾರು 30ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ನಿತ್ಯ ಬೆಳಿಗ್ಗಿನಿಂದ ಸಂಜೆಯವರೆಗೆ ತಮ್ಮ ನೀರು, ಹಣ್ಣುಗಳ ಮಾರಾಟದ ಸಂತೆಯಾದರೆ, ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಇವರಿಗೆ ಏನಾದರೆ ಹೇಗೆ ಎಂಬುವುದೇ ಚಿಂತೆ. ಈ ಬಗ್ಗೆ ಹಲವು ಬಾರಿ ಕರೆದು ವ್ಯಾಪಾರಿಗಳಿಗೆ ತಿಳಿಹೇಳಿದರೂ ಬದಲಾಗದ ಸನ್ನಿವೇಶ.

ಈ ಕುರಿತು ಸಾರಿಗೆ ನಿಯಂತ್ರಕ ಎಸ್.ಎಸ್. ಕಡಕೋಳ ಪ್ರತಿಕ್ರಿಯೆ ನೀಡಿ, ‘ಬಸ್ ನಿಲ್ದಾಣದಲ್ಲಿ ಮಾರಾಟ ಮಾಡಲು ನಮ್ಮ ಅಭ್ಯಂತರವೇನಿಲ್ಲ. ಆದರೆ, ಅವರ ಮಾರಾಟ ಮಾಡುವ ಬಗೆ ಮಾತ್ರ ನಮಗೆ ಗಾಬರಿಯನ್ನುಂಟು ಮಾಡಿದೆ. ಪ್ರತಿ ನಿತ್ಯ ನಮ್ಮ ನಿಲ್ದಾಣದ ಮೂಲಕ 400ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ. ಅದರಲ್ಲಿಯೂ ವಿಜಯಪುರ, ಕಲಬುರಗಿ, ಸಿಂದಗಿ ಬಸ್‌ಗಳೇ ಅಧಿಕ. ಇವುಗಳು ನಿಲ್ದಾಣದಲ್ಲಿ ಬರುವುದೇ ತಡ ಮಾರಾಟಗಾರರು ಓಡಿ ಹೋಗಿ ಬಸ್ ಹತ್ತುತ್ತಾರೆ. ಹಾಗೆಯೇ ನಿಲ್ದಾಣದಿಂದ ಹೋಗುವಾಗ ಚಲಿಸುವ ಬಸ್ಸಿನಿಂದಲೇ ಇಳಿಯುತ್ತಾರೆ. ಇದರಿಂದ ಬಸ್ ಹತ್ತುವ ಹಾಗೂ ಇಳಿಯುವ ಪ್ರಯಾಣಿಕರು ತೊಂದರೆಗೆ ಒಳಗಾಗುತ್ತಾರೆ‘ ಎಂದರು.

‘ಮುಖ್ಯವಾಗಿ ಮಾರಾಟ ಮಾಡುವವರಿಗೆ ಇದು ಅತ್ಯಂತ ಅಪಾಯಕಾರಿ. ಯಾಕೆಂದರೆ ಒಂದು ಕೈಯಲ್ಲಿ ಹಣ್ಣಿನ ಟ್ರೇ ಅಥವಾ ಬುಟ್ಟಿ ಹಿಡಿದು ಹತ್ತುವಾಗ ಅಥವಾ ಇಳಿಯುವಾಗ ಸ್ವಲ್ಪ ಸಮತೋಲನ ಕಳೆದುಕೊಂಡು ಬಿದ್ದರೇ ಅದಕ್ಕೆ ಚಾಲಕ, ನಿರ್ವಾಹಕ ಇಲ್ಲವೇ ನಿಯಂತ್ರಕರೇ ಹೊಣೆಗಾರ ಆಗಬೇಕಾಗುತ್ತದೆ. ಇದರ ಬಗ್ಗೆ ಸಾಕಷ್ಟು ತಿಳಿಹೇಳಿದ್ದರೂ ಪ್ರಯೋಜನವಾಗಿಲ್ಲ’ ಎಂದು ಕಳಕಳಿ ಹಾಗೂ ಅಸಹಾಯಕತೆ ವ್ಯಕ್ತಪಡಿಸಿದರು.

‘ಬಸ್‌ನಿಲ್ದಾಣ ಇನ್ನೂ ಪೂರ್ಣಗೊಂಡಿಲ್ಲ, ಯಾವುದೇ ಹಣ್ಣು ಹಾಗೂ ನೀರಿನ ಮಾರಾಟ ಮಳಿಗೆಗಳಿಲ್ಲ. ಹೀಗಾಗಿ ಮಾರಾಟಗಾರರು ಹೆಚ್ಚಿದ್ದಾರೆ. ಮೊದಲು 4ರಿಂದ 5 ಜನರಿದ್ದರು. ಈಗ ಪಟ್ಟಣದಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದವರು ಹಣ್ಣು, ನೀರು ಮಾರಾಟ ಆರಂಭಿಸಿದ್ದಾರೆ. ಸದ್ಯ ಇವರ ಸಂಖ್ಯೆ 30ಕ್ಕಿಂತ ಹೆಚ್ಚಾಗಿದೆ. ಯಾರಿಗೂ ಏನನ್ನೂ ಹೆಚ್ಚಿಗೆ ಹೇಳಲು ಬರದಂತಾಗಿದೆ. ಯಾರು ಏನೇ ಅಂದರು ಎಲ್ಲರೂ ಒಂದಾಗಿ ವಾದಿಸಲು ಬರುತ್ತಾರೆ. ಇವರನ್ನು ನಿಯಂತ್ರಿಸಲು ಬಸ್ ನಿಲ್ದಾಣದ ಕಾವಲುಗಾರನಿದ್ದರೂ ಅವನ ಮಾತಿಗೆ ಬೆಲೆ ಕೊಡದೇ ಬೇಕಾಬಿಟ್ಟಿಯಾಗಿ ಮಾರಾಟ ಮಾಡುತ್ತಾರೆ‘ ಎಂದು ಹೇಳಿದರು.

ಸಾರಿಗೆ ನಿಯಂತ್ರಕರು ಇಬ್ಬರು ಇರಬೇಕಾಗಿತ್ತು. ಈಗ ಒಬ್ಬರೇ ಇದ್ದಾರೆ ಅವರು ಸಹ ಅಸಹಾಯಕರು. ಆದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಅನಾಹುತವಾಗುವ ಮುಂಚೆ ಮಾರಾಟಗಾರರಿಗೆ ಕಡಿವಾಣ ಹಾಕಬೇಕು ಹಾಗೂ ಇನ್ನೊಬ್ಬ ಕಾವಲುಗಾರನನ್ನು ನೇಮಿಸಬೇಕು. ಜೊತೆಗೆ ನಿತ್ಯ ಸ್ಥಳೀಯ ಪೊಲೀಸ್ ಇಲಾಖೆ ಸಿಬ್ಬಂದಿ ಭೇಟಿಕೊಟ್ಟು ನಿಯಂತ್ರಿಸಬೇಕು ಎಂದು ಸಾರಿಗೆ ಸಿಬ್ಬಂದಿ ಜೋಗೂರ, ಮಹಾಂತೇಶ ಹಾಗೂ ರವಿ ರಾಠೋಡ  ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT