ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಸರ್ಕಾರಿ ಶಾಲೆಗಳತ್ತ ಮಕ್ಕಳ ಹೆಜ್ಜೆ

ಒಂದು ಮತ್ತು ಎಂಟನೇ ತರಗತಿಗೆ ಎರಡೇ ವಾರದಲ್ಲಿ 13,564 ವಿದ್ಯಾರ್ಥಿಗಳು ದಾಖಲು!
Last Updated 30 ಜೂನ್ 2021, 19:30 IST
ಅಕ್ಷರ ಗಾತ್ರ

ವಿಜಯಪುರ: ಸರ್ಕಾರಿ ಶಾಲಾ, ಕಾಲೇಜು ಎಂದರೆ ಮೂಗು ಮುರಿಯುವ ಕಾಲ ದೂರವಾಗತೊಡಗಿದೆ.

ಹೌದು,ಜಿಲ್ಲೆಯಾದ್ಯಂತ ನಡೆಯುತ್ತಿರುವ ಸರ್ಕಾರಿ ಶಾಲಾ ದಾಖಲಾತಿ ಆಂದೋಲನಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಳ್ಳಿ ಮಾತ್ರವಲ್ಲದೇ ನಗರ, ಪಟ್ಟಣ ಪ್ರದೇಶಗಳ ಪೋಷಕರು, ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ.

ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಬಹುತೇಕ ಪಾಲಕರು ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಶುಲ್ಕವನ್ನು ಭರಿಸಲಾಗದೇ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರ್ಪಡೆ ಮಾಡತೊಡಗಿದ್ದಾರೆ.

ದಾಖಲಾತಿ ಆಂದೋಲನ: ಸರ್ಕಾರಿ ಶಾಲೆಗಳಿಗೆ 1, 6 ಮತ್ತು 8ನೇ ತರಗತಿಗೆ ಮಕ್ಕಳನ್ನು ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಜೂನ್‌ 15ರಿಂದ ದಾಖಲಾತಿ ಆಂದೋಲನ ಪ್ರಾರಂಭವಾಗಿದ್ದು, ಜುಲೈ 31ರ ವರೆಗೆ ನಡೆಯಲಿದೆ ಎಂದುಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್‌.ವಿ.ಹೊಸೂರ ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ತೆರಳಿ ಮಕ್ಕಳ ಪಟ್ಟಿಯನ್ನು ಪಡೆದು ಅವರ ಮನೆಗಳಿಗೆ ತೆರಳಿ ಸರ್ಕಾರಿ ಶಾಲೆಗೆ ಒಂದನೇ ತರಗತಿಗೆ ಸೇರಿಸುವಂತೆ ಮನವೊಲಿಸುತ್ತಿದ್ದಾರೆ ಎಂದು ಹೇಳಿದರು.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚಿ ಶಾಲೆಗೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯವೂ ಆಯಾ ಶಾಲೆಗಳ ಮುಖ್ಯ ಶಿಕ್ಷಕರ ನೇತೃತ್ವದಲ್ಲಿ ನಡೆದಿದೆ ಎಂದರು.

ಜೂನ್‌ 15ರಿಂದ 29ರ ವರೆಗೆ ಜಿಲ್ಲೆಯ ವಿವಿಧ ಸರ್ಕಾರಿಪ್ರಾಥಮಿಕ ಶಾಲೆಗಳಿಗೆ ಒಂದನೇ ತರಗತಿಗೆ 5883 ಬಾಲಕರು, 5378 ಬಾಲಕಿಯರು ಸೇರಿದಂತೆ ಒಟ್ಟು 11,061 ವಿದ್ಯಾರ್ಥಿಗಳು ಹಾಗೂಸರ್ಕಾರಿ ಪ್ರೌಢಶಾಲೆಗಳಿಗೆ 8ನೇ ತರಗತಿಗೆ 1153 ಬಾಲಕರು ಮತ್ತು 1350 ಬಾಲಕಿಯರು ಸೇರಿದಂತೆ ಒಟ್ಟು 2503 ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳೇ ಉತ್ತಮ: ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿಜಯಪುರ ನಗರದ ತಿಮ್ಮಪ್ಪ ನಾಯ್ಕ, ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಸಮವಸ್ತ್ರ, ಬಿಸಿಯೂಟ, ವಿದ್ಯಾರ್ಥಿವೇತನ, ಉಚಿತ ಪಠ್ಯಪುಸ್ತಕ ಲಭಿಸುತ್ತಿದೆ. ಜೊತೆಗೆ ವಿದ್ಯಾರ್ಥಿಗಳ ಮೇಲೆ ಹೋಂ ವರ್ಕ್‌ ಒತ್ತಡವಿಲ್ಲ. ಪೋಷಕರ ಜೇಬಿಗೆ ಕತ್ತರಿಯಿಲ್ಲ. ಗುಣಮಟ್ಟದ ಶಿಕ್ಷಣವೂ ಲಭಿಸುತ್ತಿದೆ. ಹೀಗಾಗಿ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದೇ ಉತ್ತಮ ಎಂದು ಹೇಳಿದರು.

‘ಸದ್ಯದ ಕೋವಿಡ್‌ ಸಂದರ್ಭದಲ್ಲಿ ಎರಡು ವರ್ಷದಿಂದ ಶಾಲಾ ತರಗತಿಗಳು ನಡೆಯುತ್ತಿಲ್ಲ. ಆದರೂ ಪೂರ್ಣ ಶುಲ್ಕ ಕಟ್ಟಿ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಯಿಂದ ಒತ್ತಡ ಹೆಚ್ಚುತ್ತಿದೆ. ದುಡಿಮೆ ಇಲ್ಲದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೇವೆ. ಹೀಗಿರುವಾಗ ದುಬಾರಿ ಶುಲ್ಕ ಕಟ್ಟುವುದು ಕಷ್ಟವಾಗುತ್ತಿದೆ. ಕಾರಣ ಬಡ, ಮಧ್ಯಮ ವರ್ಗದವರಿಗೆ ಸರ್ಕಾರಿ ಶಾಲೆಗಳೇ ಉತ್ತಮ’ ಎಂದು ಪೋಷಕ ನಾರಾಯಣ ಹೂಗಾರ ಅಭಿಪ್ರಾಯಪಟ್ಟರು.

*
ಜಿಲ್ಲೆಯ ಅನೇಕ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಸಹ ಸರ್ಕಾರಿ ಶಾಲೆಗಳಿಗೆ ದಾಖಲಾಗತೊಡಗಿದ್ದಾರೆ. ಶಾಲಾ ದಾಖಲಾತಿ ಆಂದೋಲನಕ್ಕೆ ವಿದ್ಯಾರ್ಥಿ, ಪೋಷಕರಿಂದ ಹೋದ ವರ್ಷಕ್ಕಿಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
–ಎನ್‌.ವಿ.ಹೊಸೂರ,ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT