ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯೆ ಮೀನಾಕ್ಷಿ ಜತೆ ಸಿಎಂ ಯಡಿಯೂರಪ್ಪ ಸಮಾಲೋಚನೆ

ಮಾನವೀಯತೆ ನೆಲೆಗಟ್ಟಿನಲ್ಲಿ ಚಿಕಿತ್ಸೆ ನೀಡಲು ಸಲಹೆ
Last Updated 15 ಮೇ 2021, 16:47 IST
ಅಕ್ಷರ ಗಾತ್ರ

ವಿಜಯಪುರ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೋವಿಡ್ ಚಿಕಿತ್ಸೆಯಲ್ಲಿ ನಿರತ ವೈದ್ಯರ ಜತೆ ಶನಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವರ್ಚುವಲ್ ಸಭೆ ಮೂಲಕ ಸಮಾಲೋಚನೆ ನಡೆಸಿದರು.

ಕೋವಿಡ್-19 ಚಿಕಿತ್ಸೆಯಲ್ಲಿ ನಿರತವಾಗಿರುವ ವಿಜಯಪುರದ ಡಾ.ಮೀನಾಕ್ಷಿ ಮುತ್ತಪ್ಪನವರ ಈ ವರ್ಚುವಲ್ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.

ಎಷ್ಟು ದಿನಗಳಿಂದ ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದೀರಿ ಎಂಬ ಮುಖ್ಯಮಂತ್ರಿಗಳ ಪ್ರಶ್ನೆಗೆ ಉತ್ತರಿಸಿದ ಮೀನಾಕ್ಷಿ ಮುತ್ತಪ್ಪನವರ, ಕಳೆದ ವರ್ಷ ಕೋವಿಡ್ ಪ್ರಾರಂಭದ ದಿನದಿಂದ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನದ 6 ಗಂಟೆಗಳ ಕಾಲ ಸರದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದರು.

ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದು, ರಕ್ತವನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಿ ಬಂದಂತಹ ವರದಿ ಆಧರಿಸಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವುದು, ಹಗಲು ಹಾಗೂ ರಾತ್ರಿ ವೇಳೆಯಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದರು.

ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದೀರಾ ಎಂಬ ಮುಖ್ಯಮಂತ್ರಿಗಳ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಶೀಲ್ಡ್ ವ್ಯಾಕ್ಸಿನ್ ಅನ್ನು ನಾಲ್ಕು ತಿಂಗಳ ಹಿಂದೆ ತೆಗೆದುಕೊಂಡಿದ್ದು, 2 ಡೋಸ್ ಪಡೆದಿರುವುದಾಗಿ ತಿಳಿಸಿದರು.

ನೀವು ಕರೋನಾ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೀರಿ, ಮನೆಯಲ್ಲಿ ಹೇಗೆ ಇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮೀನಾಕ್ಷಿ, ಮನೆಯಲ್ಲಿ ಐಸೋಲೇಷನ್‌ನಲ್ಲಿದ್ದು ಪ್ರತ್ಯೇಕ ಕೊಠಡಿಯತಲ್ಲಿ ಒಬ್ಬರೇ ಇರುವುದಾಗಿ ಹೇಳಿದರು.

ಆಸ್ಪತ್ರೆಯಿಂದ ಬಂದ ಕೂಡಲೇ ಸ್ಯಾನಿಟೈಸರ್ ಮಾಡಿಕೊಂಡು ಸ್ನಾನ ಮಾಡಿ, ನಂತರ ಒಬ್ಬರೇ ಅಡುಗೆಯನ್ನು ಮಾಡಿಕೊಳ್ಳುವುದಾಗಿ ಹೇಳಿದರು.

ಮನೆಯ ಸದಸ್ಯರಿಂದ ಅಂತರವನ್ನು ಕಾಯ್ದುಕೊಂಡು ಒಬ್ಬರೇ ಮುನ್ನೆಚ್ಚರಿಕೆಯಿಂದ ಇರುವುದಾಗಿ ತಿಳಿಸಿದರು.

ವೈದ್ಯಕೀಯ ಸಿಬ್ಬಂದಿ ಅಮೂಲ್ಯ ಆಸ್ತಿ:

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಅಪಾಯವನ್ನು ಲೆಕ್ಕಿಸದೇ ಕಾರ್ಯದ ಒತ್ತಡದ ಮಧ್ಯೆಯೂ ನಿರಂತರವಾಗಿ ಕೆಲಸ ಮಾಡುತ್ತಿರುವ ವೈದ್ಯರು, ನರ್ಸ್ ಸೇರಿದಂತೆ ಎಲ್ಲ ವೈದ್ಯಕೀಯ ಸಿಬ್ಬಂದಿ ನಮ್ಮ ಅಮೂಲ್ಯ ಆಸ್ತಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದರು.

ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಸರ್ಕಾರ ಬದ್ಧವಿದೆ. ಸೋಂಕು ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ವೈದ್ಯರು ಮಾನವೀಯತೆ ನೆಲೆಗಟ್ಟಿನಲ್ಲಿ ಕೆಲಸ ಮಾಡುವ ಮೂಲಕ ಸೋಂಕಿತರು ಹಾಗೂ ತಮ್ಮ ಜೀವ ರಕ್ಷಣೆಗೆ ಮುಂದಾಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT