ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ವಿಶೇಷ ಅಧಿವೇಶನ ನಡೆಸಿ: ವಿಧಾನ ಪರಿಷತ್‌ ಸದಸ್ಯ ಪ್ರಕಾಶ ರಾಠೋಡ

ಕೋವಿಡ್‌ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ; ಶ್ವೇತಪತ್ರ ಹೊರಡಿಸಲು ಆಗ್ರಹ
Last Updated 1 ಜುಲೈ 2020, 8:55 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್‌ ನಿರ್ವಹಣೆಗೆ ರಾಜ್ಯ ಸರ್ಕಾರ ಇದುವರೆಗೆ ಕೈಗೊಂಡಿರುವ ಕ್ರಮಗಳೇನು, ಎಷ್ಟು ಹಣ ಖರ್ಚು ಮಾಡಿದೆ ಮತ್ತು ವೈದ್ಯರು, ಆರೋಗ್ಯ ಸಿಬ್ಬಂದಿಗೆ ಏನೆಲ್ಲ ಮೂಲ ಸೌಲಭ್ಯ ಕಲ್ಪಿಸಿದೆ ಎಂಬುದರ ಕುರಿತು ಶ್ವೇತಪತ್ರ ಹೊರಡಿಸಬೇಕು ಹಾಗೂ ಈ ಬಗ್ಗೆ ಚರ್ಚಿಸಲು ಬೆಳಗಾವಿಯಲ್ಲಿ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಬೇಕು ಎಂದು ವಿಧಾನ ಪರಿಷತ್‌ ಸದಸ್ಯ, ಪ್ರಕಾಶ ರಾಠೋಡ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದರು.

ಬಳ್ಳಾರಿಯಲ್ಲಿ ಕೋವಿಡ್‌ನಿಂದ ಸತ್ತವರನ್ನು ಗೌರವಯುತವಾಗಿ ಸಂಸ್ಕಾರ ಮಾಡವಲ್ಲೂ ರಾಜ್ಯ ಸರ್ಕಾರಕ್ಕೆ ಸಾಧ್ಯವಾಗದೇ ಶವಗಳನ್ನು ಗುಂಡಿಗೆ ಎಸೆದು ಅವಮಾನ ಮಾಡಿರುವುದು ಖಂಡನೀಯ ಎಂದರು.

ಕೇಂದ್ರ ವಿಫಲ:ಪ್ರಧಾನಿ ಮೋದಿ ಅವರ ಆಡಳಿತಾವಧಿಯಲ್ಲಿ ದೇಶದ ಅರ್ಥ ವ್ಯವಸ್ಥೆ ಸಂಪೂರ್ಣ ಕುಸಿದುಹೋಗಿದೆ. ವಿದೇಶಾಂಗ ನೀತಿ ಅನುಷ್ಠಾನದಲ್ಲೂ ವಿಫಲವಾಗಿದೆ. ಪರಿಣಾಮ ನೆರೆಹೊರೆಯ ದೇಶಗಳ ಬಾಂಧವ್ಯ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದರು.

ಜಿಡಿಪಿ ಮೈನಸ್‌ನತ್ತ ಸಾಗಿದೆ. ಪೆಟ್ರೋಲ್‌, ಡೀಸೆಲ್‌ ದರ ಹಿಂದೆಂದೂ ಕಾಣದಷ್ಟು ಏರಿಕೆಯಾಗಿದೆ. ಪರಿಣಾಮ ಬಡವರು, ಮಧ್ಯಮ ವರ್ಗದವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಕೋವಿಡ್‌ ಸಂಕಷ್ಟ ನಿವಾರಣೆಗಾಗಿ ₹20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ. ಆದರೆ, ಇದುವರೆಗೂ ಇದರ ಪ್ರಯೋಜನ ಯಾರಿಗೂ ತಲುಪಿಲ್ಲ. ಮೋದಿ ಅವರ ಅಚ್ಛೇದಿನ್‌ ಆಯೇಗಾ ಎಂಬುದು ಸುಳ್ಳಿನ ಕಂತೆ ಎಂದು ಟೀಕಿಸಿದರು.

ನೋಟು ರದ್ಧತಿಯಿಂದ ಕಾಂಗ್ರೆಸ್‌ನವರು ಸ್ವಿಸ್‌ ಬ್ಯಾಂಕಿನಲ್ಲಿ ಇಟ್ಟಿರುವ ಕಪ್ಪು ಹಣ ಹೊರತರುತ್ತೇನೆ ಎಂದು ಪ್ರಚಾರ ಮಾಡಿದರು. ಆದರೆ, ಇದುವರೆಗೂ ನಯಾಪೈಸೆ ತರಲು ಸಾಧ್ಯವಾಗಿಲ್ಲ. ಚುನಾವಣೆಯಲ್ಲಿ ಜನಸಾಮಾನ್ಯರಿಗೆ ನೀಡಿದ್ದ ಯಾವೊಂದು ಭರವಸೆಯೂ ಈಡೇರಿಲ್ಲ ಎಂದು ಹೇಳಿದರು.

ಬಿಜೆಪಿಗೆ ತಕ್ಕ ಪಾಠ:ವಿಜಯಪುರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಸಂದರ್ಭದಲ್ಲಿ ಆಪರೇಷನ್‌ ಕಮಲದ ಮೂಲಕಕಾಂಗ್ರೆಸ್‌ನ ಮೂವರು ಸದಸ್ಯರನ್ನು ಸೆಳೆದಿದ್ದ ಬಿಜೆಪಿಯ ತಂತ್ರಕ್ಕೆ ಪ್ರತಿಯಾಗಿ ಆ ಪಕ್ಷದ ನಾಲ್ವರು ಸದಸ್ಯರನ್ನು ಕಾಂಗ್ರೆಸ್‌ಗೆ ಸೆಳೆಯುವ ಮೂಲಕ ತಕ್ಕ ಪಾಠ ಕಲಿಸಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT