ವಿಜಯಪುರ: ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ

ವಿಜಯಪುರ: ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಯೋಜನೆ ವತಿಯಿಂದ ನಗರದ ಸಿದ್ಧೇಶ್ವರ ದೇವಸ್ಥಾನ, ಶಂಕರಲಿಂಗ ದೇವಸ್ಥಾನ, ಅಂಬಾ ಭವಾನಿ ದೇವಸ್ಥಾನ, ವಜ್ರ ಹನುಮಾನ್ ನಗರ ಮತ್ತು ರಾಘವೇಂದ್ರ ಮಠ ಎದುರು ಶುಕ್ರವಾರ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಜ್ಞಾನ ಯೋಗಾಶ್ರಮ ಬಸವಲಿಂಗ ಸ್ವಾಮೀಜಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕೆಲಸ ಭರದಿಂದ ಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶಾದ್ಯಂತ ನಿಧಿ ಸಮರ್ಪಣಾ ಅಭಿಯಾನ ಕೈಗೊಳ್ಳಲಾಗಿದೆ. ಇದಕ್ಕೆ ಪ್ರತಿಯೊಬ್ಬ ಹಿಂದು ಸಮರ್ಪಣಾ ಮನೋಭಾವದಿಂದ ತೊಡಗಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಯೋಜನೆಯ ವಿಜಯಪುರ ವಿಭಾಗ ಪ್ರಚಾರಕರಾದ ದಯಾನಂದಜಿ, 2.7 ಎಕರೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. 67 ಎಕರೆ ಪ್ರಮುಖ ಪ್ರದೇಶದಲ್ಲಿ ಇತರ ಕಟ್ಟಡಗಳು ನಿರ್ಮಾಣವಾಗಲಿದೆ ಎಂದರು.
ಭಕ್ತರ ದೇಣಿಗೆಯಿಂದ ರಾಮ ಜನ್ಮಭೂಮಿಯಲ್ಲಿ ದಿವ್ಯ, ಭವ್ಯ ಮಂದಿರ ನಿರ್ಮಾಣ ಆಗುತ್ತಿದೆ. ಈ ಅಭಿಯಾನ ಹಾಗೂ ಮಂದಿರ ನಿರ್ಮಾಣ ಕೇವಲ ಮತ್ತೊಂದು ನಿರ್ಮಾಣದಂತೆ ಅಲ್ಲ. ಇದು ಜಾಗೃತ ಹಿಂದೂ ಶಕ್ತಿಯ ಪುನರುತ್ಥಾನದ ಸಂಕೇತವಾಗಿದೆ ಎಂದು ಹೇಳಿದರು.
ಸಮಾಜವನ್ನು ಮೇಲು ಕೀಳು, ಎಂಬ ಭಾವನೆಗಳಿಂದ ಮುಕ್ತಗೊಳಿಸುವ, ಬಡತನ, ಆರೋಗ್ಯ, ಶಿಕ್ಷಣ, ಕೌಶಲದ ನ್ಯೂನತೆಗಳನ್ನು ನಿರ್ಮೂಲನೆ ಮಾಡುವ, ಮಹಿಳೆಯರ ಘನತೆಯನ್ನು ಮರು ಸ್ಥಾಪಿಸುವ, ಭಯೋತ್ಪಾದನೆಯ ಉಪದ್ರವವನ್ನು ನಿರ್ಮೂಲನೆ ಮಾಡುವ, ವೇದದ ಮಾತಿನಂತೆ ‘ಎಲ್ಲರೂ ಸಂತೋಷವಾಗಿರಲಿ, ಎಲ್ಲರೂ ಆರೋಗ್ಯವಾಗಿರಲಿ, ಯಾರೂ ದುಃಖದಿಂದ ಬಳಲದಿರಲಿ’ ಎಂಬ ಉದ್ದೇಶದಿಂದ ಕೂಡಿದೆ ಎಂದು ಹೇಳಿದರು.
ಅಯೋಧ್ಯೆಯಲ್ಲಿನ ಮಂದಿರ ನಿರ್ಮಾಣಕ್ಕೆ ಅನುವಾಗುವಂತೆ ದೇಶದ 4 ಲಕ್ಷ ಹಳ್ಳಿಗಳನ್ನು 12 ಕೋಟಿ ಕುಟುಂಬಗಳನ್ನು ತಲುಪಲಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 27,500 ಹಳ್ಳಿಗಳನ್ನು ತಲುಪುವ ಯೋಜನೆಯನ್ನು ವಿಶ್ವಹಿಂದೂ ಪರಿಷತ್ ಹಾಕಿಕೊಂಡಿದೆ ಎಂದರು.
ಅಯೋಧ್ಯೆಯಲ್ಲಿನ ಐತಿಹಾಸಿಕ ಶ್ರೀರಾಮ ಮಂದಿರದ ನಿರ್ಮಾಣಕ್ಕಾಗಿ ರಾಮ ಭಕ್ತರ ಎಂಟು ತಂಡ ₹10, ₹100 ಮತ್ತು ₹1 ಸಾವಿರ ಮೊತ್ತದ ಮುದ್ರಿತ ಕೂಪನ್ಗಳ ಸಹಾಯದಿಂದ ಮನೆ ಮನೆಗೆ ತೆರಳಿ ಧನ ಸಂಗ್ರಹ ಮಾಡಲಿದೆ ಎಂದು ಹೇಳಿದರು.
ಆರ್.ಎಸ್.ಎಸ್.ಎಸ್.ನ ನಗರ ಕಾರ್ಯವಾಹ ಸಂಜೀವ ಜೋಶಿ, ವಿಶ್ವ ಹಿಂದು ಪರಿಷತ್ನ ಜಿಲ್ಲಾಧ್ಯಕ್ಷ ಬಸಯ್ಯ ಹಿರೇಮಠ, ಪ್ರಾಂತ ಪ್ರಚಾರ ಪ್ರಮುಖ ಸುನೀಲ ಭೈರವಾಡಗಿ ಮಾತನಾಡಿದರು.
ಕಾತ್ರಾಳದ ಅಮೃತಾನಂದ ಸ್ವಾಮೀಜಿ, ಶ್ರದ್ಧಾನಂದ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ವಿಭಾಗ ಪ್ರಮುಖರಾದ ರಾಮಸಿಂಗ್ ಹಜೇರಿ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮುಖಂಡರಾದ ಸಂಕೇತ ಬಗಲಿ, ಉಮೇಶ ಕಾರಜೋಳ, ಪವನ ಜೋಶಿ, ಚಂದ್ರಶೇಖರ ಕವಟಗಿ, ಭೀಮಾಶಂಕರ ಹದನೂರ, ವಿವೇಕಾನಂದ ಡಬ್ಬಿ, ಅಶೋಕ ಕೊಡಗಾನೂರ, ಶಿವರುದ್ರ ಬಾಗಲಕೋಟ, ಅಶೋಕ ಹಾವಣ್ಣವರ, ಸಿದ್ದು ಕರಲಗಿ, ಗುರು ಗಚ್ಚಿನಮಠ, ವಿಜಯ ಜೋಶಿ, ವಿಕಾಸ ಪದಕಿ, ಗೋಪಾಲ ಘಟಕಾಂಬಳೆ, ರಾಜು ಮಗಿಮಠ, ಬಸವರಾಜ ಹುಣಶ್ಯಾಳ, ಲಕ್ಷ್ಮೀ ಹೂಗಾರ, ರವಿಕಾಂತ ಬಗಲಿ, ಮಾತೃಶಕ್ತಿಯ ಭುವನೇಶ್ವರಿ ಕೋರವಾರ, ಭಾರತಿ ಭುಂಯ್ಯಾರ, ಮಲ್ಲಮ್ಮ ಜೋಗುರ, ಭರತ ಕೋಳಿ, ಗೋವಿಂದ ದಶವಂತ, ಪ್ರವೀಣ ಭಾತಕಂಡಿ, ದಾನಯ್ಯ, ಮನೋಜ ಗಿರಗಾಂವಿ, ಕೇಶವ ತೋಳಬಂದಿ, ನೀಲಕಂಠ ವಾಲೀಕಾರ, ಪಾಪುಸಿಂಗ ರಜಪೂತ, ಸಂಗಮೇಶ ಬಿರಾದಾರ ಭಾಗವಹಿಸಿದ್ದರು.
ವಿಜಯಪುರ ಜಿಲ್ಲೆಯ ಗ್ರಾಮೀಣ ಭಾಗದಿಂದ ಆಗಮಿಸಿದ ವಿಠ್ಠಲನ ಸಂತ ಭಕ್ತಾದಿಗಳಿಂದ ಇಬ್ರಾಹಿಂಪುರ ರೇಲ್ವೆ ಗೇಟ್ನಿಂದ ಜಲನಗರ ವರೆಗೆ ಸಂಕೀತನಾ ಯಾತ್ರೆ ಮಾಡಲಾಯಿತು.
***
ನೂರಾರು ವರ್ಷಗಳ ಕನಸು, ಲಕ್ಷಾಂತರ ಜನರ ತ್ಯಾಗ, ಬಲಿದಾನದ ಪ್ರತಿಫಲದಿಂದಾಗಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಎಲ್ಲರೂ ನಿಧಿ ಸಮರ್ಪಣೆ ಮಾಡಬೇಕು
- ಬಸವಲಿಂಗ ಸ್ವಾಮೀಜಿ, ಜ್ಞಾನ ಯೋಗಾಶ್ರಮ, ವಿಜಯಪುರ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.