ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರದಲ್ಲಿ ಭೀಕರ ಸ್ವರೂಪ ಪಡೆದ ಕೋವಿಡ್

ಒಂದೇ ದಿನ 282 ಜನರಿಗೆ ಸೋಂಕು ದೃಢ
Last Updated 17 ಏಪ್ರಿಲ್ 2021, 14:55 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ಶನಿವಾರ 282 ಜನರಲ್ಲಿ ಕೋವಿಡ್‌ ಸೋಂಕು ದೃಢವಾಗಿದೆ. ಜಿಲ್ಲೆಯ ಇದುವರೆಗೆ ದಾಖಲಾಗಿರುವ ಅಂಕಿ–ಅಂಶಗಳ ಪ್ರಕಾರ ಒಂದೇ ದಿನದಲ್ಲಿ ಅತಿ ಹೆಚ್ಚು ಜನರಿಗೆ ಕೋವಿಡ್‌ ಕಾಣಿಸಿಕೊಂಡಿರುವುದು ಇದೇ ಮೊದಲಾಗಿದೆ.

ವಿಜಯಪುರ ನಗರದಲ್ಲಿ 184, ವಿಜಯಪುರ ಗ್ರಾಮೀಣ 30, ಮುದ್ದೇಬಿಹಾಳ 26 ಜನರಲ್ಲಿ ಶನಿವಾರ ಕೋವಿಡ್‌ ಪಾಸಿಟಿವ್‌ ಪತ್ತೆಯಾಗಿದೆ. ಉಳಿದಂತೆ ಪ್ರತಿ ತಾಲ್ಲೂಕಿನಲ್ಲೂ 2ರಿಂದ 10ರ ವರೆಗೆ ಪ್ರಕರಣಗಳು ವರದಿಯಾಗಿವೆ.

ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ಅಧಿಕ ಹಣ ವಸೂಲಿ ಮಾಡುವ ಮೂಲಕ ರೋಗಿಗಳ ಶೋಷಣೆಯಲ್ಲಿ ನಿರತವಾಗಿವೆ ಎಂಬ ಆರೋಪವೂ ಕೇಳಿಬಂದಿದೆ. ಜೊತೆಗೆ ಕೋವಿಡ್‌ ಲಸಿಕೆ ಕೊರತೆಯೂ ಎದುರಾಗಿದೆ.

ಜಿಲ್ಲೆಯಲ್ಲಿ ಕೋವಿಡ್‌ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದ್ದರೂ ಜನರು ತೀವ್ರ ನಿರ್ಲಕ್ಷ್ಯ ವಹಿಸಿರುವುದು ಕಂಡುಬರುತ್ತಿದೆ. ಮಾಸ್ಕ್‌ ಧರಿಸದೇ ಸಭೆ, ಸಮಾರಂಭ, ಸಂತೆ, ಮಾರುಕಟ್ಟೆಯಲ್ಲಿ ಗುಂಪುಗೂಡುತ್ತಿದ್ದಾರೆ.

ಪರಿಸ್ಥಿತಿ ನಿಭಾಯಿಸಲು ಮನವಿ

‘ಜಿಲ್ಲೆಯಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದ್ದರೂ ಜನರಿಗೆ ಅರಿವಿಲ್ಲದಂತೆ ವರ್ತಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಪರಿಸ್ಥಿತಿ ಕೈಮೀರಿದೆ. ಕೋವಿಡ್‌ನಿಂದ ಯಾರಿಗೆ ತೊಂದರೆಯಾಗಿದೆಯೋ ಅವರಿಗೆ ಮಾತ್ರ ಅರಿವಿದೆ. ಖಾಸಗಿ ಆಸ್ಪತ್ರೆಗೆ ಹೋದರೂ ಬೆಡ್‌ ಇಲ್ಲ, ಆಕ್ಸಿಜನ್‌ ಇಲ್ಲ ಎಂದು ಹೇಳುತ್ತಾರೆ. ಉಸಿರಾಟ ತೊಂದರೆಯಿಂದ ಬಳಲುತ್ತಿರುವವರಿಗೆ ರೆಮಡಿಶ್ಯೂರ್‌ ಔಷಧ ನೀಡಬೇಕಾಗುತ್ತದೆ. ಆದರೆ, ಆಸ್ಪತ್ರೆಗಳು ರೆಮಿಡಿಶ್ಯೂರ್‌ ಇಲ್ಲ ಎನ್ನುತ್ತಾರೆ. ₹ 12 ಸಾವಿರದಿಂದ ₹16 ಸಾವಿರ ಎಂದು ಹೇಳುತ್ತಾರೆ. ಜಿಲ್ಲಾಡಳಿತ ತಕ್ಷಣ ಇತ್ತ ಗಮನ ಹರಿಸಬೇಕು’ ಎಂದು ವಿಜಯಪುರದ ಶಿವಾನಂದ ಬುಯ್ಯಾರ ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ರೋಗಿಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನಿಯಂತ್ರಣಕ್ಕೆ ಕ್ರಮ

ನಮ್ಮ ಜಿಲ್ಲೆಯಲ್ಲಿ ಕೋವಿಡ್ 19 ಸಾಂಕ್ರಾಮಿಕ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕಾಗಿ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಹೇಳಿದರು.

ಕಂದಾಯ ಸಚಿವ ಆರ್.ಅಶೋಕ್, ಗೃಹಸಚಿವ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ನೇತೃತ್ವದ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

ವಿಜಯಪುರ ಮಹಾರಾಷ್ಟ್ರದ ಗಡಿ ಪ್ರದೇಶ ಜಿಲ್ಲೆಯಾದ್ದರಿಂದ ಗಡಿ ಹಂಚಿಕೊಂಡಿರುವ ಹಳ್ಳಿ ಮತ್ತು ಚೆಕ್ ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ವ್ಯಾಕ್ಸಿನ್ ಮತ್ತು ಆಮ್ಲಜನಕ ಅಗತ್ಯ ಪ್ರಮಾಣದಲ್ಲಿ ಲಭ್ಯವಿದೆ. ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಎಲ್ಲ ರೀತಿಯಿಂದಲೂ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ವಿಡಿಯೊ ಸಂವಾದದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕಳಸದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜಕುಮಾರ್ ಯರಗಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT