ಭಾನುವಾರ, ಜೂನ್ 13, 2021
29 °C

ಗೆದ್ದು ಬಂದವರು | ಕೋವಿಡ್ ಸಾಯಿಸಿ ಮೃತ್ಯುಂಜಯನಾಗಿರುವೆ

ಶಾಂತೂ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಸಿಂದಗಿ: ‘12 ದಿನಗಳ ಕಾಲ ಕೋವಿಡ್ ಜೊತೆಗೆ ಹೋರಾಟ ಮಾಡಿ ಅದನ್ನೇ ಸಾಯಿಸಿ ನಾನು ಮೃತ್ಯುಂಜಯನಾಗಿ ಮನೆಗೆ ಮರಳಿದೆ. ನಾನು ತುಂಬಾ ಧೈರ್ಯವಂತನಾಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸಿರುವೆ’ ಎಂದು ಕೋವಿಡ್‌ನಿಂದ ಗುಣಮುಖನಾಗಿರುವೆ ಎಂದು ಕೋರವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಮಹಮ್ಮದ್‌ ಇಕ್ಬಾಲ್‌ ಮೋತಿಬಾಯಿ ಹೇಳಿದರು.

‘ನನ್ನ ದೋಸ್ತನ ಮಗನ ಅಡ್ಮಿಷನ್‌ಗಾಗಿ ದೊಡ್ಡಬಳ್ಳಾಪುರಕ್ಕೆ ಹೋಗಿದ್ದೆ, ಅಲ್ಲಿಂದ ಬೆಂಗಳೂರಿಗೆ ಬಸ್‌ನಲ್ಲಿ ಸಂಚಾರ ಮಾಡಿದ್ದೆ. ಅಲ್ಲಿಂದ ನನ್ನೂರು ಕೋರವಾರಕ್ಕೆ ಬಂದೆ. ಬೆಳಿಗ್ಗೆ ಎಂದಿನಂತೆ ಇಬ್ರಾಹಿಂಪುರ ಗ್ರಾಮಕ್ಕೆ ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ. ಅಂದೇ ಮೈ ಸಿಡಿ, ಸಿಡಿ ಆಗಿ ಜ್ವರ ಬಂದವು. ಕೆಲವೇ ಗಂಟೆಗಳಲ್ಲಿ ನಿತ್ರಾಣ ಆಗಿ ಬಿಟ್ಟೆ. ಅಲ್ಲಿಯೇ ಇದ್ದ ಅಂಗನವಾಡಿ ಕಾರ್ಯಕರ್ತೆ ತುರ್ತಾಗಿ ಗುಳಿಗಿ ಕೊಟ್ಟು ಮಲಗಿಸಿದರು. ಮರು ದಿನ ಕೋವಿಡ್ ತಪಾಸಣೆ ಮಾಡಿಸಿಕೊಂಡೆ ನಂತರದ ದಿನವೇ ಪಾಸಿಟಿವ್ ದೃಢಪಟ್ಟಿತು. ರಾತ್ರಿ 12.30ಕ್ಕೆ ತಡಮಾಡಿ ಕೋವಿಡ್ ಆಂಬುಲೆನ್ಸ್‌ ಬಂತು. ಮಧ್ಯರಾತ್ರಿ ವಿಜಯಪುರ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿದರು’ ಎಂದು ಹೇಳಿದರು.

‘ಆಗಲೇ ಗಂಭೀರ ಲಕ್ಷಣ ಕಾಣಲಾರಂಭಿಸಿತು. ಉಸಿರಾಟ ತೊಂದರೆ ಹೆಚ್ಚಿತು. ನನ್ನ ದುರಾದೃಷ್ಟವೆಂಬಂತೆ ಆಸ್ಪತ್ರೆಯಲ್ಲಿ ಯಾವ ಸಿಬ್ಬಂದಿ ಇರಲಿಲ್ಲ. ಆಗ ತ್ರಾಸು ತಡೆಯಲಾಗದೇ ಆಸ್ಪತ್ರೆ ಸರ್ಜನ್ ಅವರಿಗೆ ಕಾಲ್ ಮಾಡಿ ನೋವು ತೋಡಿಕೊಂಡೆ ತಕ್ಷಣವೇ ವೆಂಟಿಲೇಟರ್ ವ್ಯವಸ್ಥೆ ಮಾಡಿದರು. ಆದಾಗ್ಯೂ ಉಸಿರಾಟ ತೊಂದರೆ ಕಡಿಮೆಯಾಗಲಿಲ್ಲ. ಮತ್ತೆ ಸಿಂದಗಿ ತಾಲ್ಲೂಕು ಆರೋಗ್ಯಾಧಿಕಾರಿಗೆ ಫೋನ್ ಮಾಡುತ್ತಲೆ ಅವರು ಜಿಲ್ಲಾ ಆರೋಗ್ಯಾಧಿಕಾರಿಗೆ ತಿಳಿಸಿದಾಗ ಸ್ಪೇಷಲ್ ವಾರ್ಡ್‌ಗೆ ಸೇರಿಸಿದರು. ಅಲ್ಲೂ ಅದೇ ತೊಂದರೆ ಮುಂದುವರೆಯಿತು. ನಂತರ ಐಸಿಯುಗೆ ಶಿಫ್ಟ್ ಮಾಡಿದರು. ಸಿಟಿ ಸ್ಕ್ಯಾನ್, ಎಕ್ಸರೇ ಮಾಡಿಸಿದರು. ನನಗೆ ಸಾವಿನ ಭಯ ಕಾಡಲು ಪ್ರಾರಂಭಿಸಿತು. ಬದುಕೋದೆ ಇಲ್ಲ ಅನ್ನೋ ಆತಂಕ ಇನ್ನೂ ಹೆಚ್ಚಿತು. ಅಷ್ಟಾದರೂ ಧೈರ್ಯಗೆಡಲಿಲ್ಲ. ನಾನೊಬ್ಬ ವೈದ್ಯಕೀಯ ಇಲಾಖೆ ನೌಕರ ಆಗಿದ್ದರಿಂದ ಸರ್ಜನ್‌ಗೆ ಮನವಿ ಮಾಡಿಕೊಂಡು ರೆಮೆಡಿಸಿವಿರ್ ಕೋವಿಫಾರ್ ಎಂಬ ಇಂಜೆಕ್ಷನ್ ತರಿಸಿ ಮಾಡಿಸಿ ಎಂದು ಬೇಡಿಕೊಂಡೆ. ಸತತ ಐದು ದಿನವೂ ಇಂಜೆಕ್ಷನ್ ಮಾಡಲಾಯಿತು. ಆಗ ಸ್ವಲ್ಪ ರಿಲಾಕ್ಸ್ ಅನಿಸಿತು. ಇದಿಲ್ಲದಿದ್ದರೆ ನನಗೆ ಸಾವೆ ಗತಿ ಆಗ್ತಿತ್ತು’ ಎನ್ನುತ್ತಾರೆ ಅವರು. 

‘ಉಸಿರಾಟ ಸಮಸ್ಯೆ ಹಾಗೆಯೇ ಮುಂದುವರೆದಿದ್ದರಿಂದ ಆ ಸಂದರ್ಭದಲ್ಲಿ ದುಬೈನಲ್ಲಿದ್ದ ಗೆಳೆಯ ಇಸ್ಮಾಯಿಲ್ ಒಂದು ವಿಡಿಯೋ ಕಳಿಸಿದ್ದು ನೆನಪಾಗಿ ಅದನ್ನು ನೋಡಿ ಸ್ಟೀಮ್ ವ್ಯವಸ್ಥೆಗೆ ಅಣಿಯಾದೆ ಲವಂಗ, ದಾಲಚಿನ್ನಿ, ಕರಿಮೆಣಸು ಮಿಶ್ರಣದೊಂದಿಗೆ ದಿನಕ್ಕೆ ಮೂರು ಬಾರಿ ಸ್ಟೀಮ್ ಮಾಡಿಕೊಳ್ಳುತ್ತಲೇ ತುಂಬಾ ರಿಲೀಫ್ ಅನಿಸಿತು. ಇದರಿಂದಾಗಿ ಶೇ 80 ರಷ್ಟು ರಿಕವರಿಯಾದೆ’ ಎಂದರು.

‘ವೈದ್ಯಕೀಯ ಇಲಾಖೆ ಜಿಲ್ಲಾ ಮಟ್ಟ ಮತ್ತು ತಾಲ್ಲೂಕು ಅಧಿಕಾರಿ ವರ್ಗವನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ. 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿ ಕುಟುಂಬದ ಸದಸ್ಯರೊಂದಿಗೆ ಹಾಯಾಗಿರುವೆ’ ಎಂದು ನಿಟ್ಟುಸಿರುಬಿಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು