ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಸಲು ಕಳವು: ಆತಂಕದಲ್ಲಿ ರೈತರು

ರಾತ್ರಿ ವೇಳೆ ಯಂತ್ರದೊಂದಿಗೆ ಬಂದು ರಾಶಿ ಮಾಡಿ ಕದ್ದೋಯ್ದ ಖದೀಮರು
Last Updated 7 ಫೆಬ್ರುವರಿ 2023, 15:24 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ವರ್ಷಪೂರ್ತಿ ಬೆಳೆದು ರಾಶಿಗೆ ಬಂದ ಫಸಲನ್ನು ಕಳ್ಳರು ಜಮೀನಿನಲ್ಲಿಯೇ ರಾಶಿ ಮಾಡಿಕೊಂಡು ತೆರಳುತ್ತಿರುವ ಪ್ರಕರಣಗಳು ತಾಲ್ಲೂಕಿನಲ್ಲಿ ನಡೆಯುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಕೃಷಿಕರು ಆತಂಕಕ್ಕೆ ಒಳಗಾಗುವಂತಾಗಿದೆ.

ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳಲ್ಲಿಯೇ ಇಂಥ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಕೃಷಿಕರು ಕಣ್ಣುಗೆ ಎಣ್ಣೆ ಬಿಟ್ಟುಕೊಂಡು ರಾತ್ರಿ ಕಳೆಯುವಂತಾಗಿದೆ.

ದೇವರಹಿಪ್ಪರಗಿ ಪಟ್ಟಣದ ಬಸಮ್ಮ ಬೀಳಗಿ ಎಂಬುವವರ 10 ಎಕರೆ ಎರೆ ಜಮೀನಿನಲ್ಲಿ ಬೆಳೆದು ನಿಂತು ರಾಶಿಗೆ ಬಂದ ತೊಗರಿ ಬೆಳೆಯನ್ನು ರಾತ್ರಿ ದುಷ್ಕರ್ಮಿಗಳು ಯಂತ್ರದೊಂದಿಗೆ ಬಂದು ರಾಶಿ ಮಾಡಿಕೊಂಡು ಪರಾರಿಯಾಗಿದ್ದ ಪ್ರಕರಣ ನಡೆದಿದೆ. ಅಪರಾಧಿಗಳು ಈವರೆಗೆ ಪತ್ತೆಯಾಗಿಲ್ಲ.

ಈ ಪ್ರಕರಣ ಮರೆಯುವ ಮುನ್ನವೇ ಮಣೂರ ಗ್ರಾಮದಲ್ಲಿ ಸಿದ್ಧರಾಮಪ್ಪ ಹೂಗಾರ ಮಾಲೀಕತ್ವದ 4.35 ಎಕರೆ ಜಮೀನಿನಲ್ಲಿ ಕೃಷಿಕ ಪ್ರಮೋದ ಹೂಗಾರ ಬೆಳೆದು ರಾಶಿ ಮಾಡಲು ಇಟ್ಟಿದ್ದ ಕಡಲೆ ಫಸಲನ್ನು ರಾತ್ರಿಯೇ ಅವರ ಜಮೀನಿನಲ್ಲಿ ಮಷಿನ್‌ ಮೂಲಕ ರಾಶಿ ಮಾಡಿ ಅಪಹರಿಸಿದ್ದಾರೆ. ಇದು ಎರಡನೇ ಪ್ರಕರಣವಾಗಿದೆ.

ಈ ಎರಡು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಜೊತೆಗೆ ಪೊಲೀಸ್ ಇಲಾಖೆಯು ಸಹ ಈ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು, ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರಾಶಿ ಯಂತ್ರಗಳ ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದೆ. ಆದರೆ, ಕದ್ದ ದುಷ್ಕರ್ಮಿಗಳು ಮಾತ್ರ ಯಾರೆಂದೂ ಈವರೆಗೆ ತಿಳಿದಿಲ್ಲ.

ರೈತರಿಗೆ ಸಂಬಂಧಿಸಿದ ಪಂಪ್ ಸೆಟ್, ಮೋಟಾರ್ ಕಳವು ಮಾಡಿದ ಪ್ರಕರಣಗಳು ಆಗಾಗ ನಡೆಯುತ್ತಿದ್ದವು. ಈಗ ಬೆಳೆದ ಬೆಳೆಯನ್ನೇ ರಾಶಿ ಮಾಡಿಕೊಂಡು ಕಳ್ಳತನ ಮಾಡುತ್ತಿರುವ ಪ್ರಕರಣ ಜರುಗುತ್ತಿವೆ. ಇದು ಒಳ್ಳೇಯ ಬೆಳವಣಿಗೆಯಲ್ಲ. ಈವರೆಗೆ ಬೆಳೆಗಳಿಗೆ ನೀರು ಬಿಡಲು ನಿದ್ದೆಗೆಡಬೇಕಾಗಿತ್ತು. ಈಗ ಬೆಳೆಯನ್ನು ರಾಶಿ ಮಾಡಿ ಮನೆಗೆ ತಂದು ಹಚ್ಚುವವರೆಗೆ ಕಣ್ಣುಬಿಟ್ಟು ಕಾಯುವಂತಾಗಿದೆ ಎನ್ನುತ್ತಾರೆ ರೈತ ಪ್ರತಿನಿಧಿಗಳಾದ ಅಜೀಜ್ ಯಲಗಾರ, ಸೋಮಶೇಖರ ಹಿರೇಮಠ ಹಾಗೂ ನಾಗೇಂದ್ರ ಇಂಡಿ.

ರೈತರ ಫಸಲು ಕಳವು ಪ್ರಕರಣಗಳ ಕುರಿತು ರೈತ ಸಮುದಾಯ ಎಚ್ಚೆತ್ತುಕೊಳ್ಳಬೇಕು. ಅದರಲ್ಲೂ ಎರೆ ಭೂಮಿಗಳ ಮಾಲೀಕರು ಇನ್ನೂ ಹೆಚ್ಚಿನ ನಿಗಾವಹಿಸಬೇಕು. ನೆರೆಹೊರೆಯ ಜಮೀನುಗಳಲ್ಲಿ ರಾಶಿ ಜರುಗುತ್ತಿದ್ದರೇ ಯಾರು ರಾಶಿ ಮಾಡುತ್ತಿದ್ದಾರೆ? ಅವರು ಜಮೀನಿನ ಮಾಲೀಕರೇ? ಹೌದೋ, ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಇನ್ನೂ ಪೊಲೀಸ್ ಇಲಾಖೆ ಸಹ ಈ ಎರಡು ಪ್ರಕರಣಗಳ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿ ಅಪರಾಧಿಗಳನ್ನು ಶೋಧಿಸಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಂಗಮೇಶ ಸಗರ, ತಾಲ್ಲೂಕು ಅಧ್ಯಕ್ಷ ಈರಪ್ಪ ಕುಳೇಕುಮಟಗಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ರೇಣುಕಾ ಪಾಟೀಲ ಸೇರಿದಂತೆ ಸ್ಥಳೀಯ ರೈತರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT