ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಟಾಂಗಾದಲ್ಲಿ ಡಿಸಿ ತಿರುಗಾಟ; ಸ್ಮಾರಕ ವೀಕ್ಷಣೆ

ಪ್ರವಾಸೋದ್ಯಮಕ್ಕೆ ಉತ್ತೇಜನ, ಟಾಂಗಾ ವಾಲಾಗಳಿಗೆ ಪ್ರೋತ್ಸಾಹ
Last Updated 9 ಏಪ್ರಿಲ್ 2022, 11:42 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಅಧಿಕಾರಿಗಳೊಂದಿಗೆ ಟಾಂಗಾದಲ್ಲಿ (ಜಟಕಾ ಬಂಡಿ)ಕುಳಿತು ಶನಿವಾರ ಬೆಳಿಗ್ಗೆ ನಗರವನ್ನು ಪ್ರದಕ್ಷಿಣೆ ಹಾಕುವ ಮೂಲಕ ಐತಿಹಾಸಿಕ ಪ್ರವಾಸಿತಾಣಗಳನ್ನು ವೀಕ್ಷಿಸಿದರು.

ಪ್ರವಾಸೋದ್ಯಮ ಇಲಾಖೆಯು ಹೆರಿಟೇಜ್‌ ವಾಕ್‌ ಅಂಗವಾಗಿ ನಗರದ ಮಯೂರ ಆದಿಲ್‌ಶಾಹಿ ಹೋಟೆಲ್ ಮುಂಭಾಗದಿಂದ ಆರಂಭಿಸಿದ ಟಾಂಗಾ ರೋಡ್ ಮ್ಯಾಪ್‌ಗೆ ಚಾಲನೆ ನೀಡಿದ ಅವರು,ವಿಶ್ವ ಪ್ರಸಿದ್ಧ ಗೋಳಗುಮ್ಮಟ, ಜಾಮೀಯಾ ಮಸೀದಿ, ಬಾರಾ ಕಮಾನ್, ಜೋಡು ಗುಮ್ಮಟ, ತಾಜ್ ಬಾವಡಿ, ಇಬ್ರಾಹಿಂರೋಜಾ, ಉಪಲಿ ಬುರ್ಜ್, ಸಿದ್ದೇಶ್ವರ ಗುಡಿಗೆ ಟಾಂಗಾದಲ್ಲಿ ತೆರಳಿ, ವೀಕ್ಷಿಸಿದರು.

ಪ್ರವಾಸೋದ್ಯಮವನ್ನು ಉತ್ತೇಜಿಸುವ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಟಾಂಗಾ ವಾಲಾ ಅವರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಅವರು ಟಾಂಗಾದಲ್ಲಿ ತಿರುಗಾಡಿದರು.

ಈ ಸಂದರ್ಭದಲ್ಲಿಟಾಂಗಾವಾಲಾಗಳ ಸಮಸ್ಯೆ ಆಲಿಸಿದ ಅವರು, ಪ್ರವಾಸಿತಾಣಗಳ ಬಳಿ ಪ್ರತ್ಯೇಕ ಟಾಂಗಾ ನಿಲ್ದಾಣಕ್ಕೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

ನಗರಕ್ಕೆ ಭೇಟಿ ನೀಡುವ ಪ್ರವಾಸಿಗರು ಟಾಂಗಾದಲ್ಲಿ ಸಂಚರಿಸುವ ಮೂಲಕ ಪ್ರವಾಸಿತಾಣಗಳನ್ನು ವೀಕ್ಷಿಸುವಂತೆ ಕೋರಿದರು. ಪ್ರವಾಸಿಗರನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಟಾಂಗಾ ವಾಲಾ ಅವರನ್ನು ಈ ಮೂಲಕ ಪ್ರೋತ್ಸಾಹಿಸಬೇಕು ಎಂದರು.

ನಾನೂ ಸಹ ಪ್ರಥಮ ಬಾರಿಗೆ ಟಾಂಗಾದಲ್ಲಿ ಕುಳಿತು ಪ್ರಯಾಣ ಮಾಡಿದ್ದು, ಇದೊಂದು ಹೊಸ ಅನುಭವ, ಖುಷಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಟಾಂಗಾ ವಾಲಾಗಳಿಗೆ ಮತ್ತು ಪ್ರವಾಸಿ ಮಾರ್ಗದರ್ಶಿಗಳಿಗೆ ರೂಟ್‌ ಮ್ಯಾಪ್‌ ಹಾಕಿಕೊಡಲಾಗುವುದು. ಆ ಪ್ರಕಾರ ಪ್ರವಾಸಿಗರಿಗೆ ಟಾಂಗಾದಲ್ಲಿ ಸುತ್ತಾಡಿಲು ಮಾರ್ಗದರ್ಶನ ನೀಡಲಾಗುವುದು ಎಂದರು.

ಹೆರಿಟೇಜ್‌ ವಾಕ್‌ ಮೂಲಕ ಇದುವರೆಗೆ 25 ಸ್ಮಾರಕಗಳಿಗೆ ಭೇಟಿ ನೀಡಲಾಗಿದೆ. ರೂಟ್‌ ಮ್ಯಾಪ್‌ ಮಾಡಲು ಯೋಜನೆ ರೂಪಿಸಲು ಟಾಂಗಾದಲ್ಲಿ ಸುತ್ತಾಡಲಾಗಿದೆ ಎಂದು ತಿಳಿಸಿದರು.

ಸ್ಮಾರಕ ಸ್ವಚ್ಛತಾ ಕಾರ್ಯ:ಮಹಾನಗರ ಪಾಲಿಕೆಯಿಂದ ಕೈಗೊಂಡಿರುವ ನಗರದ ಐತಿಹಾಸಿಕ ಕರಿಮುದ್ದೀನ್ ಮಸೀದಿ, ಕೋಟೆಗೋಡೆ ಆವರಣದ ಸ್ವಚ್ಛತಾ ಕಾರ್ಯವನ್ನು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ವೀಕ್ಷಿಸಿದರು.

ಸ್ಮಾರಕಗಳ ಬಳಿ ಸ್ವಚ್ಛತೆ ಎಂಬುದು ದೊಡ್ಡ ಸವಾಲಾಗಿದೆ. ನಗರದ ಚಿತ್ರಣವೂ ಕೆಟ್ಟಿದೆ. ಮಹಾನಗರ ಪಾಲಿಕೆ ಸಿಬ್ಬಂದಿ ನೆರವಿನೊಂದಿಗೆ ಸ್ವಚ್ಛತಾ ಕಾರ್ಯ ನಡೆಯುತ್ತಿದೆ ಎಂದರು.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ಸೇರಿಕೊಂಡು ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಜನರ ಸಹಕಾರದೊಂದಿಗೆ ದೊಡ್ಡ ಮಟ್ಟದಲ್ಲಿ ಈ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ. ಸ್ಮಾರಕಗಳ ಒಳಭಾಗದಲ್ಲಿ ಎಎಸ್‌ಐನವರು ಸ್ವಚ್ಛತಾ ಕಾರ್ಯ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.

ಮನವಿ: ನಗರದ ಗಗನ್ ಮಹಲ್‌ನಲ್ಲಿ ಬೆಳಿಗ್ಗೆ ವಾಯು ವಿಹಾರಕ್ಕೆ ಅವಕಾಶ ಕಲ್ಪಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿ ಅವರ ಬಳಿ ಮನವಿ ಮಾಡಿದರು.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ಈ‌ ಸಂಬಂಧ ಚರ್ಚಿಸಿ, ಅವಕಾಶ ನೀಡಲು ತಿಳಿಸಲಾಗುವುದು ಎಂದರು.

ಅಲ್ಲದೇ, ಪ್ರತಿದಿನ ಬೆಳಿಗ್ಗೆ 5ರಿಂದ 8ರ ವರೆಗೆ ಗಗನ್ ಮಹಲ್ -ಆನಂದ ಮಹಲ್ ಎದುರಿನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸುವ ಮೂಲಕ ವಾಯು ವಿಹಾರಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಅವರೊಂದಿಗೆ ವಿಜಯಪುರ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ಮಹಾನಗರ ಪಾಲಿಕೆ ಆಯುಕ್ತ ವಿಜಯ್ ಮೆಕ್ಕಳಕಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಮಯೂರ ಆದಿಲ್ ಶಾಹಿ ಹೋಟೆಲ್ ವ್ಯವಸ್ಥಾಪಕ ಸುನೀಲ್ ಕುಮಾರ್ ಎಸ್, ಬಿಜಾಪುರ ರೋಟರಿ ಕ್ಲಬ್ ಮಾನ್ಯುಮೆಂಟ್ ಹೆರಿಟೇಜ್ ಸಿಟಿ ಅಧ್ಯಕ್ಷ ಪೀಟರ್ ಅಲೆಕ್ಝಾಂಡರ್, ಅಮಿನ್ ಹುಲ್ಲೂರು, ಇಮಾಮ್ ಹುಸೇನ್ ಹುಲ್ಲೂರು, ಸುಭಾಷ್ ವಿಕ್ರಂ, ಪ್ರವಾಸೋದ್ಯಮ ಇಲಾಖೆ ಸಮಾಲೋಚಕ ಅನಿಲ್ ಕುಮಾರ ಬಣಜಿಗಾರ, ಗೈಡ್ ಉಮೇಶ ರಾಠೋಡ ಮತ್ತಿತರರು ಇದ್ದರು.

ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸ್ಮಾರಕಗಳ ಸ್ವಚ್ಛತೆ, ನಿರ್ವಹಣೆಗೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಜಂಟಿಯಾಗಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದೆ. ನಗರದ ಜನರು ಈ ಕಾರ್ಯದಲ್ಲಿ ಕೈಜೋಡಿಸಬೇಕು

– ಪಿ.ಸುನೀಲ್‌ ಕುಮಾರ್‌, ಜಿಲ್ಲಾಧಿಕಾರಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT