ಭಾನುವಾರ, ಆಗಸ್ಟ್ 14, 2022
28 °C
ಎಡ, ಪ್ರಜಾಸತ್ತಾತ್ಮಕ ಪಕ್ಷಗಳ ಒಕ್ಕೂಟದಿಂದ ಪ್ರತಿಭಟನೆ

ವಿಜಯಪುರ: ಸಮರ್ಪಕ ಪರಿಹಾರ ಪ್ಯಾಕೇಜ್‌ಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೋವಿಡ್ ಹಾಗೂ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸಮರ್ಪಕ ಪರಿಹಾರ ಪ್ಯಾಕೇಜ್‍ ನೀಡುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಮಂಗಳವಾರ ಎಡ ಹಾಗೂ ಪ್ರಜಾಸತ್ತಾತ್ಮಕ ಪಕ್ಷಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ಹಕ್ಕೊತ್ತಾಯಗಳು: ಉಚಿತ ಹಾಗೂ ಸಾರ್ವತ್ರಿಕ ಲಸಿಕೀಕರಣಕ್ಕೆ ಕೂಡಲೇ ಕ್ರಮವಹಿಸಬೇಕು. ಕೋವಿಡ್‌ನಿಂದ ಸಾವಿಗೀಡಾದ ಎಲ್ಲರಿಗೆ ಮತ್ತು ಅನಾಥ ಮಕ್ಕಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಆದಾಯ ತೆರಿಗೆಯಡಿ ಬಾರದ ಎಲ್ಲ ಕುಟುಂಬಗಳಿಗೆ ಮಾಸಿಕ ತಲಾ 10 ಕೆ.ಜಿ ಸಮಗ್ರ ಆಹಾರಧಾನ್ಯ ಮತ್ತು ಆರೋಗ್ಯ ಸುರಕ್ಷತಾ ಸಾಮಗ್ರಿಗಳ ಪೊಟ್ಟಣ ನೀಡಬೇಕು.

ಕೇಂದ್ರ ಸರ್ಕಾರದ ಸಹಾಯ ಪಡೆದು ₹ 10 ಸಾವಿರ ನೆರವನ್ನು ಕೋವಿಡ್ ನಿಯಂತ್ರಣಕ್ಕೆ ಬರುವವರೆಗೆ ನೀಡಬೇಕು. ದಲಿತರು, ಬಡವರು ವಾಸಿಸುವ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್‍ ಆರಂಭಿಸಬೇಕು. ಬಡವರಿಗೆ ನೀಡಲಾಗುವ ಪಡಿತರ ಕಡಿತವನ್ನು ವಾಪಾಸ್‌ ಪಡೆಯಬೇಕು.

ಹೊಲಗಳಲ್ಲಿಯೇ ಕೊಳೆತು ಹೋದ ಹೂ, ಹಣ್ಣು, ಆಲುಗಡ್ಡೆ, ಈರುಳ್ಳಿ ಮುಂತಾದ ಬೆಳೆಗಳಿಗೆ ಎಕರೆಗೆ ಕನಿಷ್ಠ ₹25 ಸಾವಿರ ಒದಗಿಸಬೇಕು ಮತ್ತು ರಾಜ್ಯದ ರೈತರು, ಕೂಲಿಕಾರರು, ಕಾರ್ಮಿಕರು, ಕಸುಬುದಾರರು, ದಲಿತರು, ಆದಿವಾಸಿಗಳು, ಅಲ್ಪ ಸಂಖ್ಯಾತರು ಮತ್ತು ಮಹಿಳೆಯರ ಎಲ್ಲ ರೀತಿಯ ಸಾಲಗಳನ್ನು ಕೇರಳದ ಋಣ ಮುಕ್ತ ಕಾಯ್ದೆ ಮಾದರಿಯಲ್ಲಿ ಮನ್ನಾ ಮಾಡಬೇಕು.

ಕಾರ್ಮಿಕರಿಗೆ ಲಾಕ್‍ಡೌನ್ ಅವಧಿಯ ವೇತನ ಮತ್ತು ಉದ್ಯೋಗ ರಕ್ಷಿಸಲು ಅಗತ್ಯ ಆದೇಶ ಹೊರಡಿಸಿ ಜಾರಿಗೊಳಿಸಬೇಕು.

ಉದ್ಯೋಗ ಖಾತ್ರಿಯನ್ನು ನಗರಗಳಿಗೆ ಹಾಗೂ 200 ದಿನಗಳಿಗೆ ವಿಸ್ತರಿಸಬೇಕು. ಕೂಲಿಯನ್ನು ಕೃಷಿ ರಂಗದ ವೇತನದಂತೆ ₹424ಕ್ಕೆ ಹೆಚ್ಚಿಸಬೇಕು.

ಕೋವಿಡ್ ಮುಂಚೂಣಿಯ ಎಲ್ಲ ಕಾರ್ಯಕರ್ತರಿಗೆ ವಿಮೆ ಸೌಲಭ್ಯ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಮಸಣ ಕೆಲಸಗಾರರು, ಮುನಿಸಿಪಲ್ ಮುಂತಾದ ಶುಚಿ ಕಾರ್ಯದಲ್ಲಿ ತೊಡಗಿದವರಿಗೂ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಸಿಪಿಐ(ಎಂ)ನ ಮುಖಂಡ ಭೀಮಸಿ ಕಲಾದಗಿ, ಎಸ್‍ಯುಸಿಐ(ಸಿ)ನ ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನ್‍ ರೆಡ್ಡಿ,  ಮುಖಂಡರಾದ ಸಿದ್ದಲಿಂಗ ಬಾಗೇವಾಡಿ, ಭರತ್‍ಕುಮಾರ ಎಚ್.ಟಿ. ಮಲ್ಲಿಕಾರ್ಜುನ್ ಎಚ್.ಟಿ. ಲಕ್ಷ್ಮಣ ಹಂದ್ರಾಣ, ಸುರೇಖಾ ರಜಪೂತ, ಸಂಗಪ್ಪ ಕಪಾಲಿ, ಮಹಾದೇವ ಲಿಗಾಡೆ, ಸುನೀಲ ಸಿದ್ರಾಮಶೆಟ್ಟಿ, ಕಾವೇರಿ ಬಿ.ಆರ್. ಈರಣ್ಣ ಬೆಳುಂಡಗಿ, ಸೋನುಬಾಯಿ ಬ್ಯಾಳಿ, ರಾಜ್ಮಾ ನಧಾಫ್, ರಾಜು ರಣದೀವೆ, ಆಕಾಶ ರಾಮತೀರ್ಥ, ಅಮೀತ ಬೀಳಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

*
ಯಾವುದೇ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳದೇ ಮೇಲಿಂದ ಮೇಲೆ ಲಾಕ್‍ಡೌನ್‍ ಮಾಡುತ್ತಿರುವುದರಿಂದ ಜನರು ಆರ್ಥಿಕವಾಗಿ ಅತ್ಯಂತ ಸಂಕಷ್ಟಕ್ಕೆ ಈಡಾಗಿದ್ದು, ಸೂಕ್ತ ಪರಿಹಾರ ನೀಡಬೇಕು.
–ಭೀಮಸಿ ಕಲಾದಗಿ, ಮುಖಂಡ, ಸಿಪಿಐ(ಎಂ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು