ವಿಜಯಪುರ: ರೇಷ್ಮೆ ಗೂಡಿನ ದರ ಕುಸಿತದಿಂದಾಗಿ ರೈತರಿಗೆ ನಷ್ಟವಾಗುತ್ತಿದ್ದು, ಸರ್ಕಾರ ರೇಷ್ಮೆ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಒತ್ತಾಯಿಸಿ ವಿಜಯಪುರ ಜಿಲ್ಲೆಯ ರೇಷ್ಮೆ ಬೆಳೆಗಾರರ ಸಂಘ ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.
ರೇಷ್ಮೆ ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ ಹಾಗೂ ಸಾವಯವ ಕೃಷಿ ಫೆಡರೇಶನ್ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ಅಂಬಲಿ ಮಾತನಾಡಿ, ‘ಜಿಲ್ಲೆಯಲ್ಲಿ 13 ತಾಲ್ಲೂಕುಗಳಿದ್ದು ಸದ್ಯ 2,100 ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ಕೃಷಿ ಮಾಡಲಾಗುತ್ತಿದೆ. ಸುಮಾರು 1,228 ಜನ ರೈತರು ರೇಷ್ಮೆ ವ್ಯವಸಾಯ ಮಾಡುತ್ತಿದ್ದಾರೆ. 3 ಲಕ್ಷ ಮೊಟ್ಟೆ ಚಾಕಿ ಮಾಡಿ 20
ಮೆಟ್ರಿಕ್ ಟನ್ ಗೂಡು ಬೆಳೆಯಲಾಗುತ್ತಿದೆ. ರೈತರು ರೇಷ್ಮೆ ಕೃಷಿಯಲ್ಲಿ ಸಾಕಷ್ಟು ಆರ್ಥಿಕ ಲಾಭ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ರೇಷ್ಮೆ ಗೂಡಿನ ಧಾರಣೆಯೂ ಕಡಿಮೆಯಾಗುತ್ತಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ರೇಷ್ಮೆ ಬೆಳೆಗಾರರಿಗೆ ಬೆಂಬಲ ಬೆಲೆ ನೀಡಬೇಕು’ ಎಂದು ಮನವಿ ಮಾಡಿದರು.
‘ಪ್ರಸ್ತುತ ರೈತರು ಪ್ರತಿ ಕೆಜಿ ರೇಷ್ಮೆಗೆ ₹250 ರಿಂದ ₹300 ವರೆಗೆ ಮಾರಾಟ ಮಾಡುತ್ತಿದ್ದು,ರೈತರಿಗೆ ನಷ್ಟವಾಗುತ್ತಿದೆ. ಆಳಿನ ಕೂಲಿ, ಚಾಕಿಯ ದರವು ಹೆಚ್ಚಾಗಿರುವುದರಿಂದ ರೈತರು ಸಂಕಷ್ಟದಲ್ಲಿ ಕಾಲ ಕಳೆಯುವಂತಾಗಿದೆ. ಆದ್ದರಿಂದ ಸರ್ಕಾರ ಸಿ.ಎಸ್.ಆರ್ ಹೈಬ್ರಿಡ್ ಗೂಡಿಗೆ ₹700 ಗಳನ್ನು ಸರಿದೂಗಿಸಬೇಕು, ಅಥವಾ ಪ್ರತಿ ಕೆಜಿಗೆ ₹250 ರಂತೆ ಪ್ರೋತ್ಸಾಹಧನ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.
ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಬೆಂಬಲ ಬೆಲೆ ಘೋಷಣೆ ಮಾಡಿ ರೈತರ ಹಿತ ಕಾಪಾಡಬೇಕು. ಒಂದು ವೇಳೆ ತಿರಸ್ಕರಿಸಿದಲ್ಲಿ ಮುಂದಿನ ದಿನದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಿದ್ದಪ್ಪ ಕಲಬುರ್ಗಿ, ಲೋಕೇಶ ಪವಾರ, ಸಂತೋಷ ಚವ್ಹಾಣ, ದಾವಲಮಲಿಕ ನದಾಫ, ರಾಜೇಸಾಬ ಚಪ್ಪರಬಂದ, ಮಲ್ಲಪ್ಪ ಕೊಲ್ದಾರ, ಸಿದ್ಧನಗೌಡ ಬಿರಾದಾರ, ಮಹಾಂತೇಶ ಮಂಡಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.