ಬುಧವಾರ, ಫೆಬ್ರವರಿ 1, 2023
16 °C
ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ ಧರಣಿ

ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ವೇತನ ಹೆಚ್ಚಳ, ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಸಾರಿಗೆ ನೌಕರರು ವಿಜಯಪುರ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ  ವಿವಿಧ ಬೇಡಿಕೆಗಳ ಮನವಿಯನ್ನು ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸಲ್ಲಿಸಿದರು.

ಸಾರಿಗೆ ನಿಗಮಗಳ ಆಡಳಿತ ಮಂಡಳಿ ಹಾಗೂ ಸಾರಿಗೆ ಇಲಾಖೆ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಮೂಲ ವೇತನಕ್ಕೆ ವಿ.ಡಿ.ಎ ವಿಲೀನಗೊಳಿಸಿ, ಪರಿಷ್ಕೃತ ಮೂಲ ವೇತನದ ಶೇ 25 ರಷ್ಟನ್ನು ಹೆಚ್ಚಳ ಮಾಡಿ, ವೇತನ ಶ್ರೇಣಿಯನ್ನು ಸಿದ್ಧಪಡಿಸಬೇಕು ಎಂದು ಒತ್ತಾಯಿಸಿದರು.

ಮುಷ್ಕರ ಸಂದರ್ಭದಲ್ಲಿ ಸೇವೆಯಿಂದ ವಜಾಗೊಂಡ ನೌಕರರನ್ನು ಯಾವುದೇ ಷರತ್ತಿಲ್ಲದೇ ಮರುನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಮುಷ್ಕರದ ಸಂದರ್ಭದಲ್ಲಿ ವರ್ಗಾವಣೆ ಶಿಕ್ಷೆಗೆ ಒಳಗಾದ ಸಿಬ್ಬಂದಿ, ನೌಕರರನ್ನು ಮಾತೃ ಅಥವಾ ಮೂಲ ಘಟಕಕ್ಕೆ  ವರ್ಗಾವಣೆ ಮಾಡಬೇಕು, ಹೆಚ್ಚುವರಿ ಕೆಲಸದ ಅವಧಿಗೆ ಓವರ್ ಟೈಮ್ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.

ಆಡಳಿತ ವರ್ಗ ಏಕಪಕ್ಷೀಯ ನಿರ್ಧಾರಗಳ ಮೂಲಕ ಕಾರ್ಮಿಕರ ಸೇವಾ ಪರಿಸ್ಥಿತಿಗಳ ಬದಲಾವಣೆಯನ್ನು ಜಾರಿಗೊಳಿಸುವುದನ್ನು ನಿಲ್ಲಿಸಬೇಕು, ಯಾವುದೇ ಸೇವಾ ಪರಿಸ್ಥಿತಿಗಳ ಬದಲಾವಣೆಯನ್ನು ಕಾರ್ಮಿಕ ಸಂಘನೆಟಗಳ ಜೊತೆ ಚರ್ಚಿಸಿ, ಉಭಯ ಪಕ್ಷಗಳಿಗೂ ಸಮ್ಮತವಾದ ಅಂಶಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಎಲ್ಲ ಸಾರಿಗೆ ನೌಕರರಿಗೂ ಪಾಳಿ ವ್ಯವಸ್ಥೆ ಜಾರಿ ಮಾಡಬೇಕು ಹಾಗೂ ರಿಯಾಯಿತಿ ದರದಲ್ಲಿ ಕ್ಯಾಂಟಿನ್ ಸೌಲಭ್ಯ ನೀಡಬೇಕು. ಮಹಿಳಾ ನೌಕರರಿಗೆ ಘಟಕ, ಬಸ್ ನಿಲ್ದಾಣಗಳಲ್ಲಿ, ಟರ್ಮಿನಲ್‍ಗಳಲ್ಲಿ ವಿಶ್ರಾಂತಿ ಕೊಠಡಿ, ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು,  ಶಿಶುಪಾಲನಾ ಕೇಂದ್ರ ವ್ಯವಸ್ಥೆ ಮಾಡಿಕೊಡಬೇಕು ಎಂದರು.

ಮಹಿಳಾ ನೌಕರರಿಗೆ ಅವರ ಆಯ್ಕೆಯ ಪ್ರಕಾರ ಗುಣಮಟ್ಟದ ಸೀರೆ ಅಥವಾ ಡ್ರೆಸ್ ಮೆಟರಿಯಲ್ ಕೊಡಬೇಕು, ಮಹಿಳಾ ನೌಕರರಿಗೆ ಯಾವುದೇ ಸಂದರ್ಭದಲ್ಲಿಯೂ 8 ಗಂಟೆಗಿಂತ ಅಧಿಕ ಅವಧಿಗೆ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದು ಒತ್ತಾಯಿಸಿದರು. 

ಭವಿಷ್ಯ ನಿಧಿ, ಪೆನ್ಷನ್‌ ಬದಲು ಸಂಸ್ಥೆಯೇ ತನ್ನ ಎಲ್ಲಾ ನಿವೃತ್ತ ನೌಕರರಿಗೂ ಸೂಕ್ತವಾದ ತುಟ್ಟಿ ಭತ್ಯೆ, ಎಲ್ಲ ಕಾರ್ಮಿಕರಿಗೂ ಗ್ರಾಚ್ಯುಟಿ ಪಾವತಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರ ವಾಯವ್ಯ ಮತ್ತು ಕಲ್ಯಾಣ ಕರ್ನಾಟಕ ನಿಗಮಗಳಲ್ಲಿ ಖಾಸಗಿಯವರಿಗೆ ವಹಿಸಲು ಉದ್ದೇಶಿಸಿರುವ ಮಾರ್ಗಗಳನ್ನು ಸಾರಿಗೆ ನಿಗಮಗಳಿಗೆ ಉಳಿಸಬೇಕು ಎಂದು ಒತ್ತಾಯಿಸಿದರು.

ಕೆಎಸ್‍ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಹೆಸರಿಲ್ಲಿ ಪ್ರತ್ಯೇಕವಾಗಿ ಸಿಬ್ಬಂದಿ ನೇಮಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ನಾಲ್ಕೂ ಸಾರಿಗೆ ನಿಗಮಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನೂ ಕೂಡಲೇ ಭರ್ತಿ ಮಾಡಬೇಕು ಎಂದರು.

ಯುನೈಟೆಡ್ ಇಂಡಿಯಾ ಇನ್‌ಶ್ಯೂರೆನ್ಸ್ ಕಂಪನಿಯ ವಿಮಾ ಮೊತ್ತವನ್ನು ನೌಕರರ ವೇತನದಿಂದ ಕಡಿತ ಮಾಡುವುದನ್ನು ನಿಲ್ಲಿಸಿ, ವಿಮಾ ಮೊತ್ತವನ್ನು ಸಂಸ್ಥೆ ಭರಿಸಬೇಕು ಹಾಗೂ ಈಗಾಗಲೇ ನೌಕರರ ವೇತನದಿಂದ ಕಡಿತ ಮಾಡಿರುವ ವಿಮಾ ಮೊತ್ತವನ್ನು ಆಯಾ ನೌಕರರಿಗೆ ಮರು ಪಾವತಿ ಮಾಡಬೇಕು ಎಂದು ಆಗ್ರಹಿಸಿದರು. 

ಎಂದಿನಂತೆ ಬಸ್‌ ಸಂಚಾರ:

ಜಿಲ್ಲೆಯಲ್ಲಿ ಬಸ್‌ಗಳು ಎಂದಿನಂತೆ ಸಂಚರಿಸಿದವು. ನಗರದಿಂದ ಇತರೆಡೆಗೆ ತೆರಳುವ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದರು. ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಮಾತ್ರ ಧರಣಿಯಲ್ಲಿ ಭಾಗವಹಿಸಿದ್ದರು.

ಮುಖಂಡರಾದ ಎಂ.ಎಚ್.ಅಗರಖೇಡ, ಆರ್.ಎಂ.ಮಡ್ಡಿಮನಿ, ಅರುಣಕುಮಾರ ಎಂ.ಹಿರೇಮಠ, ಎಸ್.ಆರ್.ಚವ್ಹಾಣ, ಆರ್.ಲಿಂಗದಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು